ಹುಬ್ಬಳ್ಳಿ:
ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಗೂಡ್ಸ್ ರೈಲು ವ್ಯವಸ್ಥಾಪಕ ಹುದ್ದೆ ಬಡ್ತಿ ಪರೀಕ್ಷೆಯನ್ನು ಜೂ. 25ರಂದು ನಡೆಸಲು ಮುಂದಾಗಿರುವ ಇಲಾಖೆ ಕನ್ನಡಕ್ಕೆ ಕೊಕ್ ನೀಡಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಡೆಸಲು ನಿರ್ಧರಿಸಿದೆ. ಹೀಗಾಗಿ ಪರೀಕ್ಷೆ ಮುಂದೂಡಬೇಕೆಂದು ಆಗ್ರಹಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯು, ಒಂದು ವೇಳೆ ಪರೀಕ್ಷೆ ನಡೆಸಿದರೆ ಪರೀಕ್ಷಾ ಕೇಂದ್ರಕ್ಕೆ ನುಗ್ಗಿ ರದ್ದುಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.ನಗರದಲ್ಲಿ ಈ ಕುರಿತು ಕರವೇ ರಾಜ್ಯ ಸಂಚಾಲಕ ಸುರೇಶ ಗೋವಣ್ಣವರ ಪತ್ರಿಕಾಗೋಷ್ಠಿ ನಡೆಸಿ ರೈಲ್ವೆ ಇಲಾಖೆ ವಿರುದ್ಧ ಗುಡುಗಿದರು.
ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ 179, ಬೆಂಗಳೂರು 112, ಮೈಸೂರ 139 ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಗೆ ಬಡ್ತಿ ಪರೀಕ್ಷೆಯನ್ನು ಮೂರು ವಿಭಾಗದಲ್ಲಿ ನಡೆಸುತ್ತಿದೆ. ಆದರೆ, ಕನ್ನಡ ಭಾಷೆ ಬಿಟ್ಟು ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ನಡೆಸಲು ಮುಂದಾಗಿದ್ದು ಕನ್ನಡಿಗರನ್ನು 2ನೇ ದರ್ಜೆಯ ಪ್ರಜೆಗಳಂತೆ ಕಾಣುತ್ತಿದೆ ಎಂದು ಕಿಡಿಕಾರಿದರು.ಜೂ.25ರಂದು ನಡೆಯುವ ಪರೀಕ್ಷೆಯನ್ನು ರದ್ದುಗೊಳಿಸಿ ಕನ್ನಡ ಭಾಷೆಯಲ್ಲೂ ನಡೆಸಲು ಅಧಿಸೂಚನೆ ಹೊರಡಿಸಿದ ನಂತರವೇ ಪರೀಕ್ಷೆ ನಡೆಸಬೇಕು. ಇಲ್ಲದಿದ್ದರೆ ಪರೀಕ್ಷೆ ಕೇಂದ್ರಕ್ಕೆ ನುಗ್ಗಿ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಎಚ್ಚರಿಸಿದರು. ಮಾರ್ಚ್ 17ರಂದು ಇದೇ ಪರೀಕ್ಷೆಯನ್ನು ಕನ್ನಡ ಭಾಷೆ ನಿರ್ಲಕ್ಷ್ಯ ಮಾಡಿದ ಹಿನ್ನಲೆ ಅಂದು ಕರವೇ ಪ್ರತಿಭಟನೆ ನಡೆಸಿತ್ತು. ಆಗ ಪರೀಕ್ಷೆ ರದ್ದು ಮಾಡಲಾಗಿತ್ತು, ಇಷ್ಟಾದರೂ ಬುದ್ಧಿ ಕಲಿಯದ ರೈಲ್ವೆ ಇಲಾಖೆ ತನ್ನ ಮೊಂಡುತನ ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರವೇ ರಾಜ್ಯ ಸಂಘಟನೆ ಸಂಚಾಲಕ ಬಸವನಗೌಡ ಪೊಲೀಸ್‌ಪಾಟೀಲ ಮಾತನಾಡಿ, ರೈಲ್ವೆ ಇಲಾಖೆ ಬಡ್ತಿ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲೂ ನಡೆಸಬೇಕು. ಇಲ್ಲದಿದ್ದರೆ ಪರೀಕ್ಷೆ ನಡೆಸಲು ಬಿಡುವುದಿಲ್ಲ ಎಂದರು.
ಸಂಘಟನೆ ಹಿರಿಯ ಮುಖಂಡ ಹನಮಂತಪ್ಪ ಮೇಟಿ ಮಾತನಾಡಿ, ಕನ್ನಡಿಗರಿಗೆ ಅನ್ಯಾಯವಾಗುತ್ತಿದ್ದರೂ ರಾಜ್ಯದ ಸಂಸದರು ಮೌನ ವಹಿಸಿದ್ದಾರೆ. ಅವರು ಕನ್ನಡಿಗರೋ ಅಥವಾ ಉತ್ತರ ಭಾರತದವರೋ ಎಂಬುದನ್ನು ಸ್ಪಷ್ಟಪಡಿಸಬೇಕು. ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಇದು ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.
ಜೂ. 25ರಂದು ನಡೆಯುವ ಪರೀಕ್ಷೆ ಮುಂದೂಡಿ ಕನ್ನಡ ಭಾಷೆ ಸೇರಿಸಿ ಹೊಸ ವೇಳಾಪಟ್ಟಿ ಪ್ರಕಟಿಸಬೇಕು. ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕು. ಕನ್ನಡಿಗರ ಭಾಷಾ ಹಕ್ಕು ಉಲ್ಲಂಘಿಸುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ರೆಹಮಾನ್ ಹೊಳಿ, ಸತೀಶಗೌಡ ಮುದಿಗೌಡರ, ಸಾಗರ ಗಾಯಕವಾಡ ಪತ್ರಿಕಾಗೋಷ್ಠಿಯಲ್ಲಿದ್ದರು.
ಹಿಂದೆ ಪರೀಕ್ಷೆ ರದ್ದಾಗಿದ್ದ ಹುದ್ದೆಗಳಿಗೆ ಪರೀಕ್ಷೆ !ಇದೇ ಹುದ್ದೆಗಳಿಗೆ ಮಾ.17ರಂದು ಕನ್ನಡ ಬಿಟ್ಟು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಷ್ಟೇ ಪರೀಕ್ಷೆ ನಡೆಸಲು ಮುಂದಾಗಿತ್ತು. ಆಗ "ಕನ್ನಡಪ್ರಭ " ವಿಶೇಷ ವರದಿ ಪ್ರಕಟಿಸಿತ್ತು. ವರದಿ ಗಮನಿಸಿ ಕರವೇ ಪರೀಕ್ಷೆ ಕೇಂದ್ರಗಳಿಗೆ ಮುತ್ತಿಗೆ ಹಾಕಿ ಪರೀಕ್ಷೆ ರದ್ದುಪಡಿಸಿತ್ತು. ಇದೀಗ ಮತ್ತೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲೇ ಪರೀಕ್ಷೆ ನಡೆಸಲು ಮುಂದಾಗಿದೆ. ಇದೀಗ ಮತ್ತೆ ಕರವೇ ಪ್ರತಿಭಟನೆ ನಡೆಸಲು ಸಿದ್ಧವಾಗಿದೆ.