ಸಾರಾಂಶ
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಪುತ್ರ ಕಾಂತೇಶ ಅವರಿಗೆ ಹಾವೇರಿ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಸಿಗದಿರುವುದಕ್ಕೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲೂ ಅದರ ಬಿಸಿ ತಟ್ಟಿದೆ.
ಹುಬ್ಬಳ್ಳಿ:
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಪುತ್ರ ಕಾಂತೇಶ ಅವರಿಗೆ ಹಾವೇರಿ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಸಿಗದಿರುವುದಕ್ಕೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲೂ ಅದರ ಬಿಸಿ ತಟ್ಟಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುತ್ತಣ್ಣವರ, ಕಳೆದ ಹಲವು ವರ್ಷಗಳಿಂದ ಬಿಜೆಪಿಯಲ್ಲಿ ಕುರುಬರಿಗೆ ರಾಜಕೀಯ ಸ್ಥಾನಮಾನ ನೀಡುವಲ್ಲಿ ಅನ್ಯಾಯ ಮಾಡಲಾಗುತ್ತಿದೆ. ಅದರಂತೆ ಈಗ ಕೆ.ಎಸ್. ಈಶ್ವರಪ್ಪ ಪುತ್ರ ಕಾಂತೇಶಗೆ ಗದಗ-ಹಾವೇರಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡದೇ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿದ್ದು ಖಂಡನೀಯ. ತಕ್ಷಣವೇ ಹೈಕಮಾಂಡ್ ಟಿಕೆಟ್ ಬದಲಾಯಿಸಿ ಕಾಂತೇಶ ಅವರಿಗೆ ಕೊಡಬೇಕು. ಇಲ್ಲದಿದ್ದಲ್ಲಿ ಈ ಚುನಾವಣೆಯಲ್ಲಿ ಹಿಂದುಳಿದ ವರ್ಗದವರು ಬಂಡಾಯವೆದ್ದು ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.ರಾಜ್ಯದ ಇತಿಹಾಸದಲ್ಲಿ ಧಾರವಾಡ ಜಿಲ್ಲೆಯಲ್ಲಿ ಈ ವರೆಗೆ ಬಿಜೆಪಿಯಿಂದ ಕುರುಬ ಸಮಾಜಕ್ಕೆ ಒಂದು ಬಾರಿಯೂ ಟಿಕೆಟ್ ನೀಡಿಲ್ಲ. ಇದನ್ನು ಗಮನಿಸಿದರೆ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಪರಿಸ್ಥಿತಿ ಬಿಜೆಪಿಯಲ್ಲಿ ಹೇಗಿದೆ ಎಂದು ಗೊತ್ತಾಗಲಿದೆ. ಇದನ್ನೆಲ್ಲ ಪರಿಗಣನೆಗೆ ತೆಗೆದುಕೊಂಡು ಈ ಬಾರಿಯಾದರೂ ಲೋಕಸಭಾ ಮತಕ್ಷೇತ್ರಗಳಲ್ಲಿ ಕುರುಬ ಸಮಾಜದ ಮುಖಂಡರಿಗೆ ಟಿಕೆಟ್ ನೀಡಬೇಕಿತ್ತು. ಆದರೆ, ಈ ಬಾರಿಯೂ ನಮ್ಮ ಸಮಾಜದ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.ಕೆ.ಎಸ್. ಈಶ್ವರಪ್ಪ ಅವರ ಮಾರ್ಗದರ್ಶನ, ಕರ್ನಾಟಕ ಕುರುಬ ಎಸ್ಟಿ ಮೀಸಲಾತಿ ಹೋರಾಟ ಸಮಿತಿಯ ಹಿರಿಯರ ಮಾರ್ಗದರ್ಶನ ಹಾಗೂ ಕರ್ನಾಟಕ ಪ್ರದೇಶ ಕುರುಬರ ಹಿರಿಯ ನಾಯಕರ ನಿರ್ದೇಶನದಂತೆ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ. ಹಾವೇರಿಗೆ ಕಾಂತೇಶಗೆ ಟಿಕೆಟ್ ನೀಡಿದರೆ ತಾವು ಕಣಕ್ಕಿಳಿಯುವುದಿಲ್ಲ ಎಂದರು.
ಈ ವೇಳೆ ಕರ್ನಾಟಕ ಕುರುಬರ ಸಂಘದ ಅಣ್ಣಿಗೇರಿ ತಾಲೂಕು ಅಧ್ಯಕ್ಷ ನಿಂಗಪ್ಪ ಬಂಡೆಪ್ಪನವರ, ಸಮಾಜದ ಮುಖಂಡ ಯಲ್ಲಪ್ಪ ಕುಂದಗೋಳ, ಕುರುವಿನಶೆಟ್ಟಿ ಸಮಾಜದ ಕಲಘಟಗಿ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಪಡೇಸೂರ, ಮರಾಠ ಸಮಾಜದ ಮುಖಂಡ ಯಲ್ಲಪ್ಪ ಭೋಸ್ಲೆ, ಚಂದ್ರಣ್ಣ ಗೋಕಾಕ ಸೇರಿದಂತೆ ಹಲವರಿದ್ದರು.