ಕನಕಪುರ: ರಾಜ್ಯ ಸರ್ಕಾರ ಕಾವೇರಿ ವಿಷಯದಲ್ಲಿ ರೈತಪರ, ಜನಪರ ಕಾಳಜಿ ತೋರದೆ ಉಡಾಫೆ ಹೇಳಿಕೆಗಳನ್ನು ನೀಡುತ್ತಾ ರಾಜ್ಯದ ಜನರಿಗೆ ಮೋಸ ಮಾಡುತ್ತಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರರ ಕುಮಾರಸ್ವಾಮಿ ಆರೋಪಿಸಿದರು.
ಕನಕಪುರ: ರಾಜ್ಯ ಸರ್ಕಾರ ಕಾವೇರಿ ವಿಷಯದಲ್ಲಿ ರೈತಪರ, ಜನಪರ ಕಾಳಜಿ ತೋರದೆ ಉಡಾಫೆ ಹೇಳಿಕೆಗಳನ್ನು ನೀಡುತ್ತಾ ರಾಜ್ಯದ ಜನರಿಗೆ ಮೋಸ ಮಾಡುತ್ತಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರರ ಕುಮಾರಸ್ವಾಮಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯಕ್ಕೆ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಅರ್ಥ ಮಾಡಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಹಿಂದಿನಿಂದಲೂ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗುತ್ತಾ ಬರುತ್ತಿದ್ದರು. ನಮ್ಮ ರಾಜ್ಯದ ಸಂಸದರು ಹಾಗೂ ಶಾಸಕರು ಕಣ್ಣು ಮುಚ್ಚಿ ಕುಳಿತಿರುವುದು ದುರಂತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಮಿಳುನಾಡು ಸರ್ಕಾರ ಸರ್ವ ಪಕ್ಷ ಸಭೆ ಕರೆದು ಒಗ್ಗಟ್ಟನ್ನು ಪ್ರದರ್ಶನ ಮಾಡಿಕೊಳ್ಳುತ್ತಿದೆ. ಆದರೆ ಕರ್ನಾಟಕ ಸರ್ಕಾರ ಯಾವುದೇ ಸರ್ವ ಪಕ್ಷ ಸಭೆಯನ್ನು ಕರೆಯದೆ ರಾಜ್ಯದ ಉಪಮುಖ್ಯಮಂತ್ರಿಗಳು ಕಾವೇರಿ ನದಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ಇಡೀ ದಕ್ಷಿಣ ಭಾರತದ ಸ್ವತ್ತು ಎಂದು ಹೇಳಿಕೆ ನೀಡಿ ಕಾವೇರಿ ನೀರು ಪ್ರಾಧಿಕಾರದ ಮಾತಿನಂತೆ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕಾವೇರಿ ಸಮಸ್ಯೆಯನ್ನು ಬಗೆಹರಿಸುವವರೆಗೂ ನಿರಂತರವಾಗಿ ತಾಲೂಕಿನಲ್ಲಿರುವ ರೈತಪರ ಹಾಗೂ ಕನ್ನಡಪರ ಸಂಘಟನೆಗಳ ಸಹಕಾರ ಮತ್ತು ಜನತೆಯ ಬೆಂಬಲದೊಂದಿಗೆ ಚಳವಳಿಯನ್ನು ಮುಂದುವರಿಸಲಾಗುವುದು. ಜೊತೆಗೆ ಈ ವರ್ಷದ ದೀಪಾವಳಿ ಹಬ್ಬದಲ್ಲಿ ತಮಿಳುನಾಡಿನ ಪಟಾಕಿಗಳನ್ನು ನಾವು ಯಾರು ಖರೀದಿಸಬಾರದು. ಈ ಮೂಲಕ ಕುಡಿಯುವ ನೀರಿನ ವಿಷಯದಲ್ಲಿ ತಗಾದೆ ತೆಗೆಯುತ್ತಿರುವ ತಮಿಳುನಾಡಿಗೆ ತಕ್ಕ ಪಾಠ ಕಲಿಸೋಣ ಎಂದು ಮನವಿ ಮಾಡಿದರು. ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ರಾಜ್ಯ ಸರ್ಕಾರ ಈಗಾಗಲೇ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡುತ್ತಾರೆ. ರೈತರ ಜೀವನದಲ್ಲಿ ಆಟ ಆಡುತ್ತಿದೆ. 7 ಗಂಟೆ ವಿದ್ಯುತ್ ನೀಡುತ್ತಿದ್ದ ಸರ್ಕಾರ, ಈಗ 4 ಗಂಟೆ ವಿದ್ಯುತ್ ನೀಡುತ್ತಿದೆ. ನೀಡುವ 4 ಗಂಟೆಯಲ್ಲೂ ಬೆಳಗಿನ ಜಾವ 2 ಗಂಟೆ, ರಾತ್ರಿ ವೇಳೆ 2 ಗಂಟೆ ನೀಡುತ್ತಿರುವುದರಿಂದ ಈಗಾಗಲೇ ಬರಗಾಲದಿಂದ ತತ್ತರಿಸಿ ಹೋಗಿರುವ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವಂತಾಗಿದೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ನಲ್ಲಹಳ್ಳಿ ಶ್ರೀನಿವಾಸ್, ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್, ಜಯ ಕರ್ನಾಟಕ ಸಂಘಟನೆ ತಾ.ಅಧ್ಯಕ್ಷ ವೀರೇಶ್, ಜಯ ಕರ್ನಾಟಕ ಜನಪರ ವೇದಿಕೆ ಸುರೇಶ್, ರೇಷ್ಮೆ ಉತ್ಪಾದಕ ಕಂಪನಿಯ ರಾಮಕೃಷ್ಣ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಶಿಕುಮಾರ್,ಸಾಗರ್, ಪುರುಷೋತ್ತಮ್ ಉಪಸ್ಥಿತರಿದ್ದರು. ಕೆ ಕೆ ಪಿ ಸುದ್ದಿ 01: ಕನಕಪುರದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರರ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.