ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷಿ ಅಧಿಕಾರಿ ಮತ್ತು ಸಹಾಯ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಿಯಮಬಾಹಿರ ಅರ್ಹತೆಗಳನ್ನು ಸೇರಿಸಿರುವುದನ್ನು ಖಂಡಿಸಿ ಕೃಷಿ ಮತ್ತು ಕೃಷಿ ಸಂಬಂಧಿತ ಪದವಿ ವಿದ್ಯಾರ್ಥಿಗಳು, ಪದವೀಧರರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ವಿದ್ಯಾರ್ಥಿಗಳು ರೈತರು ಹಾಗೂ ರೈತರ ಮಕ್ಕಳಿಗೆ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಘೋಷಣೆ ಮೊಳಗಿಸಿದರು. ಹತ್ತು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ಇದುವರೆಗೂ ವಿದ್ಯಾರ್ಥಿಗಳ ಅಹವಾಲುಗಳನ್ನು ಯಾರೊಬ್ಬರೂ ಆಲಿಸುತ್ತಿಲ್ಲ. ಸರ್ಕಾರದ ವರ್ತನೆ ಹೀಗೆ ಮುಂದುವರೆದರೆ ಐದು ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ವಿದ್ಯಾರ್ಥಿಗಳ ಪರವಾಗಿ ಕೆ.ಇಶಾಂತ್‌ಗೌಡ ಮಾತನಾಡಿ, ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ರೈತರಿಗೆ ತಾಂತ್ರಿಕ ಸಲಹೆ, ಬೆಳೆ ನಿರ್ವಹಣೆ, ಮಣ್ಣಿನ ಆರೋಗ್ಯ, ಕೀಟ ಮತ್ತು ರೋಗ ನಿಯಂತ್ರಣ, ಕೃಷಿ ವಿಸ್ತರಣಾ ಸೇವೆಗಳು, ವಿವಿಧ ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ ಹುದ್ದೆಗಳಾಗಿವೆ. ಈ ಹುದ್ದೆಗಳಿಗೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಈ ಹುದ್ದೆಗಳಿಗೆ ಕೃಷಿ ಸಂಬಂಧಿತ ಪದವೀಧರರನ್ನು ಮಾತ್ರ ಪರಿಗಣಿಸಬೇಕು ಎಂದು ಕರ್ನಾಟಕ ಕೃಷಿ ಸೇವೆಗಳ ನಿಯಮಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ರಾಜ್ಯಸರ್ಕಾರ ಈ ಹುದ್ದೆಗಳಿಗೆ ರೈ-ಟೆಕ್ ವಿಶ್ವವಿದ್ಯಾಲಯದ ಕೃಷಿ ಪದವೀಧರರನ್ನೂ ಅರ್ಹರೆಂದು ಪರಿಗಣಿಸಿದೆ. ಅಲ್ಲದೆ, ಬಯೋಟೆಕ್ನಾಲಜಿ ವಿಷಯದಲ್ಲಿ ಪದವಿ ಗಳಿಸಿದ ಇಂಜಿನಿಯರ್‌ಗಳನ್ನೂ ಅರ್ಹರೆಂದು ಸುತ್ತೋಲೆ ಹೊರಡಿಸಿರುವುದು ಕೃಷಿ ಪದವೀಧರರಿಗೆ ಮಾಡುತ್ತಿರುವ ಘೋರ ಅನ್ಯಾಯ ಎಂದು ಟೀಕಿಸಿದು.


ಎಂಜಿನಿಯರಿಂಗ್ ಪದವೀಧರರು ಕೃಷಿ ತಾಂತ್ರಿಕ ಸಲಹೆ, ಬೆಳೆ ನಿರ್ವಹಣೆ, ಮಣ್ಣಿನ ಆರೋಗ್ಯ, ಕೀಟ ಮತ್ತು ರೋಗ ನಿಯಂತ್ರಣ, ಕೃಷಿ ವಿಸ್ತರಣಾ ಸೇವೆಗಳ ಬಗ್ಗೆ ಓದಿರುವುದೇ ಇಲ್ಲ. ರೈ-ಟೆಕ್ ವಿಶ್ವವಿದ್ಯಾನಿಲಯವನ್ನು ಬ್ಯಾನ್ ಮಾಡಿದ್ದರೂ ಅಲ್ಲಿ ಪದವಿ ಪಡೆದವರನ್ನು ಹುದ್ದೆಗಳಿಗೆ ಪರಿಗಣಿಸಲಾಗಿದೆ. ಇದನ್ನು ರಾಜ್ಯಸರ್ಕಾರ ತಕ್ಷಣವೇ ಕೈಬಿಟ್ಟು ಐಸಿಎಆರ್ ಮಾನ್ಯತೆ ಪಡೆದ ಕೃಷಿ ಮತ್ತು ಕೃಷಿ ಪದವೀಧರರಿಗೆ ಮಾತ್ರ ಅವಕಾಶ ನೀಡಬೇಕು. ಕರ್ನಾಟಕ ಕೃಷಿ ಸೇವೆಗಳ ಸಿ ಅಂಡ್ ಆರ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವಂತೆ ಒತ್ತಾಯಿಸಿದರು.

ಕರ್ನಾಟಕ ಮುಖ್ಯಮಂತ್ರಿಗಳು ಜಂತರ್‌ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪರ ಹೋರಾಡುವುದಲ್ಲ. ಇಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಬೇಕಿದೆ. ಅಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದರೆ, ಇಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವುದೇನು ಎಂದು ಪ್ರಶ್ನಿಸಿದರು.

ವಿದ್ಯಾರ್ಥಿನಿ ಲಕ್ಷ್ಮೀ ಮಾತನಾಡಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ರಾಜ್ಯಸರ್ಕಾರ, ಕೃಷಿ ಇಲಾಖೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕೃಷಿ ಆಯುಕ್ತರು, ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ, ಜ್ಞಾಪನಾ ಪತ್ರ, ಆಕ್ಷೇಪಣೆಗಳನ್ನು ಸಲ್ಲಿಸಿದ್ದರೂ ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂದು ದೂಷಿಸಿದರು.

ನ್ಯಾಯ ಸಮ್ಮತ ಬೇಡಿಕೆಗಳು ಈಡೇರುವವರೆಗೆ, ಕೃಷಿ ಶಿಕ್ಷಣದ ಘನತೆ ಕಾಪಾಡುವವರೆಗೆ, ಕೃಷಿ ಪದವೀಧರರಿಗೆ ನ್ಯಾಯ ದೊರೆಯುವವರೆಗೆ ಕೃಷಿ ಅಧಿಕಾರಿಗಳ ನೇಮಕಾತಿಯಲ್ಲಿನ ನಿಯಮಬಾಹೀರ ಅರ್ಹತೆಗಳನ್ನು ಹಿಂಪಡೆಯುವವರೆಗೆ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕೆ.ಎಸ್.ಚಿರಂತ್ ಪಟೇಲ್, ಪಿ.ತೇಜಸ್, ದೀಪ್ತಿ, ಹರ್ಷಿತಾ, ದಿಶಾ, ಮೌಲ್ಯ ಸೇರಿದಂತೆ ಇತರರಿದ್ದರು.