ಕೇಂದ್ರ ಬಿಜೆಪಿಯಿಂದ ರಾಜ್ಯದ ಜನತೆಗೆ ಅನ್ಯಾಯ-ಶಾಸಕ ಶಿವಣ್ಣನವರ

| Published : Apr 29 2024, 01:37 AM IST

ಕೇಂದ್ರ ಬಿಜೆಪಿಯಿಂದ ರಾಜ್ಯದ ಜನತೆಗೆ ಅನ್ಯಾಯ-ಶಾಸಕ ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಬಿಜೆಪಿ ಸರ್ಕಾರ ರಾಜ್ಯದ ಮೇಲೆ ಮಲತಾಯಿ ಧೋರಣೆ ತಳೆದಿದ್ದು, ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಿದೆ. ಈ ಚುನಾವಣೆ ಮೂಲಕ ಬಿಜೆಪಿಗೆ ಪಾಠ ಕಲಿಸುವ ಕಾಲ ಕೂಡಿ ಬಂದಿದ್ದು, ಜನಜಾಗೃತಿ ಮೂಡಿಸುವ ಮೂಲಕ ಬಿಜೆಪಿ ತಿರಸ್ಕರಿಸುವಂತೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಕರೆ ನೀಡಿದರು.

ಹಾವೇರಿ: ಕೇಂದ್ರ ಬಿಜೆಪಿ ಸರ್ಕಾರ ರಾಜ್ಯದ ಮೇಲೆ ಮಲತಾಯಿ ಧೋರಣೆ ತಳೆದಿದ್ದು, ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಿದೆ. ಈ ಚುನಾವಣೆ ಮೂಲಕ ಬಿಜೆಪಿಗೆ ಪಾಠ ಕಲಿಸುವ ಕಾಲ ಕೂಡಿ ಬಂದಿದ್ದು, ಜನಜಾಗೃತಿ ಮೂಡಿಸುವ ಮೂಲಕ ಬಿಜೆಪಿ ತಿರಸ್ಕರಿಸುವಂತೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಕರೆ ನೀಡಿದರು.ತಾಲೂಕಿನ ಕುಳೇನೂರು ಗ್ರಾಮದಲ್ಲಿ ನಡೆದ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ೧೦ ವರ್ಷಗಳಲ್ಲಿ ಬಿಜೆಪಿ ಸುಳ್ಳು ಹೇಳುತ್ತಲೇ ಬಂದಿದೆ. ಹುಸಿ ಭರವಸೆಗಳನ್ನೇ ನೀಡಿದೆ. ಆದರೆ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೇವಲ ೧೦ ತಿಂಗಳಲ್ಲಿ ಅಷ್ಟೂ ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ಜನಮನ ಗೆದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಯುವಕರಿದ್ದು, ಚುನಾವಣೆಯಲ್ಲಿ ಬೆಂಬಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ದಮ್ಮು, ತಾಕತ್ತು ಇದ್ದವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಹೋಗಿ ಬರ ಪರಿಹಾರ ಬಿಡುಗಡೆಗೊಳಿಸಿ ರೈತರ ಕಣ್ಣೀರು ಒರೆಸಲಿಲ್ಲ. ನಮ್ಮ ರಾಜ್ಯದ ರೈತರಿಗೆ ನ್ಯಾಯ ದೊರಕಿಸಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕಾಯಿತು. ಬರ ಪರಿಹಾರ ಬಿಡುಗಡೆ ಮಾಡಿ ರೈತರ ನೆರವಿಗೆ ಧಾವಿಸಿ ಎಂದರೂ ಕೇಂದ್ರ ಕಿವಿಗೊಡಲಿಲ್ಲ, ದಿಲ್ಲಿಗೆ ಹೋಗಿ ಪ್ರತಿಭಟನೆ ನಡೆಸಿದರೂ ಜಗ್ಗಲಿಲ್ಲ. ಇದೀಗ ಸುಪ್ರೀಂ ಕೋರ್ಟ್ ಹೇಳಿದ್ದಕ್ಕೆ ಕಾಟಾಚಾರಕ್ಕೆ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ. ರಾಜ್ಯದ ರೈತರಿಗೆ ಕೇಂದ್ರದ ಬಿಜೆಪಿ ಸರ್ಕಾರ ಮಾಡಿದ ದ್ರೋಹ, ಅನ್ಯಾಯಕ್ಕೆ ಪಾಠ ಕಲಿಸಲು ಜನ ಸಜ್ಜಾಗಿದ್ದಾರೆ ಎಂದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಮುಖಂಡರಾದ ಟಿಪ್ಪುಸುಲ್ತಾನ್ ಕಲಕೋಟಿ, ವೀರೇಶ ಮತ್ತಿಹಳ್ಳಿ, ಪ್ರಕಾಶಗೌಡ ಪಾಟೀಲ, ಸುರೇಶಗೌಡ ಪಾಟೀಲ, ನಿರ್ಮಲಾ ಹೊನ್ನತ್ತಿ, ಶಾಂತಪ್ಪ ಹಾವೇರಿ, ಗಣೇಶಪ್ಪ ಸವೂರ, ಹೊಳಿಯಪ್ಪ ಸೂರದ, ಸಣ್ಣಿಂಗಪ್ಪ ಪುರಲಿಂಗಣ್ಣವರ, ಸಿದ್ದಪ್ಪ ಲಮಾಣಿ, ವೀರಬಸಪ್ಪ ಕರೆಗೊಂಡ್ರ, ಹನುಮಂತಪ್ಪ ಕಟ್ಟಿಗೌಡ್ರ, ರುದ್ರಪ್ಪ ದಿಡಗೂರ, ನಿಂಗಪ್ಪ ನಿಂಬಕ್ಕನವರ ಇದ್ದರು. ಕಾಂಗ್ರೆಸ್ ಪಕ್ಷ ತಮ್ಮಂಥ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಸ್ಪರ್ಧೆಗೆ ಅವಕಾಶ ಕಲ್ಪಿಸಿದೆ. ಎಲ್ಲ ಶಾಸಕರೂ ಬೆನ್ನಿಗೆ ನಿಂತಿದ್ದಾರೆ. ಕಾರ್ಯಕರ್ತರು ಹುಮ್ಮಸ್ಸಿನಿಂದ ಗೆಲುವಿಗೆ ಶ್ರಮ ವಹಿಸಿದ್ದಾರೆ. ಈ ಚುನಾವಣೆ ಮೂಲಕ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಿ ಜೀವನದ ಕೊನೆ ಉಸಿರು ಇರುವವರೆಗೂ ಪ್ರಾಮಾಣಿಕವಾಗಿ ನಡೆದುಕೊಂಡು ಸೇವೆ ಸಲ್ಲಿಸುವೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.