ಹಾವೇರಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಜಿಎಸ್‌ಟಿ ಸಂಗ್ರಹಣೆಯಲ್ಲಿ ಕೊರತೆಯಾಗಿದ್ದು, ರಾಜ್ಯಕ್ಕೆ ವಾರ್ಷಿಕ ₹12ರಿಂದ ₹15 ಸಾವಿರ ಕೋಟಿ ನಷ್ಟವಾಗಿದೆ. ನಮಗೆ ಬರುವ ನ್ಯಾಯಯುತ ಪಾಲು ಸಿಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಸಾವಿರ ದಿನ ಪೂರೈಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ಉದ್ಘಾಟಿಸಿ, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.ಜೆಜೆಎಂನಲ್ಲಿ ₹15 ಸಾವಿರ ಕೋಟಿ ಇನ್ನೂ ಕೊಟ್ಟಿಲ್ಲ. ಈ ಅನುದಾನ ನೀಡಿದರೆ ರಾಜ್ಯದಲ್ಲಿ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತವೆ. ಹಲವು ಬಾರಿ ನಮ್ಮ ಹಕ್ಕು ಮಂಡಿಸಿದರೂ ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಮುಂದುವರೆದಿದೆ ಎಂದಿ ಸಿದ್ದರಾಮಯ್ಯ ವಾಕ್ಸಮರ ನಡೆಸಿದರು.
ರಾಜ್ಯದ ಜಿಡಿಪಿ ದೇಶದಲ್ಲೇ ನಂಬರ್ ಒನ್ ಆಗಿಸಿದ್ದು ನಮ್ಮ ಜನಪರ ಸರ್ಕಾರ. ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲೂ ರಾಜ್ಯ ದಾಖಲೆ ವೇಗದಲ್ಲಿ ಸಾಗುತ್ತಿದೆ. ಈ ಎಲ್ಲ ಸಾಧನೆ ಮತ್ತು ದಾಖಲೆಗಳನ್ನು ಕೇಂದ್ರ ಸರ್ಕಾರದ ಅನ್ಯಾಯದ ನಡುವೆಯೂ ಮಾಡಿ ತೋರಿಸಿದ್ದೇವೆ. ಬಿಜೆಪಿಯವರು ರಾಜ್ಯ ಸರ್ಕಾರ ದಿವಾಳಿಯಾಗಿದೆ, ಅಭಿವೃದ್ಧಿ ಕೆಲಸ ಆಗುತ್ತಿಲ್ಲ, ಖಜಾನೆ ಖಾಲಿಯಾಗಿದೆ ಎಂಬ ಸುಳ್ಳು ಆರೋಪ ಮಾಡುತ್ತಿದ್ದಾರೆ. 5 ಗ್ಯಾರಂಟಿಗಳ ಮೂಲಕ ₹1.18 ಲಕ್ಷ ಕೋಟಿಗಳನ್ನು ನೇರವಾಗಿ ಜನರ ಖಾತೆಗೆ ಹಾಕಿದ್ದೇವೆ. ದಿವಾಳಿಯಾಗಿದ್ದರೆ ಇದನ್ನು ಮಾಡಲು ಆಗುತ್ತಿರಲಿಲ್ಲ ಎಂದು ಹೇಳಿದರು.ಕ್ರಾಂತಿಕಾರಿ ಪ್ರಗತಿ: ಕಂದಾಯ ಇಲಾಖೆಗೆ ಕೃಷ್ಣ ಬೈರೇಗೌಡರು ಸಚಿವರಾದ ಮೇಲೆ ಸರ್ಕಾರದಲ್ಲಿ ಕ್ರಾಂತಿಕಾರಿ ಪ್ರಗತಿ ಆಗಿದೆ. ನಮ್ಮ ಸರ್ಕಾರ ಬಂದು 2 ವರ್ಷ 9 ತಿಂಗಳಾಗಿದೆ. ನಾವು ಕೊಟ್ಟ ಭರವಸೆಗಳಲ್ಲಿ 243 ಭರವಸೆಗಳನ್ನು ಈಡೇರಿಸಿದ್ದೇವೆ. ಉಳಿದ ಅವಧಿಯಲ್ಲಿ ಬಾಕಿ ಭರವಸೆಗಳನ್ನೂ ಈಡೇರಿಸಲಾಗುವುದು. ಆರ್ಥಿಕ ತಜ್ಞರ ಜತೆಗೆ ದಿನಪತ್ರಿಕೆಗಳು ಮತ್ತು ವಿಶ್ವವಿದ್ಯಾಲಯಗಳ ಅಧ್ಯಯನಗಳು ವ್ಯಕ್ತಪಡಿಸಿದ್ದ ಸದಾಭಿಪ್ರಾಯಗಳನ್ನು ಮುಖ್ಯಮಂತ್ರಿಗಳು ಓದಿ ವಿವರಿಸಿ, ಬಿಜೆಪಿಯವರು ಜನರನ್ನು ತಪ್ಪು ದಾರಿಗೆಳೆಯುವುದು ಖಂಡನೀಯ ಎಂದರು.
ನಮ್ಮ ಸರ್ಕಾರ 1000 ದಿನ ಯಶಸ್ವಿಯಾಗಿ ಆಡಳಿತ ನಡೆಸಿದ್ದು, ನುಡಿದಂತೆ ನಡೆಯುವುದು ಕಾಂಗ್ರೆಸ್ ಸರ್ಕಾರ ಮಾತ್ರ. ಎಲ್ಲ ಜಾತಿ, ಧರ್ಮ, ಭಾಷೆಯ ಜನರಿಗೆ ಸೇರಿದಂತಹ ಎಲ್ಲರನ್ನೊಳಗೊಂಡ ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರ ನಂಬಿಕೆಯಿರಿಸಿದೆ. ನಾವು ಅಸಮಾನತೆ ನೀಗಿಸುವ ಕಾಯಕದಲ್ಲಿ ತೊಡಗಿದ್ದೇವೆ. ಬಿಜೆಪಿಯವರು 4 ವರ್ಷ ಏನೂ ಮಾಡಿಲ್ಲ. ಬಿಜೆಪಿಯವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದರು.
ಸರ್ಕಾರ ಒಂದು ಸಾವಿರ ದಿನ ಪೂರೈಸಿದ್ದು, ಬಡವರು, ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರ ಪರವಾಗಿ ನಾವು ನಿಲ್ಲುತ್ತೇವೆ. ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ಪರಿಶೀಲಿಸಿ, ಜಿಲ್ಲೆಯ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಕೃಷ್ಣ ಬೈರೇಗೌಡ, ಶಿವಾನಂದ ಪಾಟೀಲ್, ಎಚ್.ಕೆ. ಪಾಟೀಲ್, ಸತೀಶ್ ಜಾರಕಿಹೊಳಿ, ಡಾ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ವಿಧಾನ ಪರಿಷತ್ತಿನಲ್ಲಿ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್, ಎಂ.ಬಿ. ಪಾಟೀಲ ಉಪಸ್ಥಿತರಿದ್ದರು.