ಶ್ರಾವಣ ಅತ್ಯಂತ ಪರಮ ಪವಿತ್ರ ಮಾಸ. ಈ ಅವಧಿಯಲ್ಲಿ ಪುರಾಣ- ಪುಣ್ಯಕಥೆ ಮತ್ತು ಪ್ರವಚನಗಳನ್ನು ಆಲಿಸುವುದರಿಂದ ಅಂತರಂಗ ಶುದ್ಧಿಯಾಗಿ ಮನುಷ್ಯನ ಮನಸ್ಸು ಪ್ರಸನ್ನ ಚಿತ್ತವಾಗಲು ಸಾಧ್ಯವಾಗುತ್ತದೆ ಎಂದು ಅಬ್ಬೆತುಮಕೂರು ಶ್ರೀ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ.ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಶ್ರಾವಣ ಅತ್ಯಂತ ಪರಮ ಪವಿತ್ರ ಮಾಸ. ಈ ಅವಧಿಯಲ್ಲಿ ಪುರಾಣ- ಪುಣ್ಯಕಥೆ ಮತ್ತು ಪ್ರವಚನಗಳನ್ನು ಆಲಿಸುವುದರಿಂದ ಅಂತರಂಗ ಶುದ್ಧಿಯಾಗಿ ಮನುಷ್ಯನ ಮನಸ್ಸು ಪ್ರಸನ್ನ ಚಿತ್ತವಾಗಲು ಸಾಧ್ಯವಾಗುತ್ತದೆ ಎಂದು ಅಬ್ಬೆತುಮಕೂರು ಶ್ರೀ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ.ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಭಾನುವಾರ, ಅಬ್ಬೆತುಮಕೂರಿನ ಶ್ರೀ ವಿಶ್ವರಾಧ್ಯರ ಅನುಗ್ರಹ ಕ್ಷೇತ್ರದಲ್ಲಿ ಶ್ರಾವಣ ಮಾಸದ ನಿಮಿತ್ತ ಪ್ರತಿದಿನ ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ 11ನೇ ದಿನದ ವಿಶೇಷ ಪೂಜಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶ್ರೀವಿಶ್ವಾರಾಧ್ಯರು ಅಷ್ಟಸಿದ್ಧಿ ಪುರುಷರಾಗಿ ಸಿದ್ಧಿಯನ್ನು ಸಾಧಿಸಿದ ಶಿವಯೋಗಿ ಗಳು. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕಾಮಧೇನು ಕಲ್ಪವೃಕ್ಷ ಅವರಾಗಿದ್ದಾರೆ. ಅವರಲ್ಲಿ ಯಾರು ಭಕ್ತಿ- ಭಾವದಿಂದ, ಶ್ರದ್ಧೆ-ನಿಷ್ಠೆಯಿಂದ ಭಜಿಸುತ್ತಾರೋ ಅವರಿಗೆ ಸಕಲ ಐಶ್ವರ್ಯಗಳನ್ನು ನೀಡಿ ಕರುಣಿಸಿ ಕಾಪಾಡುತ್ತಾನೆಂದು ಹೇಳಿದರು.

ಶ್ರಾವಣ ತಿಂಗಳಿನಲ್ಲಿ ಬಹಳಷ್ಟು ಜನ ಉಪವಾಸ ಆಚರಣೆಯ ವ್ರತ ನಿಯಮಗಳನ್ನು ಮಾಡುತ್ತಾರೆ. ಪುಣ್ಯಕ್ಷೇತ್ರಗಳ ದರ್ಶನವನ್ನು ಕೈಗೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಮನುಷ್ಯನ ಮನೋವಿಕಾರಗಳು ದೂರವಾಗಿ ಸಾತ್ವಿಕ ಸಂಪನ್ನತೆ ನೆಲೆಸಲು ಸಾಧ್ಯವಾಗುತ್ತದೆ. ಮನುಷ್ಯರಾಗಿ ಹುಟ್ಟಿ ಬಂದ ಮೇಲೆ ನಡೆ-ನುಡಿಯಲ್ಲಿ ಆಚಾರ- ವಿಚಾರಗಳಲ್ಲಿ ಸಮನ್ವಯಶೀಲತೆಯನ್ನು ಸಾಧಿಸಬೇಕು. ಅದಕ್ಕಾಗಿ ಸತ್ಸಂಗ, ಸದ್ವಿಚಾರಗಳು ಶ್ರಾವಣ ಮಾಸದಲ್ಲಿ ಮಾಡುವುದರಿಂದ ಅಂತರಂಗ ಶುದ್ಧಿ ಸಾಧ್ಯವಾಗುತ್ತದೆ ಎಂದರು.

ಶ್ರಾವಣ ಮಾಸ ಕೇವಲ ಸಾಂಕೇತಿಕ. ತಿಂಗಳಿಗೆ ಮಾತ್ರ ಸೀಮಿತವಾಗಬಾರದು. ಅದು ನಿತ್ಯ ನಿರಂತರವಾಗಿ ನಡೆಯಬೇಕು. ಒಳ್ಳೆಯ ವಿಚಾರಗಳನ್ನು ಶ್ರವಣ ಮಾಡಿ ಜೀವನದಲ್ಲಿ ಆಚರಣೆಗೆ ತಂದಾಗ ಮನುಷ್ಯ ಜೀವನ ಸಾರ್ಥಕವಾಗುತ್ತದೆ. ಜಾತಿ - ಮತ, ಪಂಥ-ಪಂಗಡಗಳನ್ನು ಮೀರಿ ಮಾನವತೆಯ ನೆಲೆಗಟ್ಟಿನ ಮೇಲೆ ಸಮ ಸಮಾಜ ನಿರ್ಮಾಣವಾಗಬೇಕೆಂಬುದು ಶ್ರೀ ವಿಶ್ವರಾಧ್ಯರ ಮನೋಬಯಕೆಯಾಗಿತ್ತು. ಅಂತೆಯೇ ಶ್ರೀಮಠದಲ್ಲಿ ಅವರು, ಇವರೆನ್ನದೆ ಸಕಲ ಜೀವಾತ್ಮರು ಶ್ರೀ ವಿಶ್ವರಾಧ್ಯರ ಸಂಭೂತರು ಎಂಬ ಸೌಹಾರ್ದ ಭಾವದಲ್ಲಿ ಕಾಣಲಾಗುತ್ತಿದೆ ಎಂದು ಡಾ.ಗಂಗಾಧರ ಶ್ರೀಗಳು ಆಶೀರ್ವಚನ ನೀಡಿದರು.

ಬೆಳಿಗ್ಗೆ ಶ್ರೀ ವಿಶ್ವರಾಧ್ಯರ ಕರ್ತೃ ಗದ್ದುಗೆಗೆ ವಿಶೇಷ ಮಹಾ ರುದ್ರಭಿಷೇಕವನ್ನು ನೆರವೇರಿಸಲಾಯಿತು. ಶ್ರಾವಣ ಮಾಸದ ವಿಶೇಷ ಪೂಜಾ ಸಮಾರಂಭದ ನಿಮಿತ್ತ ಆಗಮಿಸಿದ ಸಹಸ್ರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೀಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ಶಿವಶೇಖರ ಶಿವಾಚಾರ್ಯ ಸ್ವಾಮಿಗಳು,ಡಾ ಸುಭಾಷ್ಚಂದ್ರ ಕೌಲಗಿ, ಬಸವರಾಜ ಶಾಸ್ತ್ರಿ ಎಲೆಕೂಡಗಿ ಸೇರಿದಂತೆ ಅನೇಕ ಭಕ್ತರು ಇದ್ದರು.