ಕಾರ್ಯಾಗಾರಗಳಿಂದ ಕಲಾವಿದರಲ್ಲಿ ಹೊಸತನ

| Published : Apr 04 2024, 01:01 AM IST

ಸಾರಾಂಶ

ಶಾಸ್ತ್ರೀಯ ನೃತ್ಯ ಕಲೆಗಳು ಗುರುಮುಖೇನ ಕಲಿಯುವವು. ಅದರಲ್ಲಿ ನಾವಿನ್ಯತೆ ತರಲು ಬೇರೆ ಬೇರೆ ಭಾಗದ ನುರಿತ ಹಿರಿಯ ನೃತ್ಯ ಗುರುಗಳಿಂದ ಕಾರ್ಯಾಗಾರ ಏರ್ಪಡಿಸುವುದು ಅಗತ್ಯ.

ಧಾರವಾಡ:

ಶಾಸ್ತ್ರೀಯ ನೃತ್ಯ ಕಲೆಗಳು ಗುರುಮುಖೇನ ಕಲಿಯುವವು. ಅದರಲ್ಲಿ ನಾವಿನ್ಯತೆ ತರಲು ಬೇರೆ ಬೇರೆ ಭಾಗದ ನುರಿತ ಹಿರಿಯ ನೃತ್ಯ ಗುರುಗಳಿಂದ ಕಾರ್ಯಾಗಾರ ಏರ್ಪಡಿಸುವುದು ಅಗತ್ಯ ಎಂದು ಶ್ರೀಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಂಯೋಜಕ ಪ್ರಕಾಶ ಬಾಳಿಕಾಯಿ ಅಭಿಪ್ರಾಯ ಪಟ್ಟರು.

ಇಲ್ಲಿಯ ಗಾಂಧಿನಗರ ಹಾಲಗಣೇಶ ಸಭಾಭವನದಲ್ಲಿ ರತಿಕಾ ನೃತ್ಯ ನಿಕೇತನವು ನೃತ್ಯ ವಿದ್ಯಾರ್ಥಿಗಳಿಗಾಗಿ ಮೂರು ದಿನ ಏರ್ಪಡಿಸಿದ್ದ ನೃತ್ಯಾವಲೋಕನ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದ ಅವರು, ಆಗಾಗ ಕಾರ್ಯಾಗಾರದಿಂದ ಕಲಾವಿದರ ಬೆಳವಣಿಗೆಯಲ್ಲಿ ಹೊಸತನ್ನು ಕಾಣಬಹುದಾಗಿದೆ ಎಂದರು.

ರತಿಕಾ ನೃತ್ಯ ನಿಕೇತನದ ವಿದುಷಿ ನಾಗರತ್ನ ಹಡಗಲಿ ಮಾತನಾಡಿ, ತುಮಕೂರಿನ ಪ್ರಸಿದ್ಧ ನೃತ್ಯಗುರು ಮತ್ತು ಕಲಾವಿದ ವಿದ್ವಾನ್ ಡಾ.ಸಾಗರ್.ಟಿ.ಎಸ್. ನಿರ್ದೇಶನದಲ್ಲಿ ಹುಬ್ಬಳ್ಳಿಯ ನೃತ್ಯ ವಿದ್ಯಾರ್ಥಿಗಳಿಗೆ ಮೂರು ದಿನದ ನೃತ್ಯಾವಲೋಕನ ಕಾರ್ಯಾಗಾರದಲ್ಲಿ ಅತ್ಯುತ್ತಮ ತರಬೇತುಗೊಳಿಸಿರುವುದು ಅಭಿನಂದನಾರ್ಹ ಎಂದರು.

ಸಂಪನ್ಮೂಲ ವ್ಯಕ್ತಿ ವಿದ್ವಾನ್ ಡಾ. ಸಾಗರ್ ಟಿ.ಎಸ್., ಅವಲೋಕನ, ದೈಹಿಕ ಕ್ಷಮತೆ ಮತ್ತು ಗುರುಗಳ ಮೇಲೆ ನಂಬಿಕೆ, ಕಲಿಯುವಿಕೆಯಲ್ಲಿ ಶ್ರದ್ಧೆಯು ಕಲಾವಿದರ ಬೆಳವಣಿಗೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ. ಅಲ್ಲದೇ ಕಲಿತ ವಿದ್ಯೆಯನ್ನು ವೇದಿಕೆ ಮೇಲೆ ಪ್ರದರ್ಶಿನಗೊಂಡು, ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದರೆ ಅದುವೇ ಕಲಾಗುರುಗಳಿಗೆ ದೊಡ್ಡ ಪ್ರಶಸ್ತಿ ಎಂದು ಹೇಳಿದರು.

ಸಾಕಾರ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಶುಭದಾ, ಕಲಿಕೆ ನಿರಂತರವಾಗಿರಬೇಕು, ಕಾರ್ಯಾಗಾರದಲ್ಲಿ ಕಲಿತದ್ದನ್ನು ಅವಿರತವಾಗಿ ಅಭ್ಯಾಸ ಮಾಡಿ ಕರಗತ ಮಾಡಿಕೊಂಡಾಗ ನೃತ್ಯ ಪ್ರದರ್ಶನ ಮಾಡಲು ಸಾಧ್ಯ ಎಂದರು.

ಹಿರಿಯ ನೃತ್ಯ ಕಲಾವಿದ ವಿದ್ವಾನ್ ಡಾ. ಸಾಗರ ಟಿ.ಎಸ್. ಅವರನ್ನು ಸನ್ಮಾನಿಸಲಾಯಿತು. ನಂತರ ವಿದ್ವಾನ ಡಾ. ಸಾಗರ ಟಿ.ಎಸ್. ಅವರಿಂದ ನೃತ್ಯ ಕಾರ್ಯಕ್ರಮ ಜರುಗಿತು. ವಿದುಷಿ ರತಿಕಾ ಸಾಗರ, ವಿದುಷಿ ಶ್ರುತಿ ಕಟ್ಟಿ, ರಂಜನಾ ಕಾಮತ ಹಾಗೂ ಅವಳಿ ನಗರದ ನೃತ್ಯ ಗುರುಗಳ ಅನೇಕ ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು. ಸುನಿಲ ಕುಲಕರ್ಣಿ ನಿರೂಪಿಸಿದರು. ಸೃಷ್ಟಿ ಕುಲಕರ್ಣಿ ವಂದಿಸಿದರು.