ಸಾರಾಂಶ
ಕನ್ನಡಪ್ರಭವಾರ್ತೆ ಬಸವನಬಾಗೇವಾಡಿಒಂದು ತಿಂಗಳ ಕಾಲ ಶ್ರವಣ ಮಾಡಿದ ಪುರಾಣ-ಪ್ರವಚನಗಳಿಂದ ಪ್ರತಿಯೊಬ್ಬರೂ ಸತ್ವಯುತ ಜೀವನ ಸಾಗಿಸಬೇಕು. ಮನುಷ್ಯನಲ್ಲಿ ಭಕ್ತಿ ಮೂಡಿದರೆ ಅದು ಎಂದಿಗೂ ಕರಗುವುದಿಲ್ಲ. ಭಕ್ತಿಯಿಂದ ಮುಕ್ತಿ ಪಡೆಯಲು ಸಾಧ್ಯವಿದೆ ಎಂದು ಹರಸೂರ ಕಲ್ಮಠದ ಕರಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ಸುಕ್ಷೇತ್ರ ಜಾಯವಾಡಗಿಯ ಸೋಮನಾಥ ಹಾಗೂ ಶಿವಪ್ಪ ಮುತ್ಯಾ ದೇವಸ್ಥಾನದ ಮಂಗಲ ಕಾರ್ಯಾಲಯದಲ್ಲಿ ಹುಬ್ಬಳ್ಳಿ ಶ್ರೀಸಿದ್ದಾರೂಢರ ಪುರಾಣ ಮಹಾಮಂಗಲ ಹಾಗೂ ಜೋಡೆತ್ತಿನ ನೂತನ ಮೂರ್ತಿ ಪ್ರತಿಷ್ಠಾಪನೆಯಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿದರು. ವರ್ಷದಿಂದ ವರ್ಷಕ್ಕೆ ಭಕ್ತರ ಸಹಕಾರದೊಂದಿಗೆ ದೇವಸ್ಥಾನದಲ್ಲಿ ಹೊಸತನ ನಡೆಯುತ್ತಿರುವದು ಸಂತಸದಾಯಕ ಸಂಗತಿ. ಈ ವರ್ಷದ ಪುರಾಣ ಮಂಗಲ ಮಹೋತ್ಸವದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಬೃಹತ್ ಜೋಡು ಎತ್ತಿನ ನೂತನ ಮೂರ್ತಿ ಪ್ರತಿಷ್ಠಾಪನೆಯಾಗಿರುವದು ಕಾಮಧೇನು ಕಲ್ಪವೃಕ್ಷ ಸ್ಥಾಪನೆಯಾದಂತಾಗಿದೆ. ಇದರಿಂದ ಈ ಭಾಗದ ಭಕ್ತರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ ಎಂದರು.ವೀರಗಟ್ಟಿಯ ಅಡವಿಲಿಂಗ ಮಹಾರಾಜರು ಮಾತನಾಡಿ, ಜೀವನದಲ್ಲಿ ಮಾನವನು ಪಶು-ಪಕ್ಷಿ, ಗಿಡ-ಮರ ಹಾಗೂ ಜಾನುವಾರುಗಳಂತೆ ಪರರ ಬದುಕಿಗಾಗಿ ಜೀವನ ಮೀಸಲಿಟ್ಟರೆ ಮಾನವನ ಬದುಕು ಹಸನಾಗಿ ಭಗವಂತನ ಕೃಪೆ ಪಾತ್ರನಾಗಲು ಸಾಧ್ಯ. ಪರಿಸರದಲ್ಲಿರುವ ಇವುಗಳಲ್ಲಿ ಎಂದಿಗೂ ಅಸಹ್ಯ ಭಾವನೆ, ನ್ಯಾಯ ಬಾರದೇ ಇರುವದನ್ನು ಕಾಣುತ್ತೇವೆ. ಎಲ್ಲವೂ ಒಂದಾಗಿ ಪರಸ್ಪರ ಕೂಡಿ ಬಾಳುವುದನ್ನು ಕಾಣುತ್ತೇವೆ. ಅದರಂತೆ ಮಾನವರು ಪ್ರಾಣಿ-ಪಕ್ಷಿಗಳಲ್ಲಿರುವ ಒಳ್ಳೆಯ ಗುಣವನ್ನು ಅರಿತು ಜೀವನ ಸಾಗಿಸಬೇಕಿದೆ ಎಂದು ಕಿವಿಮಾತು ಹೇಳಿದರು.ಯರಝರಿಯ ಮಲ್ಲಾರಲಿಂಗ ಮಹಾರಾಜರು ಮಾತನಾಡಿ, ಸುಕ್ಷೇತ್ರ ಜಾಯವಾಡಗಿ ದೇವಸ್ಥಾನಕ್ಕೂ ನಮ್ಮ ಶ್ರೀಮಠಕ್ಕೂ ಅವಿನಾಭಾವ ಸಂಬಂಧವಿದೆ. ಬಸವನಾಡಿನ ಜನರು ಪುಣ್ಯವಂತರಾಗಿದ್ದಾರೆ. ಈ ಕ್ಷೇತ್ರದ ಗುರು-ಶಿಷ್ಯರ ಆಶೀರ್ವಾದ ಸದಾ ಜನರ ಮೇಲಿದೆ ಎಂದು ಹೇಳಿದರು.ಮಾನಭಾವಿಯ ಬಸವರಾಜ ಗುರುಗಳು ಮಾತನಾಡಿ, ಶಿವಪ್ಪ ಮುತ್ಯಾರ ದೇವಸ್ಥಾನಕ್ಕೆ ಜನರು ತಮ್ಮ ದನ-ಕರುಗಳನ್ನು ತಂದು ಪ್ರದಕ್ಷಿಣೆ ಹಾಕಿಸಿದರೆ ಅವುಗಳಿಗೆ ಯಾವುದೇ ರೋಗ ಬರುವುದಿಲ್ಲ. ಒಂದು ವೇಳೆ ರೋಗ-ರುಜಿನವಿದ್ದರೂ ಅವು ಮಾಯವಾಗುತ್ತವೆ. ಇದು ಕ್ಷೇತ್ರದ ಪವಾಡವೇ ಸರಿ ಎಂದು ತಿಳಿಸಿದರು.ಪಡೇಕನೂರಿನ ಮಲ್ಲಿಕಾರ್ಜುನ ಸ್ವಾಮೀಜಿ, ಪ್ರವಚನಕಾರ ಶರಣಸೋಮನಾಳದ ಮಹಾದೇವಯ್ಯ ಶಾಸ್ತ್ರೀಜಿ ಮಾತನಾಡಿದರು. ಕಾಮನಕೇರಿಯ ಜ್ಞಾನೇಶ್ವರಿ ಅಪ್ಪಾಜಿ, ಯಲ್ಲಾಲಿಂಗ ಮಹಾರಾಜರು. ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ, ಮಹೇಶ ಮುತ್ಯಾ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶರಣಪ್ಪಗೌಡ ನರಸಲಗಿ, ಉಪಾಧ್ಯಕ್ಷ ಶಿವನಗೌಡ ಬಿರಾದಾರ, ಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ, ಶ್ರೀಮಠದ ಭಕ್ತರಾದ ಶರಣಗೌಡ ಬಿರಾದಾರ, ಶರಣಬಸು ಹೆರೂರ, ನಾನಾಗೌಡ ಬಿರಾದಾರ, ಮಲ್ಲಣ್ಣ ಕಾಮನಹಟ್ಟಿ, ಸೋಮನಗೌಡ ಪಾಟೀಲ, ಸಂಗಮೇಶ ಸಜ್ಜನ, ಸಿದ್ದನಗೌಡ ಬಿರಾದಾರ, ಸಂಗಣ್ಣ ಬಳಿಗಾರ, ಚಿದಾನಂದ ದಿಂಡವಾರ, ಸಿದ್ರಾಮ ಕಲ್ಲೂರ, ಪರಶುರಾಮ ಪೂಜಾರಿ ಇತರರು ಇದ್ದರು.ಬೆಳಗ್ಗೆ ಸೋಮನಾಥ ಮತ್ತು ಶಿವಪ್ಪ ಮುತ್ಯಾರ ಕತೃ ಗದ್ದುಗೆಗೆ ವಿಶೇಷ ಪೂಜೆ, ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಶಿವಾನುಭವ ಮಂಟಪದಲ್ಲಿ ವಿವಿಧ ಶ್ರೀಗಳ ಸಾನಿಧ್ಯದಲ್ಲಿ ಜೋಡೆತ್ತಿನ ಎತ್ತಿನ ನೂತನ ಮೂರ್ತಿ ಪ್ರತಿಷ್ಠಾಪನೆ ನೆರವೇರಿತು. ನಂತರ ಗ್ರಾಮದ ಮಹಿಳೆಯರ ಕುಂಭಮೇಳ, ವಿವಿಧ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಸಿದ್ದಾರೂಢರ ಪುರಾಣ ಹಾಗೂ ಭಾವಚಿತ್ರದ ಮೆರವಣಿಗೆ ಜರುಗಿತು.