ಮಹಾಲಿಂಗೇಶ್ವರ ಜಟೋತ್ಸವ, ರಥೋತ್ಸವ ಸಂಪನ್ನ

| Published : Sep 08 2025, 01:01 AM IST

ಸಾರಾಂಶ

ಮಹಾಲಿಂಗಪುರ ನಗರದ ಆರಾಧ್ಯ ದೈವ, ಪವಾಡ ಪುರುಷ ಶ್ರೀ ಗುರು ಮಹಾಲಿಂಗೇಶ್ವರರ ಜಟೋತ್ಸವ ಶುಕ್ರವಾರ ನಗರದ ಚನ್ನಗಿರೇಶ್ವರ ದೇವಸ್ಥಾನದಲ್ಲಿ ಅದ್ಧೂರಿಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ನಗರದ ಆರಾಧ್ಯ ದೈವ, ಪವಾಡ ಪುರುಷ ಶ್ರೀ ಗುರು ಮಹಾಲಿಂಗೇಶ್ವರರ ಜಟೋತ್ಸವ ಶುಕ್ರವಾರ ನಗರದ ಚನ್ನಗಿರೇಶ್ವರ ದೇವಸ್ಥಾನದಲ್ಲಿ ಅದ್ಧೂರಿಯಿಂದ ನಡೆಯಿತು. ಶನಿವಾರ ಸಂಜೆ ರಥೋತ್ಸವಕ್ಕೆ ಅದ್ಧೂರಿ ಚಾಲನೆಗೊಂಡಿತು. ವಿದ್ಯುತ್ ದೀಪ ಹಾಗೂ ಬೃಹತ್ ಹೂಮಾಲೆ, ಕಬ್ಬು-ಬಾಳೆಗಿಡದಿಂದ ಅಲಂಕಾರಗೊಳಿಸಿದ್ದ ಮಹಾಲಿಂಗೇಶ್ವರ ರಥಕ್ಕೆ ಶ್ರೀ ಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತರಿಂದ ಶ್ರೀಮಹಾಲಿಂಗೇಶ್ವರ ಮಹಾರಾಜಕಿ ಜೈ, ಚನ್ನಗಿರೇಶ್ವರ ಮಹಾರಾಜ ಕೀ ಜೈ ಎಂಬ ಜಯ ಘೋಷಣೆಗಳೊಂದಿಗೆತ್ಥೋತ್ಸವ ಜರುಗಿತು. ಜಾತ್ರೆಯ ನಿಮಿತ್ತ ಮಹಾಲಿಂಗೇಶ್ವರರ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರಗಳನ್ನು ಮಾಡಲಾಗಿತ್ತು.

ರಥೋತ್ಸವಕ್ಕೆ ವಾದ್ಯ ಮೇಳಗಳ ಮೆರಗು: ರಥೋತ್ಸವ ಮುಂದೆ ಕಂಡ್ಯಾಳ ಬಾಸಿಂಗ, ಉಚ್ಚಾಯಿ, ನಂದಿಕೋಲು, ಕರಡಿ ಮಜಲು, ಶಹನಾಯಿ, ಡೊಳ್ಳಿನ ಮೇಳ, ಹಲಗೆ ವಾದನ ಸೇರಿದಂತೆ ಹಲವಾರು ಮಂಗಳ ವಾದ್ಯಗಳು ರಥೋತ್ಸವದ ಮೆರಗು ಹೆಚ್ಚಿಸಿದ್ದವು. ಶನಿವಾರ ಸಂಜೆ ೭.೩೦ಕ್ಕೆ ಪ್ರಾರಂಭವಾದ ತುಂಬಿದ ತೇರು ಮಹಾಲಿಂಗೇಶ್ವರ ದೇವಸ್ಥಾನದಿಂದ ನಡಚೌಕಿ ಮಾರ್ಗವಾಗಿ ರಾತ್ರಿಯಿಡಿ ಜರುಗಿ ರವಿವಾರ ನಸುಕಿನ ಜಾವ ೫-೩೦ಕ್ಕೆ ಚನ್ನಗಿರೇಶ್ವರ ದೇವಸ್ಥಾನ ತಲುಪಿತು. ಅದೇ ದಿನ ಸಂಜೆ ೭ಕ್ಕೆ ಚನ್ನಗಿರೇಶ್ವರ ದೇವಸ್ಥಾನದಿಂದ ಮರಳಿ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಮರು ರಥೋತ್ಸವ ನಡೆಯಿತು.

ಶುಕ್ರವಾರ ಬೆಳಗ್ಗೆಯಿoದ ಜಿಲ್ಲೆಯ ವಿವಿಧ ಪಕ್ಷದ ರಾಜಕಾರಿಣಿಗಳು,ಗಣ್ಯರು, ಪೂಜ್ಯರು ಸೇರಿದಂತೆ ಸಂಖ್ಯಾತ ಭಕ್ತರು ಚನ್ನಗಿರೇಶ್ವರ ಮತ್ತು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಮಹಾಲಿಂಗೇಶ್ವರ ದರ್ಶನ ಪಡೆದರು. ಜಟೋತ್ಸವ ಮತ್ತು ರಾತ್ರಿಯಿಡಿ ಜರುಗಿದ ರಥೋತ್ಸವ ದರ್ಶನಕ್ಕೆ ಹಲವಾರು ಜನ ಆಗಮಿಸಿ ದರ್ಶನ ಪಡೆದುಕೊಂಡರು.

ಹರಿವಾಣ ಕಟ್ಟೆ ಲೂಟಿ: ತುಂಬಿದ ತೇರು ಸಾಗುವ ಮುನ್ನ ಮಹಾಲಿಂಗೇಶ್ವರ ದೇವಸ್ಥಾನದ ಪಾದಗಟ್ಟಿಯ ಮುಂದೆ ನಿರ್ಮಿಸಲಾದ ಹರಿವಾಣ ಕಟ್ಟೆಯ ಲೂಟಿ ಕಾರ್ಯಕ್ರಮ ಸಂಜೆ ಜರುಗಿತು. ನೂರಾರು ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಬೆಳೆದ ಗೋವಿನ ಜೋಳ, ಬಾಳೆಗಿಡ, ಕಬ್ಬು ಸೇರಿದಂತೆ ಹಲವು ತರಹದ ಬೆಳೆಗಳನ್ನು ತಂದು ಪಾದಗಟ್ಟೆಯ ಮುಂದಿನ ಹಂದರ ಮೇಲೆ ಹಾಕಿದರು. ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪೂಜೆ ಮಾಡಿ ಮಂಗಳಾರತಿ ಸಲ್ಲಿಸಿದ ನಂತರ ಸಂಪ್ರದಾಯದಂತೆ ಅಲ್ಲಿದ್ದ ಕಬ್ಬು, ಗೋವಿನ ಜೋಳದ ದಂಟನ್ನು ನೆರೆದಿದ್ದ ಸಾವಿರಾರು ಭಕ್ತರು ತೆಗೆದುಕೊಂಡರು. ಹರಿವಾನ ಕಟ್ಟೆಯಿಂದ ಪಡೆದುಕೊಂಡ ಕಬ್ಬು, ಗೋವಿನ ಜೋಳದ ದಂಟನ್ನು ಮನೆ, ಅಂಗಡಿಗಳಲ್ಲಿ ಕಟ್ಟಿ, ಮುಂದಿನ ವರ್ಷದ ಜಾತ್ರೆಯವರೆಗೂ ಅದನ್ನು ಪೂಜಿಸ ಲಾಗುತ್ತದೆ. ಈ ರೀತಿಯ ಹರಿವಾನ ಕಟ್ಟೆಯ ಪೂಜೆಯಿಂದ ರೈತರ ಹೊಲದಲ್ಲಿ, ಭಕ್ತರಿಗೆ ಮನೆಯಲ್ಲಿ ಅನ್ನದ ಕೊರತೆಯಾಗುವುದಿಲ್ಲ ಎಂಬ ನಂಬಿಕೆ ಭಕ್ತರಲ್ಲಿದೆ.