ಸಂಗೀತದಲ್ಲಿ ವಚನ ಸಾಹಿತ್ಯದ ಕೊಡುಗೆ ಅಪಾರ: ಡಾ.ಎಸ್.ಆರ್ ಮಠಪತಿ

| Published : Sep 08 2025, 01:01 AM IST

ಸಂಗೀತದಲ್ಲಿ ವಚನ ಸಾಹಿತ್ಯದ ಕೊಡುಗೆ ಅಪಾರ: ಡಾ.ಎಸ್.ಆರ್ ಮಠಪತಿ
Share this Article
  • FB
  • TW
  • Linkdin
  • Email

ಸಾರಾಂಶ

ವಚನ ಗಾಯನ ಶೈಲಿಯು 19ನೇ ಶತಮಾನದಲ್ಲಿ ಬೆಳಕಿಗೆ ಬಂದಿದ್ದು ಸಂಗೀತ ಕ್ಷೇತ್ರಕ್ಕೆ ಕನ್ನಡಿಗರು ನೀಡಿದ ಶ್ರೇಷ್ಠ ಕೊಡುಗೆಯಾಗಿದೆ ಎಂದು ವಿಶ್ರಾಂತ ಪ್ರಾಚಾರ್ಯ ಪಂ.ಡಾ.ಎಸ್.ಆರ್ ಮಠಪತಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಚನ ಗಾಯನ ಶೈಲಿಯು 19ನೇ ಶತಮಾನದಲ್ಲಿ ಬೆಳಕಿಗೆ ಬಂದಿದ್ದು ಸಂಗೀತ ಕ್ಷೇತ್ರಕ್ಕೆ ಕನ್ನಡಿಗರು ನೀಡಿದ ಶ್ರೇಷ್ಠ ಕೊಡುಗೆಯಾಗಿದೆ ಎಂದು ವಿಶ್ರಾಂತ ಪ್ರಾಚಾರ್ಯ ಪಂ.ಡಾ.ಎಸ್.ಆರ್ ಮಠಪತಿ ಹೇಳಿದರು.

ನಗರದ ಬಿ.ವಿ.ವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಬೆಂಗಳೂರಿನ ಅಜಿಮ್ ಪ್ರೇಮ್ಜಿ ವಿವಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಚನ ಗಾಯನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಸಂಗೀತದಲ್ಲಿ ಅನೇಕ ಪ್ರಕಾರಗಳಿವೆ ಅವುಗಳಲ್ಲಿ ಪಂಚಾಕ್ಷರಿ ಗವಾಯಿಗಳು ಹುಟ್ಟು ಹಾಕಿದ ವಚನ ಗಾಯನ ಒಂದಾಗಿದೆ. 1906ರಲ್ಲಿ ಬಾಗಲಕೋಟೆಯ ತೆಗ್ಗಿನ ಮಠದಲ್ಲಿ ಅವರು, ಹಾಡಿದ ವಚನ ಸಾಹಿತ್ಯ ಮೆಚ್ಚಿ ಹಾನಗಲ್ಲ ಕುಮಾರಸ್ವಾಮಿಗಳು ಪಂಚಾಕ್ಷರಿ ಗವಾಯಿ ಎಂಬ ನಾಮಕರಣ ಮಾಡುತ್ತಾರೆ. ಬಳಿಕ ಡಾ.ಮಲ್ಲಿಕಾರ್ಜುನ ಮನಸೂರ ಅವರು ದೂರದರ್ಶನದ ನೇರ ಪ್ರಸಾರದಲ್ಲಿ ವಚನ ಗಾಯನ ಮಾಡಿ ಅದನ್ನು ಮತ್ತಷ್ಟು ಪ್ರಚುರಪಡಿಸಿದ್ದು, ವಚನ ಗಾಯನ ಸಾಹಿತ್ಯದಲ್ಲಿ ಅನೇಕ ರೀತಿಯ ಬೆಳವಣಿಗೆ ಕಂಡಿದೆ ಎಂದು ಹೇಳಿದರು.

ಪ್ರಸ್ತುತ ದೇಶದೆಲ್ಲೆಡೆ ವಚನ ಸಂಗೀತ ಶೈಲಿಯಾಗಿ ಮಾರ್ಪಟ್ಟಿದ್ದು, ಈಗಿನ ಸಂಗೀತ ಕಚೇರಿಗಳಲ್ಲಿ ಗಾಯನ ಕೊನೆಯಲ್ಲಿ ವಚನದ ಮೂಲಕ ಅಂತ್ಯಗೊಳಿಸುವ ಪ್ರತೀತಿ ಬೆಳೆದಿದೆ. ಶಬ್ಧ ಮತ್ತು ಅರ್ಥ ದೋಷವಾಗದಂತೆ ಹಾಡುವ ಅಭ್ಯಾಸ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

ಪ್ರಾಚಾರ್ಯರಾದ ಎಸ್.ಆರ್ ಮೂಗನೂರಮಠ ಮಾತನಾಡಿ, ಗದ್ಯವೂ ಅಲ್ಲದ ಪದ್ಯವೂ ಅಲ್ಲದ ವಿಶಿಷ್ಟವಾದ ರಚನೆಯನ್ನು ವಚನಗಳು ಹೊಂದಿದ್ದು, ಹತ್ತನೇ ಶತಮಾನಮದಲ್ಲಿಯೇ ವಚನಗಳ ರಚನೆ ಪ್ರಾರಂಭವಾದವು. ಅನುಭವ ಮಂಟಪ ಪ್ರಾರಂಭವಾದ ನಂತರ ಅವುಗಳು ವಿಶಿಷ್ಟ ರೂಪ ಪಡೆದವು. ಸಾಹಿತ್ಯ ಮತ್ತು ಸಂಗೀತಕ್ಕೆ ಅವಿನಾಭಾವ ಸಂಬಂಧವಿದೆ. ಸಂಗೀತ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟ ಕೀರ್ತಿ ರೇಡಿಯೋ ಮಾಧ್ಯಮಕ್ಕೆ ಸಲ್ಲುತ್ತದೆ. ವಚನಗಳು ಕನ್ನಡದ ವೈಶಿಷ್ಟವಾಗಿದ್ದು, ಅದನ್ನು ವಿದ್ಯಾರ್ಥಿಗಳ ಮಟ್ಟದಲ್ಲಿ ಪ್ರಚಾರಮಾಡಲು ಇಂತಹ ಸ್ಪರ್ಧೆ ಏರ್ಪಡಿಸಿರುವುದು ಸಂತಸದ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕರಾದ ಡಾ.ಕೆ.ವಿ ಮಠ, ಪ್ರಾಧ್ಯಾಪಕರುಗಳಾದ ಡಾ.ಎಸ್.ಡಿ ಕೆಂಗಲಗುತ್ತಿ, ಡಾ.ಆರ್.ಎಮ್ ಬೆಣ್ಣೂರ ಸೇರಿದಂತೆ, ವಚನಗಾಯನ ಸ್ಪರ್ಧಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.ನಾದಮಯಗೊಂಡ ವಚನ ಗಾಯನ: ಕಾರ್ಯಕ್ರಮದಲ್ಲಿ ಹಮ್ಮಿಕೊಂಡ ವಚನಗಾಯನ ಸ್ಪರ್ಧೆಯಲ್ಲಿ ಜಿಲ್ಲೆಯ ಬಾದಾಮಿ, ಜಮಖಂಡಿ, ಮುಧೋಳ, ಇಳಕಲ್, ಮಹಾಲಿಂಗಪುರ, ಲೋಕಾಪುರ ಸೇರಿ ವಿವಿಧ ಭಾಗದ 18 ಕಾಲೇಜುಗಳ 57 ವಿದ್ಯಾರ್ಥಿಗಳು ಪಾಲ್ಗೊಂಡು ವಚನವಾಚನ ಮಾಡಿದರು. ಪ್ರತಿ ಕಾಲೇಜಿನ 5 ಜನ ಸ್ಪರ್ಧಾರ್ಥಿಗಳು ಭಾಗಿಯಾಗಿದ್ದರು. ನಿರ್ಣಾಯಕರಾಗಿ ಪಂ.ಎಸ್.ಆರ್ ಮಠಪತಿ, ಡಾ.ಕೆ.ವಿ ಮಠ, ಡಾ.ಎಸ್.ಡಿ. ಕೆಂಗಲಗುತ್ತಿ, ಡಾ.ಆರ್.ಎಂ. ಬೆಣ್ಣೂರ ಪಾಲ್ಗೊಂಡಿದ್ದರು. ವಿಜೇತರ ಹೆಸರನ್ನು ಸೆ.13ರಂದು ಜರುಗಲಿರುವ ಸಾಹಿತ್ಯ ಸಹವಾಸ ವಿಚಾರ ಸಂಕೀರ್ಣದಲ್ಲಿ ಪ್ರಕಟಿಸಿ ಬಹುಮಾನ ವಿತರಣೆ ಮಾಡಲಾಗುವುದು.