ಸಾರಾಂಶ
ಯಲ್ಲಾಪುರ:
ಬ್ರಾಹ್ಮಣರಿಗೆ ತಮ್ಮ ಸಂಘಟನೆಯ ಕುರಿತೇ ಉಂಟಾಗಿರುವ ಜಿಜ್ಞಾಸೆ ಇತ್ತೀಚೆಗೆ ಅಧಿಕಗೊಳ್ಳುತ್ತಿದ್ದು, ಪರಂಪರಾಗತ ಕಾನೂನು ಮತ್ತು ವಿಧಿಗಳಿಗೆ ಅನುಸಾರವಾಗಿ ಸಮುದಾಯ ತನ್ನ ನಡೆ ಕಾಪಾಡಿಕೊಂಡು ಬಂದಿದೆ. ಇಂತಹ ಸನಾತನ ಧರ್ಮದ ಸಂರಕ್ಷಣೆ ಬದಲಾದ ಕಾಲಘಟ್ಟದಲ್ಲಿ ಅನಿವಾರ್ಯವಾಗಿದ್ದು, ನಮ್ಮೊಳಗೆ ಹುಟ್ಟಿದ ಒಳಪಂಗಡಗಳಿಂದಲೇ ಸಂಘಟನೆಯ ಅಸ್ತಿತ್ವಕ್ಕೆ ಧಕ್ಕೆಯಾಗಿದ್ದರೂ, ಅಂತಹ ಒಳಪಂಗಡಗಳು ಬಹುಕಾಲ ಉಳಿಯಲಾರವು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರ್ನಳ್ಳಿ ಹೇಳಿದರು.ಅವರು ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಭಾನುವಾರ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನೆ-ಸ್ವಾವಲಂಬನೆ-ಸಂಸ್ಕಾರ ಎಂಬ ಘೋಷವಾಕ್ಯದಡಿ ಹಮ್ಮಿಕೊಂಡಿದ್ದ ತ್ರಿಮತಸ್ಥ ವಿಪ್ರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ವಿಪ್ರ ಸಮುದಾಯದ ಅಭಿವೃದ್ಧಿಗಾಗಿ ಸಂಘಟನೆ ಮಾಡಬೇಕಿರುವ ಕೆಲಸಗಳು ಸಾಕಷ್ಟಿವೆ. ಕೃಷಿ ಕ್ಷೇತ್ರ ಮತ್ತು ವಧುಕ್ಷಾಮ ಸೇರಿದಂತೆ ವಿವಿಧ ಬಗೆಯ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ನಮ್ಮ ಮಹಿಳಾ ಸಂಘಟನೆ ಮತ್ತಷ್ಟು ಬಲಗೊಳ್ಳಬೇಕಿದ್ದು, ಪ್ರತಿ ಜಿಲ್ಲೆಯಲ್ಲಿಯೂ ನಮ್ಮ ಸಮುದಾಯದವರಿಗೆ ಸಂಸ್ಕಾರ ನೀಡುವ ಕೇಂದ್ರಗಳು ಸ್ಥಾಪನೆಯಾಗಬೇಕಾಗಿದೆ ಎಂದು ಹೇಳಿದರು.ನಮ್ಮ ಸಂಸ್ಕೃತಿಯ ಮೇಲೆ ಪರಕೀಯರ ಆಕ್ರಮಣ ಆರಂಭಗೊಂಡಿದ್ದು, ಬ್ರಾಹ್ಮಣರ ಅವಹೇಳನ ಹೆಚ್ಚುತ್ತಿದೆ ಎಂದ ಅವರು, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ನಂತರ ನಮ್ಮಲ್ಲಿ ಆತ್ಮವಿಶ್ವಾಸ ವೃದ್ಧಿಯಾಗಿದೆ. ವಿಶ್ವದಲ್ಲಿ ಬಲಾಢ್ಯ ಧರ್ಮವೆಂದರೆ ಅದು ಸನಾತನ ಧರ್ಮವಾಗಿದೆ. ಇದನ್ನು ಟೀಕಿಸುವ ವ್ಯಕ್ತಿಗಳನ್ನು ನಾವು ಸಂಘಟಿತರಾಗಿ ಎದುರಿಸಬೇಕಿದ್ದು ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ತುರ್ತಾಗಿ ನಿವಾರಿಸಿಕೊಳ್ಳಬೇಕಾದುದು ಅತ್ಯಗತ್ಯವಾಗಿದೆ. ಇದಕ್ಕೆ ಪರಸ್ಪರ ಸಾಮರಸ್ಯದಿಂದ ಸಮಾಧಾನದ ಬದುಕು ಪೂರಕ ಎಂದು ಹಾರ್ನಳ್ಳಿ ಹೇಳಿದರು. ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಬ್ರಾಹ್ಮಣರ ಸಂಖ್ಯೆ ಕಡಿಮೆ ಇರುವಲ್ಲಿ ಸಂಘಟನೆ ಕ್ರಿಯಾಶೀಲವಾಗಿದೆ. ಆದರೆ, ಹೆಚ್ಚು ಜನ ಇರುವ ಪ್ರದೇಶದಲ್ಲಿ ಸಂಘಟನೆ ಕ್ಷೀಣವಾಗಿರುವುದು ವಿಪರ್ಯಾಸದ ಸಂಗತಿ. ನನ್ನನ್ನೂ ಸೇರಿದಂತೆ ಪ್ರತಿಯೊಬ್ಬರೂ ಸಂಘಟನೆಗಾಗಿ ಯಾವ ಕೊಡುಗೆ ನೀಡಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ ಎಂದ ಅವರು, ಬ್ರಾಹ್ಮಣರೆಂದು ಹೇಳಿಕೊಳ್ಳಲು ನಾವೆಲ್ಲಿಯೂ ಭಯ ಪಡಬೇಕಾಗಿಲ್ಲ. ಆದರೆ, ವೈಚಾರಿಕವಾಗಿ ಬಲಿಷ್ಠವಾಗಿರುವ, ಎಲ್ಲರ ಹಿತ ಬಯಸುವ ನಾವು ನಮ್ಮ ಸಂಘಟನೆ ಕುಸಿತವಾಗುತ್ತಿರುವ ಕಾಲಘಟ್ಟದಲ್ಲಿ ಗಂಭೀರವಾಗಿ ಯೋಚಿಸಬೇಕಿದೆ. ಸಂಘಟನೆಯ ಒಳಿತಿಗಾಗಿ ಸಾಧ್ಯವಿರುವ ಎಲ್ಲ ನೆರವನ್ನೂ ಸದಾ ನೀಡಲು ಸಿದ್ಧ ಎಂದರು. ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕುರಿತಾದ ವ್ಯಾಖ್ಯಾನವೇ ಅವೈಜ್ಞಾನಿಕವಾಗಿದೆ. ಜನಸಂಖ್ಯೆ ಆಧರಿಸಿ ತಲಾನುದಾನ ನೀಡುವ ಪದ್ಧತಿ ಬ್ರಾಹ್ಮಣರಿಗೆ ಅಪಾಯಕಾರಿಯಾಗಿದೆ. ಇನ್ನಾದರೂ ಸಂಘಟಿತರಾಗಿ ಚಿಂತಿಸದಿದ್ದರೆ ಇದರ ಪರಿಹಾರ ಎಂದಿಗೂ ಅಸಾಧ್ಯ. ನಮ್ಮ ಮಠಗಳು ಒಂದಾದರೆ ಮಾತ್ರ ನಮ್ಮ ಸಮುದಾಯದವರು ಅಭಿವೃದ್ಧಿ ಸಾಧಿಸಬಹುದಾಗಿದೆ. ಹಳ್ಳಿಗಳ ಮನೆಗಳು ವೃದ್ಧಾಶ್ರಮ ಆಗುತ್ತಿರುವ ಗಂಭೀರ ಪರಿಸ್ಥಿತಿಯಲ್ಲಿ ಪಿತ್ರಾರ್ಜಿತ ಆಸ್ತಿ ಸಂರಕ್ಷಣೆ ಕೂಡಾ ಸವಾಲಾಗಿ ಪರಿಣಮಿಸಿದೆ. ಸರ್ಕಾರದ ಮೀಸಲಾತಿ ನಿಯಮದ ಅಪಾಯ ನಮ್ಮೆಲ್ಲರನ್ನೂ ಕಂಗೆಡಿಸಿದ್ದು, ವಾಸ್ತವವಾದರೆ ನಮ್ಮ ಸಮುದಾಯದ ಭವಿಷ್ಯ ಅರ್ಥವಾಗದ ಪ್ರಶ್ನೆಯಾಗಿ ಉಳಿದಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಎಕೆಬಿಎಂಎಸ್ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ, ನಮಗೆದುರಾಗಿರುವ ಸವಾಲುಗಳ ಪರಿಹಾರಕ್ಕಾಗಿ ಅಗತ್ಯವಿರುವ ಸಂಘಟನೆಯ ಬಲಕ್ಕೆ ಒತ್ತು ಕೊಡದಿದ್ದರೆ ನಮಗೆಂದಿಗೂ ಪರಿಹಾರ ಸಿಗದು. ನಾಡಿನ ೩೩ ತ್ರಿಮತಸ್ಥ ಬ್ರಾಹ್ಮಣರ ಮಠಗಳೂ ಇಂತಹ ಸಂಕಷ್ಟ ಸಂದರ್ಭದಲ್ಲಿ ಒಂದಾಗಿ ಸಮುದಾಯದ ಅಸ್ತಿತ್ವ ಕಾಪಾಡಲು ಗಮನ ನೀಡಬೇಕು ಮತ್ತು ಸಮುದಾಯದ ಪ್ರತಿಯೊಬ್ಬರೂ ಸಂಘಟಿತರಾಗಬೇಕು ಎಂದರು. ಎಕೆಬಿಎಂಎಸ್ ಉಪಾಧ್ಯಕ್ಷ ರಾಘವೇಂದ್ರ ಭಟ್ಟ ಮಾತನಾಡಿ, ಸ್ವಾವಲಂಬನೆ ನಮ್ಮ ಸಮುದಾಯದ ಸಹಜ ರಕ್ತ ಗುಣವಾಗಿದೆ. ಆದರೆ, ಸರ್ಕಾರ ನಾಡಿನಲ್ಲಿರುವ ೪೭ ಲಕ್ಷ ಬ್ರಾಹ್ಮಣರ ಸಂಖ್ಯೆಯನ್ನು ವ್ಯವಸ್ಥಿತವಾಗಿ ೧೬ ಲಕ್ಷ ಎಂದು ಬಿಂಬಿಸುತ್ತಿದೆ. ಬ್ರಾಹ್ಮಣ ಎಂದರೆ ಕೇವಲ ಜಾತಿಯಾಗಿರದೇ, ಇದು ವರ್ಣವಾಗಿದೆ. ಸಮುದಾಯದ ಪ್ರತಿಯೊಬ್ಬರೂ ಸಂಸ್ಕಾರವಂತರಾಗಿ ಪರಂಪರಾಗತ ವಿಧಿಗಳನ್ನು ಆಚರಿಸಬೇಕು. ಸಂಘಟನೆಗಾಗಿ ತ್ರಿಮತಸ್ಥ ಬ್ರಾಹ್ಮಣರು ಹಿಂಜರಿಯಬಾರದು ಎಂದರು.
ಅಭ್ಯಾಗತರಾಗಿದ್ದ ನೆಲೆಮಾವು ಮಠದ ಜಿ.ಎಂ. ಹೆಗಡೆ ಹೆಗ್ಗನೂರು, ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಸಾಮಾಜಿಕ ಕಾರ್ಯಕರ್ತ ಗೋವಿಂದ ಭಟ್ಟ ಅಚವೆ, ಎಕೆಬಿಎಂಎಸ್ ಜಿಲ್ಲಾ ಸಂಚಾಲಕಿ ನಿರ್ಮಲಾ ಹೆಗಡೆ ಗೋಳೀಕೊಪ್ಪ ವೇದಿಕೆಯಲ್ಲಿದ್ದರು.ವೆಂಕಟರಮಣ ಭಟ್ಟ ಮೊಟ್ಟೆಗದ್ದೆ ಸಂಗಡಿಗರ ವೇದಘೋಷ, ಕವಿತಾ ಭಟ್ಟ ಸಂಗಡಿಗರ ಪ್ರಾರ್ಥನೆ, ವಿ. ಗಣಪತಿ ಭಟ್ಟ ಕೋಲೀಬೇಣ ಅವರ ವೇದಿಕೆ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಎಕೆಬಿಎಂಎಸ್ ಜಿಲ್ಲಾ ಪ್ರತಿನಿಧಿ ಶಂಕರ ಭಟ್ಟ ತಾರೀಮಕ್ಕಿ ಸ್ವಾಗತಿಸಿದರು. ಚಂದ್ರಕಲಾ ಭಟ್ಟ ನಿರ್ವಹಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಪಾದ ರಾಯ್ಸದ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ಕಾರ್ಯದರ್ಶಿ ಕುಮಾರ ಭಟ್ಟ ವಂದಿಸಿದರು.