ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಆದರೆ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಹಣ ಪಾವತಿಸಿದ ರೈತರಿಗೆ ವಿಮೆ ಹಣ ಮಂಜೂರು ಮಾಡಿರುವುದಿಲ್ಲ. ಅಲ್ಲದೇ ಬರಪರಿಹಾರದಲ್ಲಿ ಸಹ ತಾರತಮ್ಯವಾಗುತ್ತಿದ್ದು, ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿ ಬೆಳೆ ವಿವೆ ಹಾಗೂ ಬರಪರಿಹಾರವನ್ನು ಸಮರ್ಪಕವಾಗಿ ವಿತರಿಸಿ ರೈತರಿಗೆ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ಸಂಘದ ಪದಾಧಿಕಾರಿಗಳು, ಸದಸ್ಯರು, ರೈತರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಡಿಸಿಗೆ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಮೂಲಕ ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಾದ್ಯಂತ ರೈತರು ಜಮೀನಿನಲ್ಲಿ ಬಿತ್ತನೆ ಮಾಡಿದ ಬೆಳೆಗೆ ಫಸಲ್ ಭಿಮಾ ಯೋಜನೆಯಡಿ ಬೆಳೆ ವಿಮೆ ಪಾವತಿಸಿದ್ದಾರೆ. ಆದರೆ, ಮಳೆ ಕೊರತೆ ಹಾಗೂ ತುಂಗಭದ್ರಾ ಎಡದಂಡೆ ಕಾಲುವೆಗೆ ಸರಿಯಾಗಿ ನೀರು ಬರದೇ ರೈತರಿಗೆ ಬೆಳೆ ನಷ್ಟವಾಗಿದೆ. ರೈತರ ಬೆಳೆಗೆ ಮಾಡಿದ ಖರ್ಚು ಬಂದಿಲ್ಲ. ಅಲ್ಲದೇ ರೈತರು ಬೆಳೆ ವಿಮೆ ಮಾಡಿಸಿದರೂ ವಿಮೆ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯ ರಾಯಚೂರು ಹಾಗೂ ದೇವದುರ್ಗ ತಾಲೂಕುಗಳಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕೋಟ್ಯಾಂತರ ಹಣವನ್ನು ವಿಮೆ ಕಂಪನಿಯಂದ ಅಕ್ರಮ ನಡೆದಿದೆ. ಈ ವಿಮೆ ಹಣವನ್ನು ಪ್ರಭಾವಿಗಳು ಹಾಗೂ ವಿಮೆ ಕಂಪನಿ ಅಧಿಕಾರಿಗಳು ಸೇರಿಕೊಂಡು ಭ್ರಷ್ಟಾಚಾರವೆಸಗಿದ್ದಾರೆ. ಆದರೂ ಜಿಲ್ಲಾಡಳಿತ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬರಪರಿಹಾರವನ್ನು ಸರ್ಕಾರ ಮಂಜೂರು ಮಾಡಿದೆ. ಆದರೆ, ಕಂದಾಯ ಇಲಾಖೆಯು ಬರಪರಿಹಾರ ನೀಡುವಲ್ಲಿ 3 ಎಕರೆಗೆ 5ಸಾವಿರ ಹಾಗೂ ಇನ್ನೂ ಕೆಲ ರೈತರಿಗೆ 3 ಎಕರೆಗೆ 9 ಸಾವಿರ ಬರಪರಿಹಾರ ನೀಡುವ ಮೂಲಕ ತಾರತಮ್ಯ ಮಾಡಲಾಗಿದೆ ಎಂದು ಆಪಾದಿಸಿದರು.
ಜಿಲ್ಲೆಯಲ್ಲಿ ಕಳಪೆ ಗುಣಮಟ್ಟದ ಹತ್ತಿ ಬೀಜ, ಕ್ರಿಮಿನಾಶ, ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕಳಪೆ ಹತ್ತಿ ಬೀಜ, ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ರೈತರಿಗೆ ಅವಶ್ಯಕ ಇರುವ ಬೀಜ, ರಸಗೊಬ್ಬರ, ಕ್ರಿಮಿನಾಶಕ ಎಂಆರ್‌ಪಿ ದರದಲ್ಲಿ ಮಾರಾಟ ಮಾಡಲು ವ್ಯಾಪಾರಸ್ಥರಿಗೆ ಸೂಕ್ತ ಆದೇಶಿಸಬೇಕು. ಜಿಲ್ಲೆಯಲ್ಲಿ ರೈತರಿಂದ ಜೋಳ ಖರೀದಿ ಕೇಂದ್ರಗಳಲ್ಲಿ ಖರೀದಿ ಸಂಬಂಧದ ಹಣ ಬಿಡುಗಡೆ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ತಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಗೌರವಾಧ್ಯಕ್ಷ ನರಸಿಂಗರಾವ್ ಕುಲಕರ್ಣಿ, ಜಿಲ್ಲಾ ಉಪಾಧ್ಯಕ್ಷ ನರಸಪ್ಪ ಯಾದವ್ ಹೊಕ್ರಾಣಿ, ಪದಾಧಿಕಾರಿಗಳಾದ ಹುಲಿಗೆಪ್ಪ ಜಾಲಿಬೆಂಚಿ, ವೀರೇಶಗೌಡ ಕಡಗಂದೊಡ್ಡಿ, ಅಕ್ಕಮ್ಮ ತಲಮಾರಿ,ಅಬ್ದುಲ್ ಮಸೀದ್ ಬಿಚ್ಚಾಲಿ, ಹಂಪಣ್ಣ ಜಾನೇಕಲ್, ರಮೇಶ ಗಾಣಧಾಳ, ಹುಲಿಗೆಪ್ಪ ಜಾಲಿಬೆಂಚಿ, ಈರಣ್ಣ ಪತಂಗಿ, ನರಸಪ್ಪ, ದೇವಪ್ಪ ಜೇಗರಕಲ್ ಸೇರಿ ಅನೇಕರು ಇದ್ದರು.