ಉತ್ತಮ ಸ್ಥಿತಿಯಲ್ಲಿರುವ ಸಾರಿಗೆ ಬಸ್ ಓಡಿಸುವಂತೆ ಒತ್ತಾಯ

| Published : Feb 21 2025, 12:46 AM IST

ಸಾರಾಂಶ

ಚಿಕ್ಕಮಗಳೂರು, ನಗರದಿಂದ ಮಲ್ಲೇನಹಳ್ಳಿ, ಶಾಂತವೇರಿ, ಲಿಂಗದಹಳ್ಳಿ, ತರೀಕೆರೆ ಮಾರ್ಗಕ್ಕೆ ಉತ್ತಮ ಸ್ಥಿತಿಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸುವಂತೆ ಈ ಭಾಗದ ಜನರು ಒತ್ತಾಯಿಸಿದ್ದಾರೆ.

ಸರ್ಕಾರಿ ನೌಕರರು, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೊಂದರೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರದಿಂದ ಮಲ್ಲೇನಹಳ್ಳಿ, ಶಾಂತವೇರಿ, ಲಿಂಗದಹಳ್ಳಿ, ತರೀಕೆರೆ ಮಾರ್ಗಕ್ಕೆ ಉತ್ತಮ ಸ್ಥಿತಿಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸುವಂತೆ ಈ ಭಾಗದ ಜನರು ಒತ್ತಾಯಿಸಿದ್ದಾರೆ.ನಗರದಿಂದ ಈ ಭಾಗದ ಗ್ರಾಮೀಣ ಪ್ರದೇಶಗಳಿಗೆ ಹಲವಾರು ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಡುತ್ತಿದ್ದು, ಉತ್ತಮ ಸೇವೆಯನ್ನು ಒದಗಿಸುತ್ತಿವೆ. ಆದರೆ ಸಾರಿಗೆ ಬಸ್‌ಗಳು ಉತ್ತಮ ಸ್ಥಿತಿಯಲ್ಲಿರದ ಕಾರಣ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದ್ದು, ಇದರಿಂದ ಸರ್ಕಾರಿ ನೌಕರರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ಗ್ರಾಮೀಣ ಪ್ರದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಸಾರ್ವಜನಿಕರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ, ಶಾಲಾ ಕಾಲೇಜುಗಳಿಗೆ ಚಿಕ್ಕಮಗಳೂರಿಗೆ ಬರುತ್ತಿದ್ದು, ಬೆಳಿಗ್ಗೆ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ಶಾಲಾ, ಕಾಲೇಜು, ಸರ್ಕಾರಿ ನೌಕರರು ಕಚೇರಿಗೆ, ಸಾರ್ವಜನಿಕರು ಕೋರ್ಟ್ ಕಚೇರಿಗೆ ತಲುಪಲು ಸಾಧ್ಯವಾಗುತ್ತಿಲ್ಲ.ಕಳೆದ ಕೆಲವು ದಿನಗಳಿಂದ ಸಾರಿಗೆ ಬಸ್‌ಗಳು ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಕೆಟ್ಟು ನಿಲ್ಲುವುದು ಸೇರಿದಂತೆ ಹಲವಾರು ಸಮಸ್ಯೆಗಳಿಂದ ಬಸ್ ನಿಂತ ಜಾಗದಲ್ಲೆ ನಿಲ್ಲುವುದರಿಂದ ಜನರು ಹೈರಾಣಾಗಿದ್ದಾರೆ. ಬಸ್‌ಗಳ ವಿಳಂಬದ ಬಗ್ಗೆ ಸಂಬಂಧಿಸಿದವರಿಗೆ ವಿಚಾರಿಸಲು ಹೋದರೆ ಸರಿಯಾದ ಮಾಹಿತಿ ನೀಡದೇ ಉಡಾಫೆಯಿಂದ ಮಾತನಾಡುವುದು, ಗದರಿಸಿ ಕಳುಹಿಸುವುದರಿಂದ ಸಾರ್ವಜನಿಕರಿಗೆ ಬೇಸರ ಉಂಟು ಮಾಡುತ್ತಿದೆ.ಕೆಲವು ಗ್ರಾಮೀಣ ಪ್ರದೇಶದ ಬೆರಳೆಣಿಕೆಯಷ್ಟು ಜನರು ಓಡಾಡುವ ಸ್ಥಳಗಳಿಗೆ ಉತ್ತಮ ಬಸ್‌ಗಳನ್ನು ಓಡಿಸುತ್ತಿದ್ದು, ಪ್ರತಿನಿತ್ಯ ಉತ್ತಮ ಆದಾಯ ವಿರುವ ಈ ಗ್ರಾಮೀಣ ಪ್ರದೇಶಗಳಿಗೆ ಹಳೆಯ ಬಸ್‌ಗಳನ್ನು ಓಡಿಸುತ್ತಿದ್ದು, ಇದರಿಂದ ಬಸ್‌ಗಳು ಎಲ್ಲೆಂದರಲ್ಲಿ ಕೈ ಕೊಡುತ್ತಿವೆ. ಆದ್ದರಿಂದ ಸಂಬಂಧಿ ಸಿದವರು ಉತ್ತಮ ಸ್ಥಿತಿಯಲ್ಲಿರುವ ಸಾರಿಗೆ ಬಸ್‌ಗಳನ್ನು ಈ ಭಾಗಕ್ಕೆ ಓಡಿಸುವಂತೆ ಒತ್ತಾಯಿಸಿದ್ದಾರೆ.