ನರೇಗಾದಡಿ ಕೆಲಸ ನೀಡಲು ಕೂಲಿಕಾರ್ಮಿಕರ ಒತ್ತಾಯ

| Published : Feb 19 2024, 01:30 AM IST

ಸಾರಾಂಶ

ಮನರೇಗಾ ಯೋಜನೆಯಡಿಯಲ್ಲಿ ಕೆಲಸ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಸಮಿತಿ ಸದಸ್ಯರು ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ಮನರೇಗಾ ಯೋಜನೆಯಡಿಯಲ್ಲಿ ಕೆಲಸ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಕೆಂದು ಒತ್ತಾಯಿಸಿ ತಾಲೂಕು ಪಂಚಾಯಿತಿ ಕಾರ್ಯಾಲಯದ ಮುಂದೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ತಾಲೂಕು ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಪ್ರಸ್ತುತ ವರ್ಷ ಬರಗಾಲದಲ್ಲಿ ಕೂಲಿಕಾರರು ತತ್ತರಿಸಿ ವಲಸೆ ಹೋಗುವುದು ಹೆಚ್ಚಾಗಿದೆ. ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಕೂಲಿಕಾರರ ನೆರವಿಗೆ ಬರುತ್ತಿಲ್ಲ. ಉದ್ಯೋಗ ಖಾತ್ರಿ ಕ್ರಿಯಾ ಯೋಜನೆಯೂ ಇನ್ನೂ ಜಿಲ್ಲಾ ಪಂಚಾಯಿತಿಯಿಂದ ಮಂಜೂರಾತಿ ಆಗಿಲ್ಲ. ಆದ್ದರಿಂದ ಕೆಲಸವಿಲ್ಲ ಎಂಬುದಾಗಿ ಪಿಡಿಒಗಳು ಹೇಳುತ್ತಾ ಕಾಲಹರಣ ಮಾಡುತ್ತಾ ಇದ್ದಾರೆ ಎಂದು ಆರೋಪಿಸಿದರು.

ಫಾರಂ 6 ಅರ್ಜಿ ಕೊಟ್ಟರು ಕೆಲಸ ಕೊಡದಿರುವಾಗ ನಿರುದ್ಯೋಗ ಭತ್ಯೆ ಕೊಡಬೇಕು. ಮತ್ತು ಕೆಲಸ ನೀಡಬೇಕು. ಎಲ್ಲರಿಗೂ ಜಾಬ್ ಕಾರ್ಡ್‌ ಕೊಡಬೇಕು ಎಂದು ಆಗ್ರಹಿಸಿದರು.

ಕವಡಿಮಟ್ಟಿ, ಏವೂರು, ಆಲ್ದಾಳ, ನಾಗರಾಳ, ಪೇಠ ಅಮ್ಮಾಪೂರ, ಬೋನ್ಹಾಳ, ಜಾಲಿಬೆಂಚಿ, ಶೆಳ್ಳಗಿ, ಮುಪ್ಪಳ್ಳಿ, ಶಾಂತಪುರ, ತಳ್ಳಳ್ಳಿ, ಆಲ್ದಾಳ ಚಂದಲಾಪುರ ಸೇರಿದಂತೆ ವಿವಿಧ ಗ್ರಾಮಗಳ ಕೂಲಿ ಕಾರ್ಮಿಕರಿಗೆ 100 ದಿನ ಕೆಲಸ ನೀಡಬೇಕು. ಮೇಟಿಗಳಿಗೆ ಗೌರವಧನ ಕೊಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿ ತಾಪಂ ಇಒ ಬಸವರಾಜ ಸಜ್ಜನ್ ಮಾತನಾಡಿ, ಕೂಲಿಕಾರರ ಪರಿಸ್ಥಿತಿ ಗಮನದಲ್ಲಿದ್ದು, ನೀವು ನೀಡಿರುವ ಮನವಿಯನ್ನು ಮೇಲಧಿಕಾರಿಗಳಿಗೆ ಕಳಿಸಿಕೊಡಲಾಗುವುದು ಎಂದರು.

ಸಂಘಟನೆಯ ತಾಲೂಕಾಧ್ಯಕ್ಷ ಶರಣಬಸವ ಜಂಬಲದಿನ್ನಿ, ಪ್ರಕಾಶ ಆಲ್ದಾಳ, ವೀರೇಶ ಕವಡಿಮಟ್ಟಿ, ಸಿದ್ದಮ್ಮ ಬೋನ್ಹಾಳ, ಹುಸೇನಸಾಬ ಬಾಚಿಮಟ್ಟಿ, ಖಾಜಾಸಾಬ ನಾಗರಾಳ, ಬಸವರಾಜ ಶೆಳ್ಳಗಿ, ಯಲ್ಲಪ್ಪ ಮುಷ್ಠಳ್ಳಿ, ಸುವರ್ಣ ತಳ್ಳಳ್ಳಿ ಸೇರಿದಂತೆ ಇತರರಿದ್ದರು.