ಸಾರ್ವಜನಿಕರ ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಯನ್ನು ತಳಮಟ್ಟದಲ್ಲಿ ಇನ್ನಷ್ಟು ಗಟ್ಟಿಗೊಳಿಸಲು ಹೆಸ್ಕಾಂ ಇಲಾಖೆ ಮುಂದಾಗಿದೆ ಎಂದು ಹೆಸ್ಕಾಂ ಅಧ್ಯಕ್ಷ ಅಜೀಂಪೀರ ಎಸ್. ಖಾದ್ರಿ ಅವರು ಹೇಳಿದರು.

ಶಿಗ್ಗಾಂವಿ: ಸಾರ್ವಜನಿಕರ ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಯನ್ನು ತಳಮಟ್ಟದಲ್ಲಿ ಇನ್ನಷ್ಟು ಗಟ್ಟಿಗೊಳಿಸಲು ಹೆಸ್ಕಾಂ ಇಲಾಖೆ ಮುಂದಾಗಿದೆ ಎಂದು ಹೆಸ್ಕಾಂ ಅಧ್ಯಕ್ಷ ಅಜೀಂಪೀರ ಎಸ್. ಖಾದ್ರಿ ಅವರು ಹೇಳಿದರು.

ಪಟ್ಟಣದ ಮೌಲಾಲಿ ನಗರದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಫಲಾನುಭವಿಗಳ ಮನೆ-ಮನೆ ಪರಿಶೀಲನಾ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಗೃಹ ಜ್ಯೋತಿಯ ಯೋಜನೆಯ ಲಾಭವು ಕ್ಷೇತ್ರದ ಪ್ರತಿಯೊಬ್ಬ ನೈಜ ಅರ್ಹ ಗ್ರಾಹಕನಿಗೂ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಪರೀಶೀಲನೆ ಮಾಡಲಾಗುತ್ತಿದೆ.

ಇದು ಕೇವಲ ಉಚಿತ ವಿದ್ಯುತ್ ನೀಡುವ ಕಾರ್ಯಕ್ರಮವಲ್ಲ, ಬದಲಿಗೆ ಪ್ರತಿ ಮನೆಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಮೂಲಕ ಜನರ ಜೀವನಮಟ್ಟವನ್ನು ಸುಧಾರಿಸುವ ಸರ್ಕಾರದ ಮಹತ್ವಾಕಾಂಕ್ಷಿ ಹೆಜ್ಜೆಯಾಗಿದೆ.

ಯೋಜನೆಯ ಯಶಸ್ವಿ ಅನುಷ್ಠಾನದ ನಡುವೆಯೂ ತಾಂತ್ರಿಕ ಕಾರಣಗಳಿಂದ ಕೆಲವು ಗ್ರಾಹಕರಿಗೆ ಉಂಟಾಗುತ್ತಿರುವ ಗೊಂದಲಗಳನ್ನು ಪರಿಹರಿಸಲು ಈ ಪರಿಶೀಲನೆ ಅಗತ್ಯವಾಗಿದೆ. ಯೋಜನೆಗೆ ಒಳಪಡದ ನೈಜ ಫಲಾನುಭವಿಗಳನ್ನು ಗುರುತಿಸಿ ಯೋಜನೆಗೆ ಸೇರಿಸಲಾಗುತ್ತದೆ. ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ಹೊರತೆಗೆಯಲಾಗುತ್ತದೆ. ತಳಮಟ್ಟದಲ್ಲಿ ಉಂಟಾಗುವ ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸಿ, ಯೋಜನೆಯು ನಿರಂತರವಾಗಿ ಮತ್ತು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡ ಮಂಜುನಾಥ ಮನ್ನಣ್ಣವರ, ಹಾವೇರಿ ಹೆಸ್ಕಾಂನ ಏಇಇ ಸಿ.ಬಿ ಹೊಸಮನಿ, ಹೆಸ್ಕಾಂ ಇಲಾಖೆಯ ಏಓ ಎಚ್. ಮಹ್ಮದ ಅಮಾನುಲ್ಲಾ, ಶಿವಾನಂದ ಹಾದಿಮಾನಿ, ಡಿ.ಎಸ್. ಬಂಡಿವಡ್ಡರ, ಟಿ.ಎಸ್. ಅಜ್ಜಣ್ಣನವರ, ವಿಶ್ವ ಆರಾಧ್ಯಮಠ, ಕರಿಯಪ್ಪ ಹರಿಜನ ಇತರರಿದ್ದರು.

ಹೊರ ರಾಜ್ಯದ ಅನರ್ಹ ಫಲಾನುಭವಿಗಳು ಕರ್ನಾಟಕ ಸರ್ಕಾರದ ಯೋಜನೆಗಳ ಲಾಭವನ್ನು ಅನಧಿಕೃತವಾಗಿ ಅನುಭವಿಸುತ್ತಿದ್ದಾರೆ. ಅವರನ್ನು ಗುರುತಿಸಿ ಯೋಜನೆಯಿಂದ ಹೊರಗಿಡಲಾಗುತ್ತದೆ. ರಾಜ್ಯದ ನೈಜ ಫಲಾನುಭವಿಗಳಿಗೆ ಯೋಜನೆಯ ಲಾಭ ತಪ್ಪಲು ಹೆಸ್ಕಾಂ ಬಿಡುವುದಿಲ್ಲ. ಗ್ರಾಹಕರಿಗೆ ಸಂಪೂರ್ಣ ಸುರಕ್ಷತೆ ಹಾಗೂ ಯೋಜನೆಯ ನಿರಂತರತೆಯ ಭರವಸೆಯನ್ನು ಸರ್ಕಾರ ನೀಡುತ್ತದೆ ಎಂದು ಹೆಸ್ಕಾಂ ಅಧ್ಯಕ್ಷ ಅಜೀಂಪೀರ ಖಾದ್ರಿ ಹೇಳಿದರು.