ಬೆಂಗಳೂರು : ನೀಲಿ ಮೆಟ್ರೋ ಮಾರ್ಗದಲ್ಲಿ ಅಧಿಕಾರಿಗಳಿಂದ ದುರಸ್ತಿ ರಸ್ತೆಗಳ ಪರಿಶೀಲನೆ

| Published : Sep 11 2024, 01:34 AM IST / Updated: Sep 11 2024, 10:29 AM IST

ಸಾರಾಂಶ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಎಸ್ಟಿಮ್‌ ಮಾಲ್‌ ನಿಂದ ಕೆಆರ್‌ ಪುರದವರೆಗಿನ ನೀಲಿ ಮೆಟ್ರೋ ಮಾರ್ಗದ ಕಾಮಗಾರಿ ನಡೆಯುತ್ತಿರುವ ರಸ್ತೆಗಳ ಪರಿಸ್ಥಿತಿಯನ್ನು ಮಂಗಳವಾರ ರಾತ್ರಿ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು ಜಂಟಿಯಾಗಿ ಪರಿಶೀಲಿಸಿದರು.

  ಬೆಂಗಳೂರು : ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಎಸ್ಟಿಮ್‌ ಮಾಲ್‌ ನಿಂದ ಕೆಆರ್‌ ಪುರದವರೆಗಿನ ನೀಲಿ ಮೆಟ್ರೋ ಮಾರ್ಗದ ಕಾಮಗಾರಿ ನಡೆಯುತ್ತಿರುವ ರಸ್ತೆಗಳ ಪರಿಸ್ಥಿತಿಯನ್ನು ಮಂಗಳವಾರ ರಾತ್ರಿ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು ಜಂಟಿಯಾಗಿ ಪರಿಶೀಲಿಸಿದರು.

ನೀಲಿ ಮೆಟ್ರೋ ಮಾರ್ಗದ ಸುಮಾರು ಮೂರ್ನಾಲ್ಕು ಕಡೆ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ರಸ್ತೆಗಳು ಹದಗೆಟ್ಟಿರುವುದನ್ನು ಪರಿಶೀಲಿಸಿ ಸರಿಪಡಿಸುವಂತೆ ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಏಪ್ರಿಲ್‌ನಿಂದ ಈವರೆಗೆ 4 ಸಾವಿರ ಗುಂಡಿ ಮುಚ್ಚಲಾಗಿದೆ. ಇನ್ನೂ ಎರಡು ಸಾವಿರ ರಸ್ತೆ ಗುಂಡಿ ಮುಚ್ಚುವುದು ಬಾಕಿ ಇದೆ. ವಾರ್ಡ್‌ ರಸ್ತೆ ಮತ್ತು ಮುಖ್ಯ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ರಸ್ತೆ ಗುಂಡಿ ಗಮನದಲ್ಲಿ ಬಂದಿರುವ ದೂರಿಗಿಂತ ನಾಲ್ಕು ಪಟ್ಟು ಹೆಚ್ಚಿನ ಸಂಖ್ಯೆಯ ಗುಂಡಿಗಳು ಇವೆ. ರಸ್ತೆ ಗುಂಡಿ ಮುಚ್ಚಲು ಪ್ರತಿ ವಾರ್ಡ್‌ಗೆ ಒಬ್ಬ ನೋಡಲ್‌ ಅಧಿಕಾರಿ ನೇಮಕ ಮಾಡಲಾಗಿದೆ. ಪ್ರತಿ ಐದು ಕಿ.ಮೀ ರಸ್ತೆಗೆ ಒಬ್ಬ ಎಂಜಿನಿಯರ್‌ ನೇಮಕ ಮಾಡಲಾಗಿದೆ. ಈ ಎಂಜಿನಿಯರ್‌ಗಳು ಗುಂಡಿಗಳನ್ನು ಮುಚ್ಚಿರುವುದನ್ನು ಪ್ರಮಾಣಿಕರಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.ಈ ವೇಳೆ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್, ಯಲಹಂಕ ವಲಯ ಆಯುಕ್ತ ಕರೀಗೌಡ, ಪೂರ್ವ ವಲಯದ ಸ್ನೇಹಲ್, ವಲಯ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್, ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್ ಉಪಸ್ಥಿತರಿದ್ದರು.

₹660 ಕೋಟಿ ವೆಚ್ಚದಲ್ಲಿ ಮುಖ್ಯ ರಸ್ತೆಗೆ ಡಾಂಬರ್‌

ಹಲವು ವರ್ಷದಿಂದ ನಗರದ ಮುಖ್ಯ ರಸ್ತೆಗಳ ಅಭಿವೃದ್ಧಿ ಕ್ರಮಕೈಗೊಂಡಿಲ್ಲ. ವಾರ್ಡ್‌ ರಸ್ತೆಗಳಿಗೆ ಹೆಚ್ಚಿನ ಪ್ರಮಾಣ ಹಣ ವೆಚ್ಚ ಮಾಡಲಾಗಿದೆ. ಈ ಬಾರಿ ನಗರದ 459 ಕಿ.ಮೀ. ಉದ್ದದ ಮುಖ್ಯ ರಸ್ತೆಗಳ ಮೇಲ್ಪದರ ತೆಗೆದು ಹೊಸದಾಗಿ ಡಾಂಬರಿಕರಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸುಮಾರು ₹660 ಕೋಟಿ ವೆಚ್ಚ ಮಾಡಲಾಗುತ್ತಿದೆ. ನವೆಂಬರ್‌ನಿಂದ ಕಾಮಗಾರಿ ಆರಂಭಿಸಲಾಗುವುದು ಎಂದು ತುಷಾರ್‌ಗಿರಿನಾಥ್‌ ತಿಳಿಸಿದರು.

ಎಸ್ಟಿಮ್‌ ಮಾಲ್‌ ನಿಂದ ವೀರಣ್ಣನಪಾಳ್ಯ, ಮಾನ್ಯತಾ ಟೆಕ್‌ ಪಾರ್ಕ್‌, ಕೆಆರ್‌ಪುರ ತಲುಪಿ ಅಲ್ಲಿಂದ ದಕ್ಷಿಣ ವಲಯದ ವಿವಿಧ ರಸ್ತೆಗಳನ್ನು ತಡ ರಾತ್ರಿ ವರೆಗೆ ಪರಿಶೀಲನೆ ನಡೆಸಿದರು.