ಧಾರವಾಡ:
ಹುಬ್ಬಳ್ಳಿ-ಧಾರವಾಡದಲ್ಲಿ ಅಮಾಯಕ ವಿದ್ಯಾರ್ಥಿಗಳನ್ನು ಗಾಂಜಾ ಪ್ರಕರಣದಲ್ಲಿ ಸಿಲುಕಿಸಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ಸಮಾನ ಮನಸ್ಕ ಗೆಳೆಯರ ಬಳಗ ಹಾಗೂ ಎಬಿವಿಪಿ ಮುಖಂಡರು ಜಂಟಿಯಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಗಾಂಜಾ ಡ್ರೈವ್ ವೇಳೆ ವಿದ್ಯಾರ್ಥಿಯ ಗಾಂಜಾ ಸೇವನೆಯ ವರದಿ ನೆಗೆಟಿವ್ ಬಂದಿದ್ದರೂ ಆತನಿಂದ ಹಣ ಪಡೆಯಲು ಯತ್ನಿಸಿ ಆತನ ಸಾವಿಗೆ ಪೊಲೀಸರು ಕಾರಣರಾಗಿರುವುದು ಅತ್ಯಂತ ನೋವಿನ ಸಂಗತಿ. ಗಾಂಜಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗಾಂಜಾ ಡ್ರೈವ್‌ಗೆ ನಮ್ಮದೂ ಬೆಂಬಲವಿದೆ. ಆದರೆ, ಇದೇ ಹೆಸರಿನಲ್ಲಿ ಪೊಲೀಸರು ಅಮಾಯಕರಿಗೆ ಕಿರುಕುಳ ಹಾಗೂ ಹಣದ ಹಿಂದೆ ಬಿದ್ದಿರುವುದು ವಿದ್ಯಾರ್ಥಿಗಳಿಗೆ ಆತಂಕ ತಂದಿದೆ ಎಂದು ಹೇಳಿದರು.
ಕಾನೂನನ್ನು ರಕ್ಷಿಸಬೇಕಾದವರು ಕಾನೂನಿನ ಹೆಸರಿನಲ್ಲಿ ಪೊಲೀಸರು ಅಮಾಯಕರ ಜೀವಗಳೊಂದಿಗೆ ಚೆಲ್ಲಾಟವಾಡುತ್ತಿರುವುದು ತಪ್ಪು. ಈ ಘಟನೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಮಾತ್ರ ಅಮಾನತು ಮಾಡಿದ್ದಲ್ಲದೇ ಅಧಿಕಾರಿಗಳ ಮೇಲೂ ಕ್ರಮವಾಗಬೇಕು. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾಜಿ ಶಾಸಕಿ ಸಿಮಾ ಮಸೂತಿ, ಸಮಿತಿ ಅಧ್ಯಕ್ಷ ಮೋಹನ ರಾಮದುರ್ಗ, ಶಿವಾನಂದ ಕವಳಿ, ಭೀಮರಾವ ಸವಣೂರ, ವೀರಯ್ಯ ಚಿಕ್ಕಮಠ, ಬಸವರಾಜ ಮಠಮತಿ, ಶ್ರೀಶೈಲ ಕಮತಿ, ಮಂಜು ಆರ್.ಬಿ., ವಿಜಯ ವಿ.ಎನ್. ಹಾಗೂ ಎಬಿವಿಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ ಡಾಂಗೆ, ಕಾರ್ಯಕರ್ತರಾದ ಸಚಿನ್ ಕೋಟ್ಯಾನ, ಅಭಿಷೇಕ ದೊಡಮನಿ, ಸುದರ್ಶನ ಹೆಗಡೆ, ಗೋಪಾಲ ಸುಲಾಖೆ ಇದ್ದರು.
ಪ್ರತಿಭಟನೆಯಲ್ಲಿ ಗಾಂಜಾ ಪೆಡ್ಲರ್ಪೊಲೀಸರ ಕಿರುಕುಳದಿಂದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿದ್ದ ಪ್ರತಿಭಟನೆ ಸ್ಥಳದಲ್ಲಿ ಗಾಂಜಾ ಪೆಡ್ಲರ್ ಮಂಜುನಾಥ ಎಂಬಾತ ಇದ್ದನು. ಈ ಹಿಂದೆ ಆತನ ಮೇಲೆ ಗಾಂಜಾ ವಿಷಯವಾಗಿ ಪ್ರಕರಣ ದಾಖಲಾಗಿತ್ತು. ಆತನ ಇರುವಿಕೆ ಪತ್ತೆ ಮಾಡಿದ ಪೊಲೀಸರು ವಶಕ್ಕೆ ಪಡೆದು ನಂತರ ಬಿಟ್ಟು ಕಳುಹಿಸಿದರು.