ಬಂಧನ ಭೀತಿಯಿಂದ ಇನ್ಸ್‌ಪೆಕ್ಟರ್ ಶಂಕರ್ ನಾಯ್ಕ್ ನಾಪತ್ತೆ

| Published : Aug 22 2024, 12:47 AM IST

ಬಂಧನ ಭೀತಿಯಿಂದ ಇನ್ಸ್‌ಪೆಕ್ಟರ್ ಶಂಕರ್ ನಾಯ್ಕ್ ನಾಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ರಾಮನಗರಬ್ಯಾಟರಾಯನಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣವೊಂದರ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯ ಇನ್ಸ್​​ಪೆಕ್ಟರ್ ಶಂಕರ್ ನಾಯ್ಕ್ ವಿರುದ್ಧದ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ. ಆದರೀಗ ಶಂಕರ್ ನಾಯ್ಕ್ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ.

ಹೈಕೋರ್ಟ್‌ನಿಂದ ತಡೆಯಾಜ್ಞೆ ಆದೇಶ ಹೊರ ಬೀಳುತ್ತಿದ್ದಂತೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ತಂಡ ತಲೆ ಮರೆಸಿಕೊಂಡಿರುವ ಬಿಡದಿ ಪೊಲೀಸ್ ಠಾಣೆಯ ಇನ್ಸ್​​ಪೆಕ್ಟರ್ ಶಂಕರ್ ನಾಯ್ಕ್​ಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಆದರೆ ಬಂಧನ ಭೀತಿಯಿಂದ ಶಂಕರ್ ನಾಯ್ಕ್ ರಜೆ ಹಾಕಿ ಪೊಲೀಸ್ ಠಾಣೆಯಲ್ಲಿಯೇ ಸಿಮ್ ಕಾರ್ಡ್ ಇಟ್ಟು, ತಮ್ಮ ಮೊಬೈಲ್ ಸ್ವಿಚ್​​ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.

ಏನಿದು ಪ್ರಕರಣ ?:

2022ರಲ್ಲಿ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಇನ್ಸ್​​ಪೆಕ್ಟರ್ ಶಂಕರ್ ನಾಯ್ಕ್ ಕಳ್ಳತನ ಪ್ರಕರಣದಲ್ಲಿ ಉದ್ಯಮಿ ಹರೀಶ್ ಎಂಬುವರ ಕಾರು ಚಾಲಕ ಸಂತೋಷ್‌ನನ್ನು ಬಂಧಿಸಿ ₹72 ಲಕ್ಷವನ್ನು ಜಪ್ತಿ ಮಾಡಿದ್ದರು. ಆದರೆ, ಈ ಹಣವನ್ನು ಠಾಣೆಯ ಸುಪರ್ದಿಗೆ ಕೊಡದೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಣ ಸಂಬಂಧ ಹಿರಿಯ ಅಧಿಕಾರಿಗಳು ನೋಟಿಸ್ ನೀಡಿದ ಬಳಿಕ ಚೀಲದಲ್ಲಿ ಹಣವನ್ನು ತುಂಬಿ ಠಾಣೆಗೆ ತಂದಿಟ್ಟು ಶಂಕರ್ ನಾಯ್ಕ್ ತೆರಳಿದ್ದರು.

ಕೊನೆಗೆ ಬ್ಯಾಟರಾಯನಪುರ ಠಾಣೆಯಲ್ಲಿ ಶಂಕರ್ ಹಾಗೂ ಮಧ್ಯವರ್ತಿ ಲೋಕನಾಥ್ ವಿರುದ್ಧ ಕೆಂಗೇರಿ ಗೇಟ್ ಉಪ ವಿಭಾಗದ ಎಸಿಪಿ ಭರತ್ ರೆಡ್ಡಿ ದೂರು ಆಧರಿಸಿ ಎಫ್‌ಐಆರ್ ದಾಖಲಾಯಿತು. 2023ರ ನವೆಂಬರ್‌ನಲ್ಲಿ ಎಫ್​ಐಆರ್ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆವಹಿಸಿ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದರು.

ಈ ಬಗ್ಗೆ ತನಿಖೆಗಿಳಿದ ಸಿಸಿಬಿ ಪೊಲೀಸರು, ಮಧ್ಯವರ್ತಿ ಲೋಕನಾಥ್ ಸಿಂಗ್‌ನನ್ನು ಬಂಧಿಸಿದ್ದರು. ಬಳಿಕ ಪ್ರಕರಣ ರದ್ದು ಕೋರಿ ಶಂಕರ್ ನಾಯ್ಕ್ ಹೈಕೋರ್ಟ್ ಮೆಟ್ಟಲೇರಿದ್ದರು. ಆಗ ಹೈಕೋರ್ಟ್ ಪ್ರಕರಣದ ತನಿಖೆಗೆ ತಡೆ ನೀಡಿತ್ತು. ಆದರೆ ತಡೆಯಾಜ್ಞೆ ತೆರವುಗೊಳಿಸುವಂತೆ ಸಿಸಿಬಿ ಮೇಲ್ಮನವಿ ಸಲ್ಲಿಸಿತ್ತು. ಈ ಹಿನ್ನೆಲೆ ಹೈಕೋರ್ಟ್ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದೆ.