ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿ

| Published : Aug 27 2024, 01:37 AM IST

ಸಾರಾಂಶ

ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಬೇಡ, ಧ್ವನಿ ವರ್ಧಕ, ಡಿಜೆ ಶಬ್ಧ 25ರಿಂದ 30 ಡೆಸಿಬಲ್‌ ಮೀರದಿರಲಿ. ನಗರದ ವಿವಿಧ ಗಣೇಶ ಮಹಾಮಂಡಳಿಯ ಅಧ್ಯಕ್ಷರು, ಸದಸ್ಯರು ಹಾಗೂ ಪದಾಧಿಕಾರಿಗಳ ಗಣೇಶ ಚತುರ್ಥಿ ಶಾಂತಿ ಸಭೆಯಲ್ಲಿ ಡೀಸಿ ಶಿಲ್ಪಾ ಶರ್ಮಾ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿ, ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಗರದ ವಿವಿಧ ಗಣೇಶ ಮಹಾಮಂಡಳಿಯ ಅಧ್ಯಕ್ಷರು, ಸದಸ್ಯರು ಹಾಗೂ ಪದಾಧಿಕಾರಿಗಳ ಗಣೇಶ ಚತುರ್ಥಿ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಬಾರದು. ಇದರಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಎಚ್ಚರಿಸಿದರು.

ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಿದರೆ ಬಹುಮಾನ: ಮಣ್ಣಿನಿಂದ ತಯಾರಿಸಿದ ಉತ್ತಮ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ಮಾಡುವವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಲೌಡ್‌ ಸ್ಪೀಕರ್‌ ರಾತ್ರಿ 10ರ ವರೆಗೆ ಉಪಯೋಗಿಸಬೇಕು ಮತ್ತು ಹೆಚ್ಚು ಶಬ್ದವನ್ನು ಇಟ್ಟು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು.

ಗಣೇಶ ಹಬ್ಬಕ್ಕೆ ಪೊಲೀಸ್‌, ನಗರಸಭೆ, ಜೆಸ್ಕಾಂ ಹಾಗೂ ಸಂಬಂಧಿಸಿದ ಇಲಾಖೆಯವರು ಅನುಮತಿ ನೀಡುತ್ತಾರೆ. ಸರ್ಕಾರದ ನಿರ್ದೇಶನಗಳನ್ನು ಪಾಲನೆ ಮಾಡುವ ಮೂಲಕ ಪ್ರತಿ ವರ್ಷದಂತೆ ಈ ವರ್ಷವೂ ಸೆ.7ರಿಂದ 11ರ ವರೆಗೆ ನಡೆಯುವ ಗಣೇಶ ಹಬ್ಬವನ್ನು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಎಲ್ಲರೂ ಸೇರಿ ಆಚರಿಸೋಣ ಎಂದು ಹೇಳಿದರು.

ಗಣೇಶ ಮಂಡಳಿಯವರು ತಮ್ಮ ಸದಸ್ಯರಿಗೆ ಗುರುತಿನ ಚೀಟಿ ಕೊಡಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡಬೇಕು. ಗಣೇಶ ಪ್ರತಿಷ್ಠಾಪನೆ ಮಂಡಳಿಯವರು ತಮ್ಮ ಸದಸ್ಯರಿಗೆ ಗುರುತಿನ ಚೀಟಿಗಳನ್ನು ನೀಡಬೇಕು ಮತ್ತು ನಮ್ಮ ಪೊಲೀಸ್‌ ಸಿಬ್ಬಂದಿಗೆ ತಮ್ಮ ಮಂಡಳಿಯಿಂದ ಸಹಕಾರ ನೀಡಬೇಕು ಎಂದು ತಿಳಿಸಿದರು.

ಎಲ್ಲಾ ಕಡೆ ನಮ್ಮ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ದೊಡ್ಡ ಮಟ್ಟದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸಬೇಕು. ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವ ಪೋಸ್ಟರ್‌, ಬ್ಯಾನರ್‌ಗಳನ್ನು ಅಳವಡಿಸಬಾರದು, ಧ್ವನಿ ವರ್ಧಕಗಳು, ಡಿಜೆಗಳ ಶಬ್ಧ 25ರಿಂದ 30 ಡೆಸಿಬಲ್‌ಗಳಿಗಿಂತ ಹೆಚ್ಚು ಇರದಂತೆ ನೋಡಿಕೊಳ್ಳಬೇಕೆಂದು ಹೇಳಿದರು.

ಗಣೇಶ ಮಂಡಳಿ ಸದಸ್ಯರು ಮಾತನಾಡಿ, ಕಳೆದ 40 ವರ್ಷಗಳಿಂದ ಗಣೇಶ ಹಬ್ಬವನ್ನು ಜಿಲ್ಲೆಯಲ್ಲಿ ಶಾಂತಿಯುತವಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ ಅದರಂತೆ ಈ ವರ್ಷ ಆಚರಣೆ ಮಾಡುತ್ತೇವೆ. ಮಳೆಗಾಲ ಇರುವುದರಿಂದ ಗಣೇಶ ಕೂಡಿಸುವ ಸ್ಥಳಗಳಲ್ಲಿ ನಗರ ಸಭೆಯಿಂದ ಸ್ವಚ್ಚತೆ ಮಾಡಿಸಬೇಕು. ವಿದ್ಯುತ್‌ ಕಡಿತ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿಸಿದರು.

ಬೀದರ್‌ ನಗರದ ಕೆಲವು ರಸ್ತೆಗಳಲ್ಲಿ ರಸ್ತೆ ಗುಂಡಿಗಳು ಬಿದ್ದಿದ್ದು ಅವುಗಳನ್ನು ನಗರಸಭೆ ವತಿಯಿಂದ ಸರಿಪಡಿಸಬೇಕು. ಗಣೇಶ ಚತುರ್ಥಿ ಸಂದರ್ಭದಲ್ಲಿ ಶಾಂತಿ ಪಾಲನೆಯಲ್ಲಿ ಪೊಲೀಸರ ಪಾತ್ರವು ಬಹಳ ಇದೆ ಎಂದು ಹೇಳಿದರು.

ಈ ಸಭೆಯಲ್ಲಿ ಜಿಪಂ ಸಿಇಒ ಡಾ. ಗಿರೀಶ ಬದೋಲೆ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬೀದರ್‌ ಸಹಾಯಕ ಆಯುಕ್ತರಾದ ಲವೀಶ್‌ ಓರ್ಡಿಯಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ, ಡಿವೈಎಸ್ಪಿ ಶಿವನಗೌಡ ಪಾಟೀಲ ಹಾಗೂ ನಗರಸಭೆ. ಜೆಸ್ಕಾಂ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಮತ್ತು ನಗರದ ವಿವಿಧ ಗಣೇಶ ಮಹಾಮಂಡಳಿಯ ಅಧ್ಯಕ್ಷರು. ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.