ವಸತಿ ಶಾಲೆ, ಹಾಸ್ಟೆಲ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ

| Published : Feb 24 2024, 02:31 AM IST

ಸಾರಾಂಶ

ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ನಾಮಫಲಕ ಅಳಡಿಕೆ ಕುರಿತಾಗಿ ಕೆಲ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಒಂದೇ ನಾಮಫಲಕದಲ್ಲಿ ಮಕ್ಕಳ ಸಹಾಯವಾಣಿ, ತಂಬಾಕು ಮುಕ್ತಶಾಲೆ, ಆರ್.ಟಿ.ಇ. ಮಾಹಿತಿ ಸೇರಿದಂತೆ ಎಲ್ಲವನ್ನೂ ಒಂದೇ ನಾಮಫಲಕದಲ್ಲಿ ಮುದ್ರಣ ಮಾಡಿ ಪ್ರದರ್ಶನ ಮಾಡಿರುವುದರಿಂದ ಮಕ್ಕಳಿಗೆ ಗೊಂದಲ

ಹಾವೇರಿ: ಜಿಲ್ಲೆಯಲ್ಲಿ ಕಾಯ ನಿರ್ವಹಿಸುತ್ತಿರುವ ವಸತಿ ಶಾಲೆಗಳು ಹಾಗೂ ವಸತಿ ನಿಲಯಗಳಲ್ಲಿ ಈವರೆಗೆ ಸಿಸಿಟಿವಿ ಕ್ಯಾಮೆರಾ ಹಾಗೂ ಸಲಹಾ ಪೆಟ್ಟಿಗೆ ಅಳವಡಿಸದೇ ಇರುವವರು ತಕ್ಷಣ ಅಳವಡಿಸುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತು ಭಾಗೀದಾರರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಸತಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಸಲಹಾ ಪೆಟ್ಟಿಗೆ ಕಡ್ಡಾಯವಾಗಿ ಅಳವಡಿಸಬೇಕು ಹಾಗೂ ಸಿಸಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿರುವ ಕುರಿತು ನಿಗಾ ವಹಿಸಲು ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ನಾಮಫಲಕ ಅಳಡಿಕೆ ಕುರಿತಾಗಿ ಕೆಲ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಒಂದೇ ನಾಮಫಲಕದಲ್ಲಿ ಮಕ್ಕಳ ಸಹಾಯವಾಣಿ, ತಂಬಾಕು ಮುಕ್ತಶಾಲೆ, ಆರ್.ಟಿ.ಇ. ಮಾಹಿತಿ ಸೇರಿದಂತೆ ಎಲ್ಲವನ್ನೂ ಒಂದೇ ನಾಮಫಲಕದಲ್ಲಿ ಮುದ್ರಣ ಮಾಡಿ ಪ್ರದರ್ಶನ ಮಾಡಿರುವುದರಿಂದ ಮಕ್ಕಳಿಗೆ ಗೊಂದಲವಾಗುತ್ತದೆ. ಈ ಕಾರಣದಿಂದ ಮಕ್ಕಳ ಸಹಾಯವಾಣಿ ಸಂಖ್ಯೆ ನಮೂದಿಸಿ ಲೊಗೋದೊಂದಿಗೆ ನಿರ್ದಿಷ್ಟ ಬಣ್ಣದಲ್ಲಿ ಮುದ್ರಣ ಮಾಡಿ ಶಾಲೆಯ ಮುಖ್ಯ ಭಾಗದಲ್ಲಿ ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು.

ಬಹಳಷ್ಟು ಶಾಲೆಗಳಲ್ಲಿ ಮಕ್ಕಳ ಸಲಹಾ ಪೆಟ್ಟಿಗೆಯನ್ನು ಶಾಲಾ ಮುಖ್ಯ ಶಿಕ್ಷಕರ ಟೇಬಲ್ ಮೇಲೆ ಇರಿಸಲಾಗಿದೆ. ಕೆಲವೆಡೆ ಮಕ್ಕಳ ಕೈಗೆಟುಕದ ರೀತಿಯಲ್ಲಿ ಅಳವಡಿಸಲಾಗಿದೆ. ಇದರಿಂದ ಯಾವುದೇ ಪ್ರಯೋಜವಾಗುವುದಿಲ್ಲ. ಪ್ರತಿ ಶಾಲೆಗಳಲ್ಲೂ ಮಕ್ಕಳ ಕೈಗೆ ಸಿಗುವಂತೆ ಶಾಲೆಯ ಮುಖ್ಯಸ್ಥಳದಲ್ಲಿ ಅಳವಡಿಸಿ ಎಂದು ಸೂಚನೆ ನೀಡಿದರು.

ಶಾಲೆಗಳಲ್ಲಿ ಮಾತ್ರವಲ್ಲದೇ ಪದವಿ ಪೂರ್ವ ಕಾಲೇಜುಗಳಲ್ಲಿ ಪೋಕ್ಸೋ ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತಂತೆ ವಿಚಾರ ಸಂಕಿರಣ, ಸಂವಾದ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ವ್ಯಾಪಕವಾಗಿ ಕೈಗೊಳ್ಳಬೇಕು ಎಂದು ಸೂಚಿಸಿದರು.

ಬಾಲ್ಯ ವಿವಾಹ ತಡೆಯುವಲ್ಲಿ ಶಾಲೆಯ ಮುಖ್ಯೋಪಾಧ್ಯಾಯರ ಪಾತ್ರ ಪ್ರಮುಖವಾಗಿದೆ. ಕೆಲ ಪೋಷಕರು ಮಕ್ಕಳನ್ನು ಬಾಲ್ಯವಿವಾಹ ನಡೆಸುವ ಸಲುವಾಗಿ ಮುಖ್ಯೋಪಾಧ್ಯಾಯರಿಗೆ ಶಾಲಾ ದಾಖಲಾತಿಗಳಲ್ಲಿ ವಯೋಮಾನ ತಿದ್ದುಪಡಿ ಮಾಡಿಕೊಡುವಂತೆ ಒತ್ತಡ ಹಾಗೂ ಆಮಿಷವೊಡ್ಡಲಾಗುತ್ತಿದೆ. ಇಂತಹ ಆಮಿಷಕ್ಕೆ ಒಳಗಾದೇ ಮಕ್ಕಳ ಭವಿಷ್ಯದ ಹಿತ ಕಾಪಾಡುವಂತೆ ಮನವಿ ಮಾಡಿಕೊಂಡರು. ಬಾಲ್ಯ ವಿವಾಹ ತಡೆ ಎಂಬುದು ಕೇವಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಮಾತ್ರ ಸೀಮಿತವಾಗಿಲ್ಲ. ಪ್ರತಿಯೊಂದು ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ಜವಾಬ್ದಾರಿಯಿಂದ ಅರಿತು ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಶಾಲಾ ಅವಧಿ ಮುಗಿದ ನಂತರ ಕೆಲವರು ಶಾಲಾ ಆವರಣವನ್ನು ಅನೈತಿಕ ಕಾರ್ಯಗಳಿಗೆ ಬಳಸಿಕೊಳ್ಳುವ ದೂರುಗಳು ಬಂದಿವೆ. ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸ್ ಬೀಟ್ ಹಾಕಿ ನಿಗಾ ವಹಿಸಲು ಸೂಚನೆ ನೀಡಿದರು.

ಮೊಬೈಲ್ ಗೀಳಿನಿಂದ ಮಕ್ಕಳಲ್ಲಿ ಅಪರಾಧ ಮನೋಭಾವ ಬೆಳೆಯುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಇದರಿಂದ ಸೈಬರ್ ಅಪರಾಧಗಳಲ್ಲಿ ಮಕ್ಕಳು ಸಿಲುಕುತ್ತಿದ್ದಾರೆ. ಪಾಲಕರು ಸೇರಿದಂತೆ ಶಿಕ್ಷಕರು ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರ ಇಡುವ ಕುರಿತಂತೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಮಾತನಾಡಿ, ಮಕ್ಕಳ ರಕ್ಷಣಾ ಆಯೋಗ ನೀಡಿದ ಸೂಚನೆ ಹಾಗೂ ಸಲಹೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಿ ಲಿಖಿತ ವರದಿ ನೀಡುವಂತೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷ ಎಸ್.ಎಚ್. ಮಜೀದ್, ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ ಕೌಸರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.