ಸಾರಾಂಶ
ಧಾರವಾಡ: ಪ್ರತಿ ಶಾಲೆಗಳಲ್ಲಿ ನಿಯಮಿತ ಸಮಯಕ್ಕೆ ಶಿಕ್ಷಕರು ಹಾಜರಿದ್ದು, ಶಾಲಾ ಅವಧಿ ನಂತರ ತೆರಳುವುದನ್ನು ಖಾತರಿ ಮಾಡಿಕೊಳ್ಳಲು ಬಯೋಮೆಟ್ರಕ್ ಮತ್ತು ಫೇಸ್ ರೆಕಗ್ನೇಷನ್ ಯಂತ್ರ ಅಳವಡಿಸಲು ಚಿಂತಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿವಿಧ ಹಂತದ ಅಧಿಕಾರಿಗಳ ಸಭೆ ಜರುಗಿಸಿದ ಅವರು, ಮಷಿನ್ ಅಳವಡಿಕೆ ನಂತರ ಎಲ್ಲ ಶಿಕ್ಷಕರು, ಸಿಬ್ಬಂದಿ ನಿಗದಿತ ಸಮಯಕ್ಕೆ ಹಾಜರಿದ್ದು ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಮೂರು ಅವಧಿಯಲ್ಲಿ ಹಾಜರಾತಿ ದಾಖಲಿಸಿ, ಅದನ್ನು ಎಚ್.ಆರ್.ಎಂ.ಎಸ್.ದೊಂದಿಗೆ ಲಿಂಕ್ ಮಾಡಿ, ಹಾಜರಾತಿ ತಕ್ಕಂತೆ ವೇತನ ಪಾವತಿ ಆಗುವ ಸೌಲಭ್ಯ ಮಾಡಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಿ ಪಾಲಿಸಬೇಕು ಎಂದರು.ಹೆಚ್ಚುವರಿ ಕೆಲಸಕ್ಕೆ ವಿನಾಯ್ತಿ: ಮಿಷನ್ ವಿದ್ಯಾಕಾಶಿ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಮತ್ತು ಜಿಲ್ಲೆಯ ಶೈಕ್ಷಣಿಕ ಸುಧಾರಣೆಗಾಗಿ ಜಿಲ್ಲಾಡಳಿತ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಶಾಲಾ ಅವಧಿಯಲ್ಲಿ ಶಾಲೆಯಲ್ಲಿ ಇದ್ದು, ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಆಸಕ್ತಿ, ಕಾಳಜಿವಹಿಸುವುದು ಅವಶ್ಯವಿದೆ. ಆದ್ದರಿಂದ ಜಿಲ್ಲೆಯ ವಿವಿಧ ಕ್ಷೇತ್ರಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಹೊಸದಾಗಿ ಪ್ರೌಢಾಲಾ ಶಿಕ್ಷಕರನ್ನು ಬಿಎಲ್‌ಓ ಆಗಿ ನಿಯೋಜಿಸಲಾಗುತ್ತಿರುವುದನ್ನು ನಿಲ್ಲಿಸಲಾಗಿದೆ. ಈಗಾಗಲೇ ಆದೇಶವಾಗಿದ್ದರೆ ಅದನ್ನು ರದ್ದುಪಡಿಸಿ, ಅವರಿಗೆ ಶಾಲೆಯಲ್ಲಿ ಹೆಚ್ಚುವರಿ ಪಾಠ ಮಾಡಲು ಅನುಕೂಲ ಮಾಡಲಾಗುತ್ತದೆ. ಶಿಕ್ಷಕರಿಗೆ ಹೆಚ್ಚುವರಿ ಕೆಲಸ ಜವಾಬ್ದಾರಿಯನ್ನು ಹಂತಹಂತವಾಗಿ ಕಡಿಮೆ ಮಾಡಲಾಗುತ್ತಿದೆ. ಶಿಕ್ಷಕರು ಪ್ರಾಮಾಣಿಕತೆ ಮತ್ತು ಹೆಚ್ಚು ಕಾಳಜಿಯಿಂದ ತಮ್ಮನ್ನು ತಾವು ಶೈಕ್ಷಣಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿ ವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2025-26ನೇ ಸಾಲಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ವಿತರಿಸಲು ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದ್ದು, ಪಾರದರ್ಶಕವಾಗಿ ಖರೀದಿಸಬೇಕು. ಈ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಸರಿಯಾದ ಮಾಹಿತಿ, ಸಮನ್ವಯ ಮಾಡಿ, ನಿಯಮ ಪಾಲನೆಯಲ್ಲಿ ಲೋಪವಾಗದಂತೆ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಲು ತಿಳಿಸಿದರು.ಈಗಾಗಲೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿದ ಬಗ್ಗೆ ಎಲ್ಲ ಬಿಇಓ ಅವರು ಕೂಡಲೆ ವರದಿ ಸಲ್ಲಿಸಬೇಕು. ಕೆಲವು ಶಾಲೆಗಳಲ್ಲಿ ಸರಿಯಾಗಿ ಸಮವಸ್ತ್ರ ವಿತರಿಸದಿರುವುದರ ಬಗ್ಗೆ ದೂರುಗಳಿವೆ. ಈ ವಾರದೊಳಗೆ ವಿದ್ಯಾರ್ಥಿಗಳಿಗೂ ಎರಡು ಜೊತೆ ಸಮವಸ್ತ್ರದ ಬಟ್ಟೆ, ಪಠ್ಯಪುಸ್ತಕ ವಿತರಿಸಿ, ಅದರ ಬಗ್ಗೆ ವರದಿ ಸಲ್ಲಿಸಲು ಸೂಚಿಸಿದರು.
ಪ್ರಸಕ್ತ ಸಾಲಿನ ಜೂನ್ ತಿಂಗಳ ಅಂತ್ಯದ ವರೆಗೆ ಜಿಲ್ಲೆಯಲ್ಲಿ 1 ರಿಂದ 10ನೇ ತರಗತಿ ವರೆಗೆ ಒಟ್ಟು 3,39,109 ವಿದ್ಯಾರ್ಥಿಗಳು ನೋಂದಣಿ ಆಗಿದ್ದಾರೆ. ಈ ಪೈಕಿ 33,588 ಸಾಮಾನ್ಯ, 35,861 ಪರಿಶಿಷ್ಟ ಜಾತಿ, 17,977 ಪರಿಶಿಷ್ಟ ಪಂಗಡ, 2,51,583 ಹಿಂದುಳಿದ ವರ್ಗ ಹಾಗೂ 89,963 ಅಲ್ಪಸಂಖ್ಯಾತ ವಿದ್ಯಾರ್ಥಿಗಳು ನೋಂದಣಿ ಆಗಿದ್ದಾರೆ. ಮಕ್ಕಳ ಶಾಲಾ ಹಾಜರಾತಿ ಹೆಚ್ಚಳಕ್ಕೆ ಮತ್ತು ಪರಿಣಾಮಕಾರಿಯಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಮುದಾಯಗಳ ಸಹಕಾರ ಕೋರುತ್ತೇವೆ. ಈ ಕುರಿತು ಚರ್ಚಿಸಲು ವಿವಿಧ ಸಮುದಾಯಗಳೊಂದಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಪ್ರತ್ಯೇಕ ಸಭೆ ಅಯೋಜಿಸಲಿದೆ ಎಂದರು.ಜಿಪಂ ಸಿಇಓ ಭುವನೇಶ ಪಾಟೀಲ ಮಾತನಾಡಿ, ಶೈಕ್ಷಣಿಕ ಸುಧಾರಣೆಗೆ ಸಮುದಾಯದ ಪಾಲ್ಗೊಳ್ಳುವಿಕೆ ಮುಖ್ಯ. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿನಲ್ಲಿ ಎಲ್ಲ ಶಾಲೆಗಳ ಎಸ್.ಡಿ.ಎಂ.ಸಿ ಅಧ್ಯಕ್ಷರ, ಸದಸ್ಯರ, ಪಾಲಕರ ಸಮಿತಿ ಅಧ್ಯಕ್ಷರ ಹಾಗೂ ಇಲಾಖೆ ಅಧಿಕಾರಿಗಳ ಸಭೆ ಆಯೋಜಿಸಲಾಗುವುದು. ಬಿಇಓ, ಡಿಡಿಪಿಐ ಕಚೇರಿಯಲ್ಲಿ ಕಾಲ ಕಳೆಯದೆ ಶಾಲೆಗಳಿಗೆ ನಿರಂತರವಾಗಿ ಭೇಟಿ ನೀಡಿ, ಪರಿಶೀಲಿಸಬೇಕು. ಶಿಕ್ಷಕರ, ವಿದ್ಯಾರ್ಥಿಗಳ ಬಗ್ಗೆ ಗಮನಹರಿಸಬೇಕು ಎಂದರು.
ಡಿಡಿಪಿಐ ಎಸ್.ಎಸ್. ಕೆಳದಿಮಠ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿದ್ದರು.