ತುಂಗಭದ್ರಾ ಜಲಾಶಯದ ಎಲ್ಲ 33 ನೂತನ ಕ್ರಸ್ಟ್‌ಗೇಟ್‌ ಅಳವಡಿಸಲು ಜೂನ್ ತಿಂಗಳೊಳಗಾಗಿ ಪೂರ್ಣಗೊಳಿಸಲು ಟೈಮ್ ಬಾಂಡ್

ಕೊಪ್ಪಳ: ನಮ್ಮ ಭಾಗದ ಲಕ್ಷಾಂತರ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್‌ಗೇಟ್‌ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಮೇ ಅಂತ್ಯಕ್ಕೆ ಅಳವಡಿಸಿ, ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು.

ಅವರು ಭಾನುವಾರ ತುಂಗಭದ್ರಾ ಡ್ಯಾಂಗೆ ಭೇಟಿ ನೀಡಿ ನೂತನ ಕ್ರಸ್ಟ್ ಗೇಟ್‌ ಅಳವಡಿಕೆ ಕಾರ್ಯ ಪರಿಶೀಲಿಸಿ ಮಾತನಾಡಿದರು.

ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್‌ಗೇಟ್ ಅಳವಡಿಸುವ ಕುರಿತಂತೆ ಚಳಿಗಾಲ ಅಧಿವೇಶನಕ್ಕೂ ಪೂರ್ವದಲ್ಲಿ ಕೆಎನ್ಎನ್ಎಲ್ ಹಾಗೂ ತುಂಗಭದ್ರಾ ಮಂಡಳಿಯ ಅಧಿಕಾರಿಗಳು ಮತ್ತು ಕ್ರಸ್ಟ್‌ಗೇಟ್ ಅಳವಡಿಕೆ ಕಂಪನಿಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿತ್ತು. ಆನಂತರ ಈ ಕೆಲಸ ಪ್ರಾರಂಭಿಸಲಾಗಿತ್ತು. ಅದರಂತೆ ತುಂಗಭದ್ರಾ ಅಣೆಕಟ್ಟಿನ ನೂತನ ಕ್ರಸ್ಟ್‌ಗೇಟ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಇಂದು ಗೇಟ್ ಸಂಖ್ಯೆ 18ರ ಕೆಲಸ ಪೂರ್ಣಗೊಂಡಿದೆ. ಕ್ರಸ್ಟ್‌ಗೇಟ್‌ಗಳ ಎರೆಕ್ಷನ್ ಮತ್ತು ಡಿಸ್‌ಮೆಟಲಿಂಗ್ ಕಾರ್ಯಕ್ಕೆ ತಲಾ ಎರಡು ತಂಡಗಳಾಗಿ ಕಾರ್ಯನಿರ್ವಹಿಸುತ್ತಿವೆ. ಮೊದಲ ಬಾರಿಗೆ ಗೇಟ್ ಸಂಖ್ಯೆ 18ರಿಂದ ಕೆಲಸ ಆರಂಭಿಸಿದ್ದು, ಇದನ್ನು ಪೂರ್ಣಗೊಳಿಸಲು 8 ದಿನ ತೆಗೆದುಕೊಂಡಿದ್ದಾರೆ. ಗೇಟ್ ಸಂಖ್ಯೆ 15 ಕೆಲಸ ಸಹ ಪೂರ್ಣಗೊಳ್ಳುವ ಹಂತದಲ್ಲಿದೆ. ಆರಂಭದಲ್ಲಿ ತಿಂಗಳಲ್ಲಿ 6 ಗೇಟ್ ಅಳವಡಿಸುವುದಾಗಿ ಕಂಪನಿಯವರು ಹೇಳಿದ್ದರು.

ಈಗ ಒಂದು ತಿಂಗಳಲ್ಲಿ 8 ಗೇಟ್‌ ಅಳವಡಿಸುವುದಾಗಿ ಹೇಳುತ್ತಿದ್ದಾರೆ. ತುಂಗಭದ್ರಾ ಜಲಾಶಯದ ಎಲ್ಲ 33 ನೂತನ ಕ್ರಸ್ಟ್‌ಗೇಟ್‌ ಅಳವಡಿಸಲು ಜೂನ್ ತಿಂಗಳೊಳಗಾಗಿ ಪೂರ್ಣಗೊಳಿಸಲು ಟೈಮ್ ಬಾಂಡ್ ನೀಡಲಾಗಿದ್ದು, ಮೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಟೆಂಡರ್ ಪಡೆದ ಕಂಪನಿಯವರು ತಿಳಿಸಿದ್ದಾರೆ ಎಂದರು.

ಎಲ್ಲ 33 ಕ್ರಸ್ಟ್‌ಗೇಟ್‌ ಬದಲಾಯಿಸಲು ಒಟ್ಟು ₹54 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದು ಕೆಲಸ ಆರಂಭಿಸಲಾಗಿದೆ. ನೂತನ ಕ್ರಸ್ಟ್‌ಗೇಟ್‌ ಅಳವಡಿಕೆ ಕಾರ್ಯಕ್ಕಾಗಿ ಈಗಾಗಲೇ ಆಂಧ್ರಪ್ರದೇಶ ರಾಜ್ಯದಿಂದ ₹20 ಕೋಟಿ ನೀಡಿದ್ದಾರೆ. ನಮ್ಮ ರಾಜ್ಯದ ಪಾಲು ₹10 ಕೋಟಿ ಸಹ ಟಿಬಿ ಬೋರ್ಡ್‌ಗೆ ಈಗಾಗಲೇ ನೀಡಲಾಗಿದೆ. ತೆಲಂಗಾಣ ರಾಜ್ಯದವರು ಸಹ ತಮ್ಮ ಪಾಲಿನ ಮೊತ್ತ ನೀಡಲಿದ್ದಾರೆ. ಈಗಾಗಲೇ 15 ಗೇಟ್‌ಗಳ ಫ್ಯಾಬ್ರಿಕೇಶನ್ ಪೂರ್ಣಗೊಂಡಿದ್ದು, ಅಳವಡಿಕೆ ಮಾತ್ರ ಬಾಕಿಯಿದೆ. 8 ಗೇಟು ಫ್ಯಾಬ್ರಿಕೇಶನ್ ಹಂತದಲ್ಲಿದ್ದು, ಹೊಸಪೇಟೆ ಮತ್ತು ಗದಗ ಜಿಲ್ಲೆಯಲ್ಲಿ ತಲಾ 4 ಗೇಟ್‌ಗಳ ಪೈಕಿ ತಲಾ ಎರಡು ಗೇಟ್‌ ಇನ್ನೂ ಎರಡು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದರ ಜತೆಗೆ ಆಯಾ ಗೇಟ್‌ಗಳ ಡಿಸ್‌ಮೆಟಲಿಂಗ್ ಪೂರ್ಣಗೊಂಡಿದೆ ಮತ್ತು ಇತರ ಎಲ್ಲ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದಕ್ಕಾಗಿ ನಮ್ಮ ಸರ್ಕಾರವು ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ನಮ್ಮ ಸರ್ಕಾರದ ಅಧಿಕಾರಿಗಳು ಮತ್ತು ಟಿಬಿ ಬೋರ್ಡಿನ ಅಧಿಕಾರಿಗಳು ಸಹ ಇದಕ್ಕಾಗಿ ಶ್ರಮವಹಿಸುತ್ತಿದ್ದಾರೆ ಎಂದು ಹೇಳಿದರು.

ಟಿಬಿ ಬೋರ್ಡ್ ಕಾರ್ಯದರ್ಶಿ ಒ.ಆರ್.ಕೆ. ರೆಡ್ಡಿ ಮಾತನಾಡಿ, ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್‌ಗೇಟ್ ಅಳವಡಿಸುವ ಡಿಸ್‌ಮೆಟಲಿಂಗ್ ಮತ್ತು ಎರೆಕ್ಷನ್ ಎರಡು ಕೆಲಸ ನಡೆಯುತ್ತಿವೆ. ಗೇಟ್ ಸಂಖ್ಯೆ 18 ಮತ್ತು 20ರ ಕೆಲಸವು ಪೂರ್ಣಗೊಂಡಿದೆ. ಗೇಟ್ ಸಂಖ್ಯೆ 27ರ ಕೆಲಸ ಮೂರು ದಿನದಲ್ಲಿ ಕೈಗೊಳ್ಳಲಾಗುವುದು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಎಸ್ಪಿ ಡಾ. ರಾಮ್ ಎಲ್.ಅರಸಿದ್ದಿ, ಟಿಬಿ ಬೋರ್ಡ್ ಅಧೀಕ್ಷಕ ಅಭಿಯಂತರ ನಾರಾಯಣ ನಾಯ್ಕ, ಸೆಕ್ಷನ್ ಅಧಿಕಾರಿ ಜಿ.ಕಿ ರಣ ಮತ್ತು ಪಂಪಾಪತಿ ಡಿ.ಕೆ., ಕೆಎನ್ಎನ್ಎಲ್ ಎಇಇ ಧರ್ಮರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.