ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ಮಹಾನಗರ ಪಾಲಿಕೆಯಲ್ಲಿ ಶನಿವಾರ ನಡುರಾತ್ರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಪ್ರಮೇಯ ಬಂದೊದಗಿದೆ. ಎಂದಿನಂತೆ ಗಣೇಶ ಪ್ರತಿಷ್ಠಾಪನೆ ಮಾಡದೆ ನಿರ್ಲಕ್ಷ್ಯವಹಿಸಿದ್ದ ಪಾಲಿಕೆ ಮೇಯರ್ ಮೆಹೆಜಬಿನ್ ಹೊರ್ತಿ ವರ್ತನೆ ಖಂಡಿಸಿ ರಾತ್ರೋರಾತ್ರಿ ಪಾಲಿಕೆಯ ಕೆಲ ಸದಸ್ಯರು ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.

ಈ ಹಿಂದೆ ಪ್ರತಿ ವರ್ಷ ಪಾಲಿಕೆಯಲ್ಲಿ ಗಣೇಶ ಚತುರ್ಥಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಆಚರಣೆ ಮಾಡಲಾಗುತ್ತಿತ್ತು. ಜೊತೆಗೆ ಎಲ್ಲ ಸಿಬ್ಬಂದಿಗಳ ಒಂದು ದಿನದ ವೇತನ ಹಬ್ಬಕ್ಕೆ ನೀಡಲಾಗುತ್ತಿತ್ತು. ಗಣಪನ ಮೂರ್ತಿಗೆ ಸತ್ಯ ನಾರಾಯಣ ಪೂಜೆ ಹಾಗೂ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಗಣಪತಿ ಹಬ್ಬದ ಆಚರಣೆಯ ವಿಷಯೇ ಇರಲಿಲ್ಲ.ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಮೇಯರ್ ಮೆಹಜಬೀನ್ ಹೊರ್ತಿ, ಉಪ ಮೇಯರ್ ದಿನೇಶ ಹಳ್ಳಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿ, ಪಾಲಿಕೆ ಸದಸ್ಯರಾದ ರಾಹುಲ ಜಾಧವ, ಕಿರಣ ಪಾಟೀಲ್, ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ ಗಡಗಿ, ರಾಜಶೇಖರ ಮಗಿಮಠ, ಬಂದೇನವಾಜ್ ಬೀಳಗಿ, ಜಮೀರ್ ಬಾಂಗಿ, ಜವಾಹರ ಗೋಸಾವಿ, ಮಾಜಿ ಸದಸ್ಯ ರಾಜೇಶ ದೇವಗಿರಿ ಹಾಗೂ ಇತರರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ, ತಾವೇ ಶಾಸ್ತ್ರೋಕ್ತವಾಗಿ ಗಣಪನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಗಣೇಶನ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದ ವೇಳೆ, ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.
ಈ ಹಿಂದೆ ಪಾಲಿಕೆಯ ನೆಲ ಮಹಡಿಯ ಪ್ರವೇಶ ದ್ವಾರದ ಎದುರು ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಜಿಬಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಕಳೆದ ಜುಲೈನಲ್ಲಿ ಅಂಬೇಡ್ಕರ್ ಮೂರ್ತಿ ಇಡಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ನಂತರ ಅಂಬೇಡ್ಕರ್ ಹಾಗೂ ಇತರೆ ಮಹಾನ್ ನಾಯಕರ ಮೂರ್ತಿಗಳನ್ನು ಆವರಣದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಭರವಸೆ ನೀಡಿ ವಿವಾದಕ್ಕೆ ತೆರೆ ಎಳೆಯಲಾಗಿತ್ತು. ಈಗ ಚೌತಿಯ ದಿನ ಗಣೇಶನ ಮೂರ್ತಿ ಪ್ರತಿಷ್ಠಾಪಿಸದ ಕಾರಣ ಪಾಲಿಕೆಯ ಹಾಲಿ ಮಾಜಿ ಸದಸ್ಯರು ಗಣಪನ ಮೂರ್ತಿಯಿಟ್ಟು ಪೂಜೆ ಸಲ್ಲಿಸಿದ್ದಾರೆ.