ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ಗಾಯತ್ರಿದೇವಿಯ ಪ್ರತಿಷ್ಠಾಪನೆ

| Published : May 06 2025, 12:20 AM IST

ಸಾರಾಂಶ

ವಿದ್ವಾನ್ ಗಣೇಶ ಸರಳಾಯರ ನೇತೃತ್ವದಲ್ಲಿ, ವಿಖ್ಯಾತ್ ಭಟ್ ಸಹಭಾಗಿತ್ವದಲ್ಲಿ ಋತ್ವಿಜರ ಸಹಕಾರದೊಂದಿಗೆ ಸುವಾಸಿನಿ ಆರಾಧನೆ, ದಂಪತಿ ಆರಾಧನೆ, ಆಚಾರ್ಯ ಪೂಜೆ, ಕನ್ನಿಕಾ ಪೂಜೆ ನಡೆಸಲಾಯಿತು. ಶಾಸ್ತ್ರೋಕ್ತವಾಗಿ ಗಾಯತ್ರಿ ದೇವಿಯ ಪ್ರತಿಷ್ಠೆ ನೆರವೇರಿಸಿದ ಕ್ಷೇತ್ರದ ತಂತ್ರಿಗಳಿಗೆ ಚಿನ್ನದ ಉಂಗುರ ತೊಡಿಸಿ ಗೌರವಿಸಲಾಯಿತು.

ದೇವಿಗೆ ಪಂಚವಿಂಶತಿ ದ್ರವ್ಯಮಿಳಿತ ಏಕೋತ್ತರ ತ್ರಿಶತ ಬ್ರಹ್ಮಕುಂಭಾಭಿಷೇಕ ಸಂಪನ್ನ

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಕಪಿಲ ಮಹರ್ಷಿಗಳ ಸಾನ್ನಿಧ್ಯ, ಗಾಯತ್ರಿ ಧ್ಯಾನಪೀಠದಲ್ಲಿ ನೂತನವಾಗಿ ಶಿಲಾಮಯ ಗುಡಿಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಪಂಚಮುಖಿ ಗಾಯತ್ರಿ ದೇವಿಯ ಶಿಲಾಬಿಂಬ ಪ್ರತಿಷ್ಠೆ ಪ್ರಯುಕ್ತ ಪಂಚವಿಂಶತಿ ದ್ರವ್ಯಮಿಳಿತ ಏಕೋತ್ತರ ತ್ರಿಶತ ಬ್ರಹ್ಮಕುಂಭಾಭಿಷೇಕ ನೆರವೇರಿತು.ವಿದ್ವಾನ್ ಗಣೇಶ ಸರಳಾಯರ ನೇತೃತ್ವದಲ್ಲಿ, ವಿಖ್ಯಾತ್ ಭಟ್ ಸಹಭಾಗಿತ್ವದಲ್ಲಿ ಋತ್ವಿಜರ ಸಹಕಾರದೊಂದಿಗೆ ಸುವಾಸಿನಿ ಆರಾಧನೆ, ದಂಪತಿ ಆರಾಧನೆ, ಆಚಾರ್ಯ ಪೂಜೆ, ಕನ್ನಿಕಾ ಪೂಜೆ ನಡೆಸಲಾಯಿತು. ಶಾಸ್ತ್ರೋಕ್ತವಾಗಿ ಗಾಯತ್ರಿ ದೇವಿಯ ಪ್ರತಿಷ್ಠೆ ನೆರವೇರಿಸಿದ ಕ್ಷೇತ್ರದ ತಂತ್ರಿಗಳಿಗೆ ಚಿನ್ನದ ಉಂಗುರ ತೊಡಿಸಿ ಗೌರವಿಸಲಾಯಿತು.ಪಂಚಗವ್ಯ ಪುಣ್ಯಾಹ, ಮಂಗಳ ಗಣಯಾಗ, ಪಂಚಾಮೃತ ಅಭಿಷೇಕ, ಋಕ್‌ಸಂಹಿತ ಅಭಿಮಂತ್ರಿತ ಮಧು ಅಭಿಷೇಕ, ಸೌರ ಸೂಕ್ತ ಹೋಮ, ನ್ಯಾಸ ಪೂಜೆ, ಮಹಾಪೂಜೆ, ಪಲ್ಲಪೂಜೆ ಹಾಗೂ ವಿವಿಧ ಧಾರ್ಮಿಕ ಪ್ರಕ್ರಿಯೆಗಳೊಂದಿಗೆ ಸಹಿತ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ಪಂಚ ವಾದ್ಯ ಗೋಷ್ಠಿ, ಚೆಂಡೆ ವಾದನ, ವೇದ ಘೋಷಗಳೊಂದಿಗೆ ಜರುಗಿತು.ಮಧ್ಯಾಹ್ನ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಕ್ಷೇತ್ರದ ಗಾಯತ್ರಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಗ್ರಿ ಪ್ರಕಾಶ್ ನಾಯಕ್ ಮತ್ತು ಬಳಗದವರಿಂದ ಸುಗಮ ಸಂಗೀತ ಮತ್ತು ಭಜನೆ ಸಂಕೀರ್ತನೆ, ಅಮ್ಮ ಕಲಾವಿದೆರ್ ಕುಡ್ಲ ಅವರಿಂದ ‘ಅಮ್ಮೆರ್’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.

-------------ಪಂಚಮುಖಿ, ದಶಭುಜ ಗಾಯತ್ರಿ

ಬೇರೆಲ್ಲ ದೇವರ ವಿಗ್ರಹ, ಬಿಂಬ, ದೇವಾಲಯ ಸರ್ವೇಸಾಮಾನ್ಯವಾಗಿ ಎಲ್ಲೆಡೆ ಕಾಣಸಿಗುತ್ತದೆ. ಆದರೆ ಗಾಯತ್ರಿ ದೇವಿಯ ವಿಗ್ರಹ ಅಥವಾ ದೇವಾಲಯ ಕಾಣಸಿಗುವುದು ತುಂಬಾ ವಿರಳ. ವಿಶೇಷವಾಗಿ ಪದ್ಮಾಸನದಲ್ಲಿ ಕುಳಿತ, ಶಂಖ, ಚಕ್ರ, ವರದ, ಅಭಯ, ಅಂಕುಶ, ಶೂಲ, ಕಪಾಲ, ಗಧೆ ಹಾಗೂ ಎರಡೂ ಕೈಯಲ್ಲಿ ಪದ್ಮ ಹೀಗೆ ಹತ್ತು ಕೈಗಳಿರುವ ಈ ಪಂಚಮುಖಿ ಗಾಯತ್ರಿ ದೇವಿಯ ಆರಾಧನೆಯಿಂದ ಪ್ರಜ್ಞಾಶಕ್ತಿ, ಮೇಧಾಶಕ್ತಿ, ಧಾರಣಾಶಕ್ತಿ, ಬುದ್ಧಿಶಕ್ತಿ, ದಯೋಶಕ್ತಿ ಅನುಗ್ರಹಿಸುವ ಪರಮ ಶ್ರೇಷ್ಠಳಾಗಿದ್ದಾಳೆ ಎಂದು ಕ್ಷೇತ್ರದ ನಿಯೋಜಿತ ತಂತ್ರಿಗಳಾದ ಸರ್ವೇಶ ತಂತ್ರಿ ಬ್ರಹ್ಮಕುಂಭಾಭಿಷೇಕ ನೆರವೇರಿಸಿ ಸಂದೇಶ ನೀಡಿದ್ದಾರೆ.