ಸಾರಾಂಶ
ಗಿಂಡಿ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಹೊಸ ಎಲ್‌ಇಡಿ ಬೀದಿದೀಪ ಅಳವಡಿಸಲಾಗಿದ್ದು, ಮೂರು ಬಲ್ಬ್ ಬದಲಿಸಿದೇ ಹಳೆಯ ಸೋಡಿಯಂ ಬಲ್ಬ್ ಹಾಗೆ ಬಿಡಲಾಗಿದೆ.
ಕಾರವಾರ:
ನಗರದ ಗಿಂಡಿ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಹೊಸ ಎಲ್‌ಇಡಿ ಬೀದಿದೀಪ ಅಳವಡಿಸಲಾಗಿದ್ದು, ಮೂರು ಬಲ್ಬ್ ಬದಲಿಸಿದೇ ಹಳೆಯ ಸೋಡಿಯಂ ಬಲ್ಬ್ ಹಾಗೆ ಬಿಡಲಾಗಿದೆ.ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಬೀದಿದೀಪ ಅಳವಡಿಕೆಗಾಗಿ ಸೆಂಟ್ರಲೈಸ್ಡ್ ಕಂಟ್ರೋಲ್ ಮಾನಿಟರಿಂಗ್ ಸಿಸ್ಟಂ (ಸಿಸಿಎಂಎಸ್) ಯೋಜನೆ ಅನುಷ್ಠಾನಗೊಂಡಿದೆ. ಇದರಡಿಯಲ್ಲಿ ಹಳೆಯ ಸೋಡಿಯಂ ಬಲ್ಬ್, ಟ್ಯೂಬ್‌ಲೈಟ್ ಬದಲಾಗಿ ಹೊಸ ಎಲ್‌ಇಡಿ ಬಲ್ಬ್ ಅಳವಡಿಸುವ ಕೆಲಸ ಪ್ರಾರಂಭವಾಗಿದ್ದು, ಹಲವು ರಸ್ತೆಗಳಲ್ಲಿ ಇರುವ ಹಳೆಯ ಬೀದಿದೀಪ ಬದಲಾಯಿಸಲಾಗಿದೆ. ಗಿಂಡಿ ದೇವಸ್ಥಾನದ ಎದುರಿನ ರಸ್ತೆಯಲ್ಲೂ ಬಲ್ಬ್ ಬದಲಾಯಿಸಿದ್ದು, ಮೂರು ಸೋಡಿಯಂ ಬಲ್ಬ್ ಮಾತ್ರ ಬದಲಿಸದೇ ಹಾಗೆ ಬಿಡಲಾಗಿದೆ. ಕೆಎಚ್‌ಬಿಯಿಂದ ಗಿಂಡಿ ದೇವಸ್ಥಾನ ಸಂಪರ್ಕಿಸುವ ರಸ್ತೆ, ಗಿಂಡಿ ದೇವಸ್ಥಾನದಿಂದ ಗುರುಭವನ-ಕೋಡಿಬಾಗ ಸಂಪರ್ಕಿಸುವ ರಸ್ತೆಯಲ್ಲಿ ಎಲ್ಲೆಡೆ ಬೀದಿದೀಪ ಬದಲಾಯಿಸಲಾಗಿದೆ. ಗಿಂಡಿ ದೇವಸ್ಥಾನದಿಂದ ಮಾರಿಯಾ ನಗರಕ್ಕೆ ತೆರಳುವ ರಸ್ತೆಯ ಅರ್ಧದವರೆಗೆ ಎಲ್‌ಇಡಿ ಅಳವಡಿಕೆ ಮಾಡಲಾಗಿದೆ. ಗಿಂಡಿ ದೇವಸ್ಥಾನ ಎದುರಿನ ರಸ್ತೆಯಲ್ಲಿ ಮಾತ್ರ ಹಳೆಯ ಸೋಡಿಯಂ ದೀಪವನ್ನು ಹಾಗೆಯೇ ಬಿಡಲಾಗಿದೆ. ಏಕೆ ಈ ರೀತಿ ಮಾಡಲಾಗಿದೆ ಎನ್ನುವುದು ತಿಳಿದಿಲ್ಲ. ಹಳೆಯ ಟ್ಯೂಬ್‌ಲೈಟ್, ಸೋಡಿಯಂ ಲೈಟ್ ಹಾಳಾದಾಗ ನಗರಸಭೆಯಿಂದ ಹೊಸದಾಗಿ ಎಲ್‌ಇಡಿ ಬಲ್ಬ್ ಅಳವಡಿಸಿದ್ದು, ಸಿಸಿಎಂಎಸ್ ಯೋಜನೆ ಗುತ್ತಿಗೆ ಪಡೆದ ಕಂಪನಿ ಅದನ್ನು ಬದಲಾಯಿಸಿದೇ ಹಾಗೆ ಇಟ್ಟಿದೆ. ನಗರಸಭೆಯಿಂದ ಹಾಕಲಾಗಿದ್ದ ಎಲ್‌ಇಡಿ ಬೀದಿದೀಪವನ್ನು ತೆಗೆದು ಗುತ್ತಿಗೆದಾರರಿಗೆ ಹೊಸ ಬಲ್ಬ್ ಹಾಕುವಂತೆ ಸೂಚಿಸಲು ನಗರಸಭೆಯ ಸದಸ್ಯರು ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದ್ದಾರೆ. ನಗರಸಭೆಯಿಂದ ಅಳವಡಿಸಿದ್ದ ಎಲ್‌ಇಡಿ ಬಲ್ಬ್ ತಾವು ಅಳವಡಿಸಿದ್ದು, ಎಂದು ಲೆಕ್ಕ ತೋರಿಸಿ ಖರ್ಚು ಪಡೆಯುವ ಸಾಧ್ಯತೆಯೂ ಇದೆ ಎಂದು ದೂರಿದ್ದರು. ಜತೆಗೆ ಹಳೆ ಸೋಡಿಯಂ, ಟ್ಯೂಬ್‌ಲೈಟ್ ಗುತ್ತಿಗೆ ಪಡೆದ ಕಂಪನಿಯೇ ತೆಗೆದುಕೊಂಡು ಹೋಗುತ್ತಿದ್ದು, ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.ನ್ಯಾಶನಲ್ ಲೈಟಿಂಗ್ ಕೋಡ್ ಮಾನದಂಡದ ಪ್ರಕಾರ ಹೊಸದಾಗಿ ಎಲ್‌ಇಡಿ ಅಳವಡಿಕೆ ಮಾಡಲಾಗುತ್ತಿದೆ. ಅಂದರೆ ಹೆದ್ದಾರಿಯಾದರೆ ಎಷ್ಟು ಪ್ರಕಾಶಮಾನ (ವ್ಯಾಟ್), ನಗರ ಮುಖ್ಯ ರಸ್ತೆಯಾದರೆ ಎಷ್ಟು? ಒಳರಸ್ತೆಯಾದರೆ ಎಷ್ಟು ಎಂದು ನಿಗದಿ ಮಾಡಲಾಗಿದ್ದು, ಅದೇ ರೀತಿ ಬಲ್ಬ್ ಅಳವಡಿಕೆ ಮಾಡಲಾಗುತ್ತದೆ. ಆದರೆ ಸಿಎಂಸಿಯಿಂದ ಅಳವಡಿಸಿರುವುದು ಹೆಚ್ಚು ಪ್ರಕಾಶಮಾನವಾಗಿದೆ. ಇದರಿಂದ ವಿದ್ಯುತ್ ಹೆಚ್ಚು ಬೇಕಾಗುತ್ತದೆ.ಹೊಸ ಎಲ್‌ಇಡಿ ಬಲ್ಬ್ ಅಳವಡಿಸಲಾದ ಪ್ರದೇಶಗಳಲ್ಲಿ ನಗರಸಭೆಯ ಅಧಿಕಾರಿಗಳು ತೆರಳಿ ಕಾಮಗಾರಿಯ ಬಗ್ಗೆ ಪರಿಶೀಲನೆ ಹಾಗೂ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ.