ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸಿಸಿ ಕ್ಯಾಮೆರಾ ಅಳವಡಿಕೆಯಿಂದ ಸಂಚಾರಿ ನಿಯಮ ಉಲ್ಲಂಘನೆ ಹಾಗೂ ಅಪರಾಧ ಚಟುವಟಿಕೆಗಳಿಗೆ ತೆರೆ ಬೀಳಲಿದೆ. ಅಪರಾಧ ಕೃತ್ಯಕ್ಕೆ ಬಳಕೆಯಾಗಿರುವ ವಾಹನಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಪ್ರಮುಖವಾಗಿ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಅತ್ಯುತ್ತಮ ಸಾಧನವಾಗಿದೆ.
ಕನ್ನಡಪ್ರಭ ವಾರ್ತೆ ಹೊಸಕೋಟೆ
ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಹಾಗೂ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಸಹಕಾರಿಯಾಗಲಿವೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ತಾಲೂಕಿನ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯ ವಾರ್ ರೂಂಗೆ ಭೇಟಿ ನೀಡಿ ಸಂಚಾರ ದಟ್ಟಣೆ, ಅಪರಾಧ ಕೃತ್ಯಗಳ ತಡೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕೈಗೊಂಡ ಕ್ರಮಗಳ ಮಾಹಿತಿ ಪಡೆದರು.
ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಶೀಘ್ರದಲ್ಲಿ ಸಿಗ್ನಲ್‌ಗಳನ್ನು ಅಳವಡಿಸಿ, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು. ತಿರುಮಲ ಶೆಟ್ಟಿಹಳ್ಳಿ ಜಂಕ್ಷನ್ ಸೇರಿ ೧೫ ಕಡೆ ಸಿಸಿ ಕ್ಯಾಮೆರಾ ಕಣ್ಗಾವಲು ಇಡಲಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದ ಸವಾರರು ಪೊಲೀಸರ ಕಣ್ತಪ್ಪಿಸಿ ಪಾರಾದರೂ ಈ ಹೈಟೆಕ್ ಕ್ಯಾಮೆರಾಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಾಹನ ಸವಾರ ಸಾಕಷ್ಟು ದೂರದಲ್ಲಿದ್ದರೂ ಈ ಕ್ಯಾಮೆರಾಗಳು ಪತ್ತೆ ಹಚ್ಚಿ ಆ ವಾಹನದ ಸಂಪೂರ್ಣ ಮಾಹಿತಿ ಪೊಲೀಸರಿಗೆ ರವಾನಿಸಲಿವೆ. ಸಂಚಾರ ನಿಯಮ ಉಲ್ಲಂಘನೆ, ಪೋಕರಿಗಳ ಹಾವಳಿ, ಕಳ್ಳತನ, ದರೋಡೆ ಸೇರಿ ಅಪರಾಧ ಪ್ರಕರಣ ತಡೆಯುವ ಉದ್ದೇಶದಿಂದ ಸಮೇತನಹಳ್ಳಿ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.ಬಿಎಂಆರ್‌ಡಿಎ ಸದಸ್ಯ ಕೊರಳೂರು ಸುರೇಶ್‌ಗೌಡ ಮಾತನಾಡಿ, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸಿಸಿ ಕ್ಯಾಮೆರಾ ಅಳವಡಿಕೆಯಿಂದ ಸಂಚಾರಿ ನಿಯಮ ಉಲ್ಲಂಘನೆ ಹಾಗೂ ಅಪರಾಧ ಚಟುವಟಿಕೆಗಳಿಗೆ ತೆರೆ ಬೀಳಲಿದೆ. ಅಪರಾಧ ಕೃತ್ಯಕ್ಕೆ ಬಳಕೆಯಾಗಿರುವ ವಾಹನಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಪ್ರಮುಖವಾಗಿ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಅತ್ಯುತ್ತಮ ಸಾಧನವಾಗಿದೆ ಎಂದರು.
ಪೊಲೀಸ್ ಠಾಣೆಯಲ್ಲೇ ಕಂಟ್ರೋಲ್ ರೂಂ: ಅತ್ಯಾಧುನಿಕ ಸಿಸಿ ಕ್ಯಾಮೆರಾ ಅಳವಡಿಕೆಯಿಂದಾಗಿ, ವಾಹನದ ನಂಬರ್ ಪ್ಲೇಟ್ ಜತೆಗೆ ಚಾಲಕ ಹಾಗೂ ವಾಹನದಲ್ಲಿ ಹೊರಟವರ ಸ್ಪಷ್ಟ ಚಿತ್ರಗಳು ಸಿಗುತ್ತಿವೆ. ರಾತ್ರಿ ವೇಳೆ ವಾಹನದ ನಂಬರ್ ಪ್ಲೇಟ್ ಸೆರೆ ಹಿಡಿಯುವಂತಹ ವ್ಯವಸ್ಥೆ ಇದರಲ್ಲಿದೆ. ಯಾವುದೇ ಘಟನೆ ನಡೆದರೂ ಈ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಗಳನ್ನು ಪರಿಶೀಲಿಸಿ ಅಲ್ಲಿಸಿಗುವ ಸಾಕ್ಷ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಬಹುದಾಗಿದೆ. ವಾಹನ ದಟ್ಟಣೆ ಸಂದರ್ಭ, ಅನಧಿಕೃತ ಪಾರ್ಕಿಂಗ್ ವೇಳೆ ಅಗತ್ಯವಾದ ಸೂಚನೆಗಳನ್ನು ನಿಯಂತ್ರಣ ಕೊಠಡಿಯಿಂದಲೇ ಕೊಡಬಹುದು. ವಾಹನಗಳನ್ನು ಕಳವು ಮಾಡುವವರ ಪತ್ತೆಗೂ ನೆರವಾಗಲಿವೆ ಎಂದು ತಿರುಮಲಶೆಟ್ಟಿಹಳ್ಳಿ ಠಾಣೆ ಸಿಬ್ಬಂದಿ ಅಕ್ಷಯ್ ಮಾಹಿತಿ ನೀಡಿದ್ದಾರೆ.ಸಿಕ್ಕಿಬಿದ್ದ ಕೊಲೆ ಆರೋಪಿಗಳು: ಕಳೆದ ಗುರುವಾರ ದೊಡ್ಡಬಳ್ಳಾಪುರ ನಗರದ ಡಿ.ಕ್ರಾಸ್‌ನಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಐವರು ಆರೋಪಿಗಳು ಕೊಲೆ ನಂತರ ಕಾರಿನಲ್ಲಿ ಬೆಂಗಳೂರು ಹೊರವಲಯದ ಕೆ. ಆರ್.ಪುರಂನಲ್ಲಿ ಕಾರು ನಿಲ್ಲಿಸಿ ಹೊಸಕೋಟೆ ತಾಲೂಕಿನ ಮೇಡಿಮಲ್ಲಸಂದ್ರ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ತಿರುಮಲಶೆಟ್ಟಿಹಳ್ಳಿ ಜಂಕ್ಷನ್‌ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಆರೋಪಿಗಳು ಸೆರೆಯಾಗಿದ್ದು, ಇವರನ್ನು ಬಂಧಿಸುವಲ್ಲಿ ಕ್ಯಾಮೆರಾಗಳು ಸಹಕಾರಿಯಾಗಿವೆ ಎಂದು ಠಾಣಾ ಅಧಿಕಾರಿಗಳು ಮಾಹಿತಿ ನೀಡಿದರು.