ಕೋಮುದೌರ್ಜನ್ಯ, ಭ್ರಷ್ಟತೆಮುಕ್ತ ಸಮಾಜಕ್ಕಾಗಿ ಬದಲಾಗಿ: ಲಲಿತಾ ನಾಯಕ್‌

| Published : Nov 24 2025, 01:30 AM IST

ಕೋಮುದೌರ್ಜನ್ಯ, ಭ್ರಷ್ಟತೆಮುಕ್ತ ಸಮಾಜಕ್ಕಾಗಿ ಬದಲಾಗಿ: ಲಲಿತಾ ನಾಯಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೋಮು ದೌರ್ಜನ್ಯ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರಜೆಗಳು ಬದಲಾಗಬೇಕು ಎಂದು ಚಿಂತಕಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹೇಳಿದ್ದಾರೆ.

- ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಎರಡು ದಿನಗಳ ವಿಚಾರ ಸಂಕಿರಣ ಸಮಾರೋಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೋಮು ದೌರ್ಜನ್ಯ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರಜೆಗಳು ಬದಲಾಗಬೇಕು ಎಂದು ಚಿಂತಕಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹೇಳಿದರು.

ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಭಾನುವಾರ ಬೇರು-ಚಿಗುರು ಕನ್ನಡ ಸಾಹಿತ್ಯ ಸಂಶೋಧನೆ ವಿಚಾರ ವೇದಿಕೆಯಿಂದ ಕನ್ನಡ ಸಾಹಿತ್ಯ ಮಹಿಳಾ ಸಂವೇದನೆಗಳು ವಿಷಯವಾಗಿ ಏರ್ಪಡಿಸಿದ್ದ ಎರಡು ದಿನಗಳ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿದರು.

ಮನುಷ್ಯ ಮಾಡುವ ತಪ್ಪುಗಳೇ ಸಾಹಿತ್ಯ, ಕಥೆಯಾಗುತ್ತವೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು, ಬಂಡೇಳುವುದು, ನ್ಯಾಯಸಮ್ಮತ ಆಗಿರುವುದನ್ನು ಪಡೆಯುವುದೇ ಬಂಡಾಯವಾಗಿದೆ. ಅದು ಎಂದಿಗೂ ಶಾಂತಿಯನ್ನು ಕಲಿಸುತ್ತದೆ. ಗ್ರಂಥಾಲಯಗಳು ಜ್ಞಾನ ತುಂಬುತ್ತವೆ. ಸಮಾಜವು ಜ್ಞಾನಾರ್ಜನೆಗೆ ಹೋಗುತ್ತಿರುವುದು ಬಂಡಾಯದ ಕೊಡುಗೆಯಾಗಿದೆ. ಬಂಡಾಯವು ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವಂತೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

ಮನುಷ್ಯನನ್ನು ಮನುಷ್ಯನನ್ನಾಗಿಸುವಂತಹ ಶಕ್ತಿಯು ಕಲೆ ಮತ್ತು ಸಾಹಿತ್ಯಕ್ಕೆ ಇದೆ. ಕಲೆ ಮತ್ತು ಸಾಹಿತ್ಯ ಇಲ್ಲವಾಗಿದ್ದರೆ ಮನುಷ್ಯ ಪಶುವಾಗುತ್ತಿದ್ದ. ಆಯಾ ಕಾಲಘಟ್ಟಕ್ಕೆ ತಕ್ಕಂತೆ ಸಾಹಿತ್ಯದಲ್ಲಿ ಮಹಿಳಾ ಸಂವೇದನೆಗಳೂ ಬದಲಾಗಿವೆ. ಕೀರ್ತನೆಗಳಲ್ಲಿ ಮೌಢ್ಯವಿದ್ದರೂ ಅದು ಕೊಂಚವಾದರೂ ನಮ್ಮ ಕೈಹಿಡಿದಿದೆ. ವಿಷವನ್ನು ಬೇರ್ಪಡಿಸಿ, ಅಮೃತ ತೆಗೆದುಕೊಳ್ಳುವುದೇ ಸಾಹಿತ್ಯ ಎಂದು ಅಭಿಪ್ರಾಯಪಟ್ಟರು.

ಹಲವಾರು ವರ್ಷಗಳಿಂದಲೂ ಅನ್ಯಾಯ, ಅತ್ಯಾಚಾರ ಎಲ್ಲವನ್ನೂ ದೇವರ ಹೆಸರಿನಲ್ಲಿ ನಾವು ತೆಗೆದುಕೊಂಡಿದ್ದೇವೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅ‍ಳವಡಿಸಿಕೊಂಡರೆ ಸುಭಿಕ್ಷ, ಸುಂದರ ನಾಡನ್ನು ಕಟ್ಟಲು ಸಾಧ್ಯವಾಗುತ್ತದೆ. ಕಲೆ, ಸಾಹಿತ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜು ಪ್ರಾಚಾರ್ಯರಾದ ಪ್ರೊ.ಕಮಲಾ ಸೊಪ್ಪಿನ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಅನುಸೂಯ ಕಾಂಬಳೆ, ಡಾ.ಮೈತ್ರಾಣಿ ಗದಿಗೆಪ್ಪ ಗೌಡರ್, ವೇದಿಕೆ ಅಧ್ಯಕ್ಷ ಡಾ. ಎಚ್.ಜಿ. ವಿಜಯ ಕುಮಾರ, ಕಾರ್ಯದರ್ಶಿ ಡಿ.ಅಂಜಿನಪ್ಪ, ಸಹ ಪ್ರಾಧ್ಯಾಪಕ ಡಾ. ಎಂ.ಆರ್. ಲೋಕೇಶ, ನಿವೃತ್ತ ಪ್ರಾಚಾರ್ಯ ಡಾ.ದಾದಾಪೀರ್ ನವಿಲೇಹಾಳ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರೊ. ಎ.ಬಿ. ರಾಮಚಂದ್ರಪ್ಪ ಇತರರು ಇದ್ದರು.

- - -

-23ಕೆಡಿವಿಜಿ9, 10.ಜೆಪಿಜಿ:

ದಾವಣಗೆರೆ ಎ.ವಿ. ಕಮಲಮ್ಮ ಕಾಲೇಜಿನಲ್ಲಿ ಭಾನುವಾರ ಕನ್ನಡ ಸಾಹಿತ್ಯ ಮಹಿಳಾ ಸಂವೇದನೆಗಳು ವಿಷಯವಾಗಿ ಏರ್ಪಡಿಸಿದ್ದ ವಿಚಾರ ಸಂಕಿರಣ ಸಮಾರೋಪದಲ್ಲಿ ಲೇಖಕಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿದರು.