ರ್‍ಯಾಲಿ ಆಯೋಜನೆಗಿಂತ, ಕಾಂಗ್ರೆಸ್‌ ಆಯೋಜಿಸಿದ್ದ ಜನಾಂದೋಲನ ಸಮಾವೇಶ ಫ್ಲೆಕ್ಸ್ ತೆರವೇ ಬಿಜೆಪಿಗೆ ಸವಾಲು..!

| Published : Aug 10 2024, 01:43 AM IST / Updated: Aug 10 2024, 10:07 AM IST

ರ್‍ಯಾಲಿ ಆಯೋಜನೆಗಿಂತ, ಕಾಂಗ್ರೆಸ್‌ ಆಯೋಜಿಸಿದ್ದ ಜನಾಂದೋಲನ ಸಮಾವೇಶ ಫ್ಲೆಕ್ಸ್ ತೆರವೇ ಬಿಜೆಪಿಗೆ ಸವಾಲು..!
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜನಾಂದೋಲನ ಸಮಾವೇಶದ ವೇದಿಕೆಯಲ್ಲಿಯೇ ಬಿಜೆಪಿಯ ಪ್ರತಿಭಟನಾ ಸಭೆ ನಡೆಯುವುದರಿಂದ ಇಡೀ ವೇದಿಕೆಯಲ್ಲಿ ಅಳವಡಿಸಲಾದ ಕಾಂಗ್ರೆಸ್ ಫ್ಲೆಕ್ಸ್, ಬಟ್ಟಿಂಗ್ಸ್, ಪ್ಲೇಕಾರ್ಡ್, ಬ್ಯಾನರ್‌ಗಳನ್ನು ಬೆಳಗಾಗುವುದರೊಳಗೆ ತೆರವುಗೊಳಿಸಬೇಕು.

ಮಹೇಂದ್ರ ದೇವನೂರು

 ಮೈಸೂರು :  ಎಂಡಿಎ ಹಗರಣ ಮತ್ತು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರ ಖಂಡಿಸಿ, ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ- ಜೆಡಿಎಸ್ ಜಂಟಿಯಾಗಿ ಕೈಗೊಂಡಿರುವ ರ್‍ಯಾಲಿಗಿಂತ ನಗರದಾದ್ಯಂತ ಅಳವಡಿಸಿರುವ ಫ್ಲೆಕ್ಸ್, ಕಟೌಟ್, ಬಂಟಿಂಗ್ಸ್ ತೆರವುಗೊಳಿಸುವುದೇ ದೊಡ್ಡ ಸವಾಲಾಗಿದೆ.

ವಿಪಕ್ಷಗಳ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್‌ ಒಂದು ದಿನ ಮುಂಚೆಯೇ ಅಂದರೆ ಶುಕ್ರವಾರವೇ ಜನಾಂದೋಲನ ಸಮಾವೇಶ ಆಯೋಜಿಸಿರುವುದು ಬಿಜೆಪಿಗೆ ಎಡವಟ್ಟಾಗಿ ಪರಿಣಮಿಸಿದೆ.

ಕಾಂಗ್ರೆಸ್‌ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜನಾಂದೋಲನ ಸಮಾವೇಶದ ವೇದಿಕೆಯಲ್ಲಿಯೇ ಬಿಜೆಪಿಯ ಪ್ರತಿಭಟನಾ ಸಭೆ ನಡೆಯುವುದರಿಂದ ಇಡೀ ವೇದಿಕೆಯಲ್ಲಿ ಅಳವಡಿಸಲಾದ ಕಾಂಗ್ರೆಸ್ ಫ್ಲೆಕ್ಸ್, ಬಟ್ಟಿಂಗ್ಸ್, ಪ್ಲೇಕಾರ್ಡ್, ಬ್ಯಾನರ್‌ಗಳನ್ನು ಬೆಳಗಾಗುವುದರೊಳಗೆ ತೆರವುಗೊಳಿಸಬೇಕು.

ಇದು ಕೇವಲ ಮಹಾರಾಜ ಕಾಲೇಜು ಮೈದಾನಕ್ಕೆ ಸೀಮಿತವಾದದ್ದು ಮಾತ್ರವಲ್ಲ. ಇಡೀ ನಗರದ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಬಾವುಟ, ಸಿಎಂ ಸೇರಿದಂತೆ ಕಾಂಗ್ರೆಸ್‌ನ ನಾಯಕರ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಅವುಗಳನ್ನು ಶನಿವಾರ ಬೆಳಗ್ಗೆ ವೇಳೆಗೆ ತೆಗೆದು, ಬಿಜೆಪಿ ಬಾವುಟ, ಫ್ಲೆಕ್ಸ್, ಬಟ್ಟಿಂಗ್ಸ್, ಪ್ಲೇ ಕಾರ್ಡ್ ಗಳನ್ನು ಅಳವಡಿಸುವುದು ಕಗ್ಗಂಟಾಗಿದೆ.

ಕಾಂಗ್ರೆಸ್ ಆಯೋಜಿಸಿರುವ ಜನಾಂದೋಲನ ಸಮಾವೇಶಕ್ಕೂ, ನಮ್ಮ ರ್‍ಯಾಲಿಗೂ ಒಂದು ದಿನವಾದರೂ ಅಂತರ ಬೇಕಿತ್ತು. ಆದರೆ, ಈಗ ಪರಿಸ್ಥಿತಿ ಕೈಮೀರಿದೆ ಎಂಬುದು ಬಿಜೆಪಿಯಲ್ಲಿ ಶುಕ್ರವಾರ ನಡೆದ ದೊಡ್ಡ ಚರ್ಚೆ.

ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಲಕ್ಷಾಂತರ ಮಂದಿಯನ್ನು ಮೈಸೂರಿನಲ್ಲಿ ಸೇರಿಸಿದೆ. ಅಷ್ಟು ಮಂದಿಯನ್ನು ಬಿಜೆಪಿ ಮತ್ತು ಜೆಡಿಎಸ್ ಸೇರಿಸದಿದ್ದರೂ ಒಂದು ವಾರದ ಸತತ ನಡಿಗೆ, ಹೋರಾಟದ ಫಲಕ್ಕಾದರೂ, ಇಡೀ ನಗರದಲ್ಲಿ ಬಿಜೆಪಿಯ ಹವಾ ಸೃಷ್ಟಿಯಾಗಬೇಕು.

ಇದಕ್ಕಾಗಿ ಬಿಜೆಪಿಯ ಸಾವಿರಾರು ಕಾರ್ಯಕರ್ತರ ಬೃಹತ್ ಪಡೆ ಶ್ರಮಿಸಬೇಕು. ಒಂದು ವೇಳೆ ಮಹಾರಾಜ ಕಾಲೇಜು ಮೈದಾನದಲ್ಲಿ ರ್‍ಯಾಲಿ ನಡೆದು ಇಡೀ ನಗರದಲ್ಲಿ ಕಾಂಗ್ರೆಸ್ ಫ್ಲೆಕ್ಸ್, ಬಾವುಟ ರಾರಾಜಿಸಿದರೆ ಬಿಜೆಪಿ ರ್‍ಯಾಲಿಗೆ ಹಿನ್ನಡೆ ಆದಂತಾಗುತ್ತದೆ. ಆದ್ದರಿಂದ ಕಾಂಗ್ರೆಸ್ ವಿರುದ್ಧದ ರ್‍ಯಾಲಿ ಆಯೋಜನೆಗಿಂತಲೂ, ದೊಡ್ಡ ಸವಾಲಿನ ಕೆಲಸ ಫ್ಲೆಕ್ಸ್, ಬಟ್ಟಿಂಗ್ಸ್ ತೆರವುಗೊಳಿಸುವುದೇ ಸವಾಲಾಗಿದೆ.