ಸಾರಾಂಶ
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಾಧಿಪತಿ ಹುದ್ದೆಯನ್ನು ರಾಜ್ಯಪಾಲರ ಬದಲು ಮುಖ್ಯಮಂತ್ರಿಗಳಿಗೆ ನೀಡುತ್ತಿರುವ ಸರ್ಕಾರದ ನಡೆ ಖಂಡಿಸಿ ನಗರದಲ್ಲಿ ಎಬಿವಿಪಿಯಿಂದ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಬೀದರ್
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಾಧಿಪತಿ ಹುದ್ದೆಯನ್ನು ರಾಜ್ಯಪಾಲರ ಬದಲು ಮುಖ್ಯಮಂತ್ರಿಗಳಿಗೆ ನೀಡುತ್ತಿರುವ ಸರ್ಕಾರದ ನಡೆ ಖಂಡಿಸಿ ನಗರದಲ್ಲಿ ಎಬಿವಿಪಿಯಿಂದ ಪ್ರತಿಭಟನೆ ನಡೆಸಲಾಯಿತು.ಈ ಕುರಿತು ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿ, ವಿಶ್ವವಿದ್ಯಾಲಯಗಳು ಶಿಕ್ಷಣದ ಭಾಗವಾಗಬೇಕು ಹೊರತು ರಾಜಕಾರಣದ ಕೇಂದ್ರವಾಗಬಾರದು ಎಂಬ ಉದ್ದೇಶದಿಂದ ಸಾಂವಿಧಾನಿಕ ಹುದ್ದೆಯಾದ ರಾಜ್ಯಪಾಲರಿಗೆ ವಿಶ್ವವಿದ್ಯಾಲಯಗಳ ಕುಲಾಧಿಪತಿ ಹುದ್ದೆಯನ್ನು ನೀಡಲಾಗಿದೆ. ಆದರೆ ರಾಜ್ಯ ಸರ್ಕಾರ ನ. 27ರಂದು ನಡೆದ ಸಂಪುಟ ಸಭೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಾಧಿಪತಿ ಅಧಿಕಾರವನ್ನು ರಾಜ್ಯಪಾಲರಿಂದ ಮುಖ್ಯಮಂತ್ರಿಗಳಿಗೆ ನೀಡುವ ನಿರ್ಧಾರವನ್ನು ಸಂಪುಟ ಮಾಡಿದೆ. ಇದರಿಂದ ವಿಶ್ವವಿದ್ಯಾಲಯಗಳು ರಾಜಕೀಯ ಅಖಾಡವಾಗಿ ಪರಿವರ್ತನೆಯಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ಹೀಗಾಗಿ ಈ ನಡೆಯನ್ನು ಸರ್ಕಾರ ಕೂಡಲೇ ಕೈಬಿಟ್ಟು ಮೊದಲಿನಂತೆ ರಾಜ್ಯಪಾಲರು ಕುಲಾಧಿಪತಿ ಹುದ್ದೆಯಲ್ಲಿ ಇರುವಂತೆ ಎಬಿವಿಪಿ ನಗರ ಕಾರ್ಯದರ್ಶಿಗಳಾದ ಆನಂದ ಅಮನಾಬಾದೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ್ ಮಾತನಾಡಿದರು. ಪವನ ಕುಂಬಾರ, ನಾಗರಾಜ, ಪವನ ಪಾಂಚಾಳ, ಲಿಂಗದೇವ ಗುತ್ತಿ , ಅತೀಶ, ಚಾಂದಪಾಷ, ಪ್ರಾರ್ಥನಾ, ಮಮತಾ, ಅಂಬಿಕಾ, ಸೀತಾ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.