ಸಾರಾಂಶ
ಯಳಂದೂರು ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಸಮತಾ ಸೈನಿಕ ದಳ ಶತಮಾನೋತ್ಸವ ಸಮಾರಂಭದಲ್ಲಿ ಚಲನಚಿತ್ರ ನಟ ಅಹಿಂಸಾ ಚೇತನ್ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಯಳಂದೂರು
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಬಗ್ಗೆ ನನ್ನನ್ನು ಪೂಜಿಸಬೇಡಿ, ನನ್ನನ್ನು ಓದಿ ಎಂದಿದ್ದಾರೆ. ನಾವು ಪೂಜಿಸುವ ಬದಲು ಅವರ ತತ್ವ ಸಿದ್ದಾಂತವನ್ನು ಓದಿ ಈ ದೇಶದಲ್ಲಿ ನಡೆಯುವ ಅಸ್ಪೃಶ್ಯತೆ, ಅಸಮಾನತೆ, ಜಾತಿ ವ್ಯವಸ್ಥೆ ನಾಶಮಾಡಿ ಪ್ರಬುದ್ಧ ಭಾರತವನ್ನು ಮಾಡಬೇಕಾಗಿದೆ ಎಂದು ನಟ ಅಹಿಂಸಾ ಚೇತನ್ ತಿಳಿಸಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಮತಾ ಸೈನಿಕ ದಳ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ, ಡಾ.ಅಂಬೇಡ್ಕರ್ ಅವರು 1924 ಸೆ.24 ರಂದು ಸಮತಾ ಸೈನಿಕ ದಳವನ್ನು ಸ್ಥಾಪಿಸಿ ಪ್ರಬುದ್ಧ ಭಾರತ ನಿರ್ಮಾಣ ಮಾಡಬೇಕೆಂದು ಪಣತೊಟ್ಟರು. ಇಂದಿಗೆ ಈ ಸಂಘಟನೆ ಶತಮಾನೋತ್ಸವ ಆಚರಿಸುತ್ತಿರುವುದು ಸಂಭ್ರಮದ ಸಂಗತಿಯಾಗಿದೆ.
ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನಿಂದಲೇ ಈ ಸಂಘ ಮತ್ತೇ ಯುಗಾರಂಭವನ್ನು ಪ್ರಾರಂಭಿಸಬೇಕಾಗಿದೆ. ಪ್ರತಿ ಹಳ್ಳಿಗಳಲ್ಲಿ ಈ ಸಂಘಟನೆ ಸಕ್ರಿಯವಾಗಬೇಕು ಈ ಸಂಘಟನೆ ನಾಗಪುರ, ಮಾಹೋ, ಕೋರೆಂಗಾವ್ ನಲ್ಲಿ ಇಂದಿಗೂ ಕೂಡ ಶಿಸ್ತು ಸಂಯಮದಿಂದ ಕಾರ್ಯನಿರ್ವಹಿಸುತ್ತದೆ. ಇದರ ಉದ್ದೇಶ ಪ್ರಬುದ್ಧ ಭಾರತ ನಿರ್ಮಾಣ ಮಾಡುವುದು.ಪ್ರತಿ ಭಾರತೀಯನು ವೈಚಾರಿಕತೆಯನ್ನು ಬೆಳಿಸಿಕೊಳ್ಳಬೇಕು. ಆಗ ನಾವು ಭಾರತವನ್ನು ಮೌಢ್ಯದಿಂದ ರಕ್ಷಿಸಿಸಬಹುದು. ನಾವುಗಳು ಬುದ್ಧ, ಬಸವ, ಜ್ಯೋತಿ ಬಾ ಫುಲೆ, ಅಂಬೇಡ್ಕರ್. ಪೆರಿಯಾರ್ ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಅಸಮಾನತೆಯನ್ನು ಹೋಗಲಾಡಿಸಿಬೇಕಾಗಿದೆ ಎಂದರು.ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷ ಡಾ.ವೆಂಕಟಸ್ವಾಮಿ ಮಾತನಾಡಿ. ಈ ಸಂಘಟನೆಯು 40 ವರ್ಷಗಳ ಹಿಂದೆ ಶಂಕನಪುರದ ಮಾಜಿ ಶಾಸಕ ಎನ್. ಮಹೇಶ್ ಅವರ ಮನೆಯಲ್ಲಿಯೇ ಜಿಲ್ಲೆಗೆ ಪರಿಚಿತವಾಯಿತು. ಇಂದು ಯಳಂದೂರು ತಾಲೂಕಿನಲ್ಲೇ ಎರಡನೇ ಕಾರ್ಯಕ್ರಮವಾಗಿದೆ. ಪ್ರತಿ ಗ್ರಾಮದಲ್ಲಿಯು ಈ ಸಂಘಟನೆ ಪ್ರಾರಂಭಗೊಳ್ಳಬೇಕು ಎಂದರು. ಡಾ ಶ್ರೀಧರ್, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್, ಸಾಹಿತಿ ಮದ್ದೂರು ದೊರೆಸ್ವಾಮಿ, ನೌಕರ ಸಂಘದ ಅಧ್ಯಕ್ಷ ಅಮ್ಮನಪುರ ಮಹೇಶ್ ಅವರೆಗೆ ಎಸ್ಎಸ್‌ಡಿ ವತಿಯಿಂದ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಆರ್‌ಪಿಐ ಗೋವಿಂದಯ್ಯ, ಆರ್‌ಪಿಐ ವಿಜಯಪುರ ಜಿಲ್ಲಾ ಅಧ್ಯಕ್ಷ ಬ್ಯಾಟರಾಜು, ಎಸ್‌ಎಸ್‌ಡಿ ಜಿಲ್ಲಾಧ್ಯಕ್ಷ ಎಸ್,ಸುರೇಶ್ ಮದ್ದೂರು, ಎಸ್ ಎಸ್ ಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಸ್ತೂರು ರಾಜು, ಆರ್‌ಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬಳೆ ಮಹದೇವ್, ಎಸ್‌ಎಸ್‌ಡಿ ಯಳಂದೂರು ತಾಲೂಕು ಅಧ್ಯಕ್ಷ ವೈ.ಎಲ್.ಸಿದ್ದರಾಜು, ಮದ್ದೂರು ಪ್ರಸಾದ್, ಟೈಲರ್ ಮಹದೇವಯ್ಯ ಹಾಗೂ ಇತರರು ಹಾಜರಿದ್ದರು.