ಶಿಗ್ಗಾಂವಿ ತಾಲೂಕಿನ ದುಂಡಶಿ ಗ್ರಾಮದ ವಿರಕ್ತಮಠದ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಿಗ್ಗಾಂವಿ: ನೊಂದವರಿಗೆ, ದೀನ-ದಲಿತರಿಗೆ ಸಹಾಯ ಮಾಡುವ ಗುಣವನ್ನು ಮಕ್ಕಳಲ್ಲಿ ಬೆಳೆಸಬೇಕು. ಸಂಸ್ಕಾರಯುತ ಮಾರ್ಗದಲ್ಲಿ ನಡೆಯಲು ಪಾಲಕರು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದು ದುಂಡಶಿ ವಿರಕ್ತಮಠದ ಮ.ನಿ.ಪ್ರ. ಕುಮಾರಸ್ವಾಮಿಗಳು ಹೇಳಿದರು.
ತಾಲೂಕಿನ ದುಂಡಶಿ ಗ್ರಾಮದ ವಿರಕ್ತಮಠದ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಹಾವೇರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ನಿರ್ದೇಶಕ ಶಿವರಾಯ ಪ್ರಭು ಮಾತನಾಡಿ, ಸ್ವಾವಲಂಬಿ ಜೀವನ ನಡೆಸಲು ಮತ್ತು ಮಕ್ಕಳ ಗುಣಮಟ್ಟದ ಶಿಕ್ಷಣ ಪಡೆಯುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಉದ್ದೇಶವಾಗಿದೆ ಎಂದರು.
ಮನುಷ್ಯ ಧರ್ಮದ ಹಾದಿಯಲ್ಲಿ ಸಾಗಬೇಕು. ಜಾತಿ, ಮತ, ಧರ್ಮ, ಲಿಂಗ ಭೇದ ಇಲ್ಲದೆ ಈ ಯೋಜನೆ ಪ್ರತಿಯೊಂದು ಮನೆಯಲ್ಲೂ ಕಾರ್ಯ ನಿರ್ವಹಿಸಿದೆ. ಪ್ರತಿಯೊಂದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪ್ರಗತಿ ನಿಧಿ, ಕೆರೆ ಅಭಿವೃದ್ಧಿ, ನಿರ್ಗತಿಕ ಮಾಸಾಶನ, ಶಿಕ್ಷಕರ ನೇಮಕಾತಿ ಹಾಗೂ ದೇವಸ್ಥಾನ ಜೀರ್ಣೋದ್ಧಾರಕ್ಕೆ ಯೋಜನೆ ಸಹಕಾರಿ ಆಗಿದೆ ಎಂದರು.ಬ್ಯಾಂಕ್ ವ್ಯವಹಾರ ಪ್ರತಿನಿಧಿಯಾಗಿ ಟ್ರಸ್ಟ್ ಕಾರ್ಯ ನಿರ್ವಹಿಸುತ್ತಿದೆ. ಜನಜಾಗೃತಿ ಮೂಲಕ ದುಶ್ಚಟ ಮಾಡುತ್ತಿರುವವರ ಬಿಡಿಸುವ ಕೆಲಸ ಈ ಯೋಜನೆ ಮಾಡುತ್ತಿದೆ ಎಂದರು.
ನಿವೃತ್ತ ಶಿಕ್ಷಕ ಶಿವಾನಂದ ವಿ. ಸೋಮಣ್ಣನವರ ಧಾರ್ಮಿಕ ಪ್ರವಚನ ನೀಡಿ, ಧರ್ಮದಲ್ಲಿ ಇದ್ದವರಿಗೆ ದಯೆ ಇರುತ್ತದೆ. ಬಡತನದ ಕುಟುಂಬವನ್ನು ಮೇಲೆತ್ತುವ ಕಾರ್ಯ ಈ ಸಂಘ ಮಾಡುತ್ತಿದೆ. ಸಮಾಜದಲ್ಲಿ ಜನರು ಸತ್ಸಂಗ ಮಾಡಿದರೆ ಬಾಳಿನಲ್ಲಿ ಬೆಳಕು ಚೆಲ್ಲುತ್ತದೆ ಎಂದರು.ಪತ್ರಕರ್ತ ಬಿ.ಎಸ್. ಹಿರೇಮಠ ಮಾತನಾಡಿದರು. ದುಂಡಶಿ ಗ್ರಾಪಂ ಅಧ್ಯಕ್ಷೆ ಹಸಿನಾ ಬೇಗಂ ಹೊಸೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜನಜಾಗೃತಿ ಸದಸ್ಯ ಪ್ರಕಾಶ ಪಾಸರ್, ಧುಂಡಶಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಈರಣ್ಣ ಚಂಬಣ್ಣ ಮಹಜನ್‌ಶೆಟ್ಟರ್, ಮೇಲ್ವಿಚಾರಕಿ ಆಶಾ ಎಂ., ಶೇಖರ ನಾಯಕರ, ಈರಣ್ಣ ಸಮಗೊಂಡ ಮಾತನಾಡಿದರು.
ಹೊಸೂರ ಗ್ರಾಪಂ ಉಪಾಧ್ಯಕ್ಷ ಧರಣೇಂದ್ರ ಪುಟ್ಟಣ್ಣನವರ, ತಾಪಂ ಮಾಜಿ ಸದಸ್ಯೆ ತಾರಾಮತಿ ಧರಣಿಪ್ಪನವರ, ಪೊಲೀಸ್ ಸಹಾಯಕ ನಿರೀಕ್ಷಕ ಕೋಟಿ, ಆನಂತರ ವಿವಿಧ ಮನರಂಜನೆಯ ಕಾರ್ಯಕ್ರಮಗಳು ಜರುಗಿದವು.