ನಮ್ಮ ದೇಶ ಸಂಸ್ಕೃತಿ ಹಿರಿಮೆಯ ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಕೊಡುಗೆ ನೀಡಿದೆ.
ಕಾರಟಗಿ: ಮಕ್ಕಳಿಗೆ ಭಾಷೆ, ಶಿಸ್ತು, ಸಂಸ್ಕೃತಿ, ದೇಶದ ಇತಿಹಾಸ ಹೇಳುವ ಜತೆಗೆ ಮುಖ್ಯವಾಗಿ ವಿಜ್ಞಾನದ ಕೌತುಕ ಮನದಟ್ಟ ಮಾಡುವ ಮೂಲಕ ಎಳೆ ಮನಸ್ಸಿನ ಮಕ್ಕಳಲ್ಲಿ ವಿಜ್ಞಾನ ಬೋಧನೆ ಆಳವಾಗಿ ಬೇರೂರುವಂತೆ ಮಾಡಬೇಕಾಗಿದೆ ಎಂದು ತಹಸೀಲ್ದಾರ ಎಂ.ಕುಮಾರಸ್ವಾಮಿ ಕರೆ ನೀಡಿದರು.
ಪಟ್ಟಣದ ಪುಣ್ಯಕೋಟಿ ಎಜ್ಯುಕೇಶನಲ್ ಟ್ರಸ್ಟ್ ಶ್ರೀಸಿದ್ದೇಶ್ವರ ರಂಗಮಂದಿರದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಮ್ಮ ದೇಶ ಸಂಸ್ಕೃತಿ ಹಿರಿಮೆಯ ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಕೊಡುಗೆ ನೀಡಿದೆ. ಈ ಜಗತ್ತಿಗೆ ಸೊನ್ನೆ ಕಂಡು ಹಿಡಿದು ಕೊಟ್ಟಿದು ನಮ್ಮ ದೇಶ. ಇಂದು ತಂತ್ರಜ್ಞಾನ,ಸಾಪ್ಟವೇರ್ ಕ್ಷೇತ್ರದಲ್ಲಿ ದೇಶ ಯುವ ಸಮೂಹದವರ ಪಾರುಪತ್ತೆ ಹೆಚ್ಚಿದೆ. ಕೇವಲ ಶಿಸ್ತು, ಸಂಯಮ ಪಾಠ ಮಾಡದೆ ಮಕ್ಕಳಿಗೆ ಗಣಿತ ಮತ್ತು ವಿಜ್ಞಾನವನ್ನು ಸರಳ ಭಾಷೆಯಲ್ಲಿ ತಿಳಿ ಹೇಳಿ. ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ಕಠಿಣ ವಿಷಯ ಎಂದು ಆತಂಕ ಹುಟ್ಟಿಸುವ ಬದಲು ಕಲಿಯಲು ಬಲು ಸುಲಭ ಮತ್ತು ಸೂಸೂತ್ರ ಎನ್ನುವ ಸೂತ್ರದಲ್ಲಿ ಮಕ್ಕಳ ಮನಸ್ಸಿನ್ನು ಕೆರೆಳಿಸಿದರೆ ಯಾವುದು ಕಠಿಣವಲ್ಲ ಎಂದರು.
ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ ಮಾತನಾಡಿ, ಇತ್ತೀಚಿನ ಗ್ರಾಮೀಣ ಪ್ರದೇಶದ ಮಕ್ಕಳು ತುಂಬಾ ಚೂಟಿಗಳು. ಅವರಲ್ಲಿ ಕಲಿಕೆಯ ಸಾಮರ್ಥ್ಯ ಹೆಚ್ಚಾಗಿದೆ ಇದೆ. ಆದರೆ ನಾವು ಮತ್ತು ವ್ಯವಸ್ಥೆ ಈ ಕಲಿಕೆ ಸಾಮರ್ಥ್ಯಕ್ಕೆ ವೇದಿಕೆಯಾಗಬೇಕಾಗಿದೆ. ವೈಜ್ಞಾನಿಕ ಮಾದರಿ,ಹೊಸ ಆಲೋಚನೆಗಳು ಅವರು ಕಾರ್ಯರೂಪಕ್ಕೆ ತರಲು ನಾವು ಬೆಂಬಲಿಸಬೇಕಾಗಿದೆ. ಜತೆಗೆ ನಗರ ಮತ್ತು ಗ್ರಾಮೀಣ ಮಕ್ಕಳಿಗೆ ಸಮಾಜ ವೇದಿಕೆ ಸೃಷ್ಠಿ ಮಾಡುವ ಅವಶ್ಯತೆ ಇದೆ ಎಂದರು.ನಗರ ಮಕ್ಕಳಿಗೆ ಪ್ರಸಕ್ತ ದಿನಗಳಲ್ಲಿ ತಂತ್ರಜ್ಞಾನದ ಬಳಕೆಗೆ ಹೆಚ್ಚು ವೇದಿಕೆಗಳು ಸಿಗುತ್ತಿವೆ.ಇದೇ ಮಾದರಿಯಲ್ಲಿ ಗ್ರಾಮೀಣ ಮಕ್ಕಳು ಯಾವುದಕ್ಕೂ ಕಡಿಮೆ ಇಲ್ಲ ಎನ್ನುವುದನ್ನು ನಾವು ದೇಶಕ್ಕೆ ತೆರೆದಿಡಬೇಕಾಗಿದೆ. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಸಾಕಷ್ಟು ಸಾಧನೆ ಮಾಡಿದ್ದಾರೆ ಎಂದರು.
ಶಿಕ್ಷಣ ಸಂಯೋಜಕ ಶಶಿಧರ ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಸಂಗತಿಗಳನ್ನು ದಿನನಿತ್ಯದ ಜೀವನದಲ್ಲಿ ಕಂಡುಕೊಳ್ಳುವ ಮೂಲಕ ಅನ್ವಯಿಕ ಜ್ಞಾನ ಹೆಚ್ಚಿಸಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ೨೨ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಮಕ್ಕಳಿಂದ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು. ಮಕ್ಕಳ ತಮ್ಮ ಪ್ರತಿಭೆಯ ಆನಾವರಣಕ್ಕೆ ನೋಡುಗರ ಕಣ್ಮನ ಸೆಳೆದರು. ಇದೇ ವೇಳೆ ಮಕ್ಕಳಿಗೆ ರಂಗೋಲಿ ಮತ್ತು ಚಿತ್ರಕಲೆ ಸ್ಪರ್ಧೆ ನಡೆಯಿತು. ಉಪನ್ಯಾಸಕಿ ಡಾ.ಶಿಲ್ಪ ದಿವಟರ್ ನಿರ್ಣಾಯಕರಾಗಿದ್ದರು.
ನೀರಿನಲ್ಲಿ ರಾಸಾಯನಿಕ ಹಾಕಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಟ್ರಸ್ಟ್ಅಧ್ಯಕ್ಷ ಲಿಂಗಯ್ಯ ಸ್ವಾಮಿ ಶೀಲವಂತರಮಠ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಮುಖ್ಯಸ್ಥ ಮಂಜುನಾಥ ಹೊನಗುಡಿ, ವಿಜಯಲಕ್ಷ್ಮೀ ಹೊನಗುಡಿ, ಪಿಡಿಓ ಸಂಘದ ಅಧ್ಯಕ್ಷ ರಾಮು ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಶರಣಪ್ಪ ಸೋಮಲಾಪುರ, ಅಮರೇಶ ಮೈಲಾಪುರ, ತಿಮ್ಮಣ್ಣ ನಾಯಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ದ್ಯಾಮಣ್ಣ ಬೆನಕಟ್ಟಿ, ಯಮನೂರಪ್ಪ, ಮಂಜುನಾಥ ಚಿಕ್ಕೇನಕೊಪ್ಪ ಇದ್ದರು.ದೇವೇಂದ್ರಪ್ಪ ವಡ್ಡೋಡಗಿ ಮತ್ತು ಶರಣಪ್ಪ ಕೋಟ್ಯಾಳ ಕಾರ್ಯಕ್ರಮ ನಿರ್ವಹಿಸಿದರು.