ಸಾರ್ವಜನಿಕರ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡುವಂತೆ ಅಧಿಕಾರಿ ವರ್ಗಕ್ಕೆ ಸೂಚಿಸಿ: ಸಂದೇಶ್‌ ಸ್ವಾಮಿ

| Published : Mar 06 2025, 12:32 AM IST

ಸಾರ್ವಜನಿಕರ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡುವಂತೆ ಅಧಿಕಾರಿ ವರ್ಗಕ್ಕೆ ಸೂಚಿಸಿ: ಸಂದೇಶ್‌ ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ, ಶಿಫಾರಸ್ಸು ಇದ್ದವರಿಗಷ್ಟೇ ತ್ವರಿತವಾಗಿ ಸ್ಪಂದಿಸುತ್ತಾರೆ. ಇಲ್ಲವೇ ಮಧ್ಯವರ್ತಿಗಳ ಮೂಲಕ ಹೋಗಬೇಕು. ಬಡ ಹಾಗೂ ಮಧ್ಯಮ ವರ್ಗದ ಜನ ನೇರವಾಗಿ ಅರ್ಜಿ ನೀಡಿದರೆ ಆರು ತಿಂಗಳಾದರೂ ಅವರ ಕೆಲಸವಾಗುವುದಿಲ್ಲ. ಆದರೆ, ಮಧ್ಯವರ್ತಿಗಳ ಮೂಲಕ ಕೇವಲ ಆರು ದಿನಗಳಲ್ಲೇ ಆ ಕೆಲಸವಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡುವಂತೆ ಅಧಿಕಾರಿ ವರ್ಗಕ್ಕೆ ಸೂಚಿಸುವಂತೆ ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ ಆಗ್ರಹಿಸಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ. ಯಾವುದೇ ಇಲಾಖೆಗಳ ಕಚೇರಿಗಳಲ್ಲೂ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ, ಅರ್ಜಿ ಸಲ್ಲಿಸಿ ಮೂರ್ನಾಲ್ಕು ತಿಂಗಳಾದರೂ ಕೆಲಸವಾಗದೆ ಅಲೆದಾಡುವಂತಹ ದುಸ್ಥಿತಿ ಇದೆ.

ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ, ಶಿಫಾರಸ್ಸು ಇದ್ದವರಿಗಷ್ಟೇ ತ್ವರಿತವಾಗಿ ಸ್ಪಂದಿಸುತ್ತಾರೆ. ಇಲ್ಲವೇ ಮಧ್ಯವರ್ತಿಗಳ ಮೂಲಕ ಹೋಗಬೇಕು. ಬಡ ಹಾಗೂ ಮಧ್ಯಮ ವರ್ಗದ ಜನ ನೇರವಾಗಿ ಅರ್ಜಿ ನೀಡಿದರೆ ಆರು ತಿಂಗಳಾದರೂ ಅವರ ಕೆಲಸವಾಗುವುದಿಲ್ಲ. ಆದರೆ ಮಧ್ಯವರ್ತಿಗಳ ಮೂಲಕ ಕೇವಲ ಆರು ದಿನಗಳಲ್ಲೇ ಆ ಕೆಲಸವಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಉಳ್ಳವರು ಅವರು ಕೇಳಿದಷ್ಟು ಹಣ ನೀಡುತ್ತಾರೆ. ಬಡವರು ಅನಿವಾರ್ಯವಾಗಿ ಕಚೇರಿಗೆ ಅಲೆದಾಡುತ್ತಿದ್ದಾರೆ. ತೆರಿಗೆ ಪಾವತಿಗೂ ತಿಣುಕಾಡಬೇಕು ಎಂದಾದರೆ ವ್ಯವಸ್ಥೆ ಬಗ್ಗೆ ವಿಶ್ವಾಸ ಉಳಿಯುವುದಾದರೂ ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.

ತಾವು ಎಲ್ಲ ಇಲಾಖೆಗಳ ಕಾರ್ಯವೈಖರಿಯನ್ನು ಗಮನಿಸಿರುತ್ತೀರಿ. ಆದರೂ ಮತ್ತೊಮ್ಮೆ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಬೇಕು. ಸಾರ್ವಜನಿಕರು ನೇರವಾಗಿ ಸಲ್ಲಿಸಿದ ಅರ್ಜಿಗಳು ಹಾಗೂ ಮಧ್ಯವರ್ತಿಗಳ ಮೂಲಕ ಸಲ್ಲಿಕೆಯಾದ ಅರ್ಜಿಗಳ ಇತ್ಯರ್ಥಕ್ಕೆ ಎಷ್ಟು ಸಮಯವಾಗಿದೆ ಎಂಬುದನ್ನು ಪರಿಶೀಲಿಸಿದರೆ ವಾಸ್ತವ ತಿಳಿಯುತ್ತದೆ ಎಂದು ತಿಳಿಸಿದ್ದಾರೆ.

ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಲ್ಲೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೇಗೋ ಸರ್ಕಾರದ ಯೋಜನೆಗಳ ಬಗ್ಗೆ ತಿಳಿದು ಅರ್ಜಿ ಹಾಕಿದವರಿಗೂ ಸರಿಯಾದ ಮಾಹಿತಿ ನೀಡುವುದಿಲ್ಲ. ಏನಾದರೂ ಪ್ರಶ್ನಿಸಿದರೆ ನೆಪ ಹೇಳಿ, ಯಥಾಪ್ರಕಾರ ವಿಳಂಬ ಮಾಡುತ್ತಾರೆ. ಜನಸಾಮಾನ್ಯರ ಕೆಲಸಗಳು ನಿಯಮಾನುಸಾರ ಸಕಾಲದಲ್ಲಿ ಮಾಡಿಕೊಡಲು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಾವು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಸಾರ್ವಜನಿಕರ ಕೆಲಸಗಳು ಅನಗತ್ಯವಾಗಿ ವಿಳಂಬವಾದರೆ, ಮಧ್ಯವರ್ತಿಗಳನ್ನು ನಿಯಂತ್ರಿಸದಿದ್ದರೆ ಸಾರ್ವಜನಿಕರೊಂದಿಗೆ ಬೃಹತ್ ಜನಾಂದೋಲನ ನಡೆಸಲು ನಾನು ಸಿದ್ಧನಿದ್ದೇನೆ.

ಇನ್ನು ಮೈಸೂರು ಮಹಾನಗರ ಪಾಲಿಕೆಯ ನಿತ್ಯ ನಿರ್ವಹಣೆ ಬಗ್ಗೆ ತಾವು ನಿಗಾ ವಹಿಸುವುದು ಅಗತ್ಯವೆನಿಸಿದೆ. ಪಾಲಿಕೆ ಅಧಿಕಾರಿಗಳು ವೈಜ್ಞಾನಿಕವಾಗಿ ಟೆಂಡರ್ ಕರೆದು, ನಿರ್ವಹಣೆ ಮಾಡದಿರುವ ಪರಿಣಾಮ ಯುಜಿಡಿ ಸಮಸ್ಯೆ ಹೆಚ್ಚಾಗಿದೆ. ಕನಿಷ್ಟ ಸ್ವಚ್ಛಗೊಳಿಸುವ ಕೆಲಸಕ್ಕೂ ಕ್ರಮ ವಹಿಸುತ್ತಿಲ್ಲ. ಪೌರ ಕಾರ್ಮಿಕರನ್ನು ಅನ್ಯ ಕೆಲಸಗಳಿಗೆ ನಿಯೋಜಿಸುವುದರಿಂದ ಸ್ವಚ್ಛತೆ ನಿರ್ವಹಣೆ ಹದಗೆಟ್ಟು ಹೋಗುತ್ತಿದೆ. ತಾವು ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮರ್ಪಕ ನಿರ್ವಹಣೆ ಜೊತೆಗೆ ಸಾರ್ವಜನಿಕರಿಗೆ ಮೂಲ ಸೌಕರ್ಯಗಳ ಸಮಸ್ಯೆಯಾಗದಂತೆ ನಿರ್ವಹಿಸಲು ಸೂಚನೆ ನೀಡಬೇಕೆಂದು ಅವರು ಕೋರಿದ್ದಾರೆ.