ಹಾವೇರಿ ನಗರದಲ್ಲಿ ಫೆ. 13ರಂದು ನಡೆಯಲಿರುವ ರಾಜ್ಯ ಮಟ್ಟದ ಕಂದಾಯ ಇಲಾಖೆಯ ಹಕ್ಕುಪತ್ರ ವಿತರಣಾ ಸಮಾವೇಶದಲ್ಲಿ 1.20ಲಕ್ಷಕ್ಕೂ ಅಧಿಕ ಸಂಖ್ಯೆ ಫಲಾನುಭವಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ತಮಗೆ ವಹಿಸಿದ ಕೆಲಸವನ್ನು ಯಾವುದೇ ಲೋಪದೋಷವಾಗದಂತೆ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ಮಾಡಬೇಕು.

ಹಾವೇರಿ: ನಗರದಲ್ಲಿ ಫೆ. 13ರಂದು ನಡೆಯಲಿರುವ ರಾಜ್ಯ ಮಟ್ಟದ ಕಂದಾಯ ಇಲಾಖೆಯ ಹಕ್ಕುಪತ್ರ ವಿತರಣಾ ಸಮಾವೇಶದಲ್ಲಿ 1.20ಲಕ್ಷಕ್ಕೂ ಅಧಿಕ ಸಂಖ್ಯೆ ಫಲಾನುಭವಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ತಮಗೆ ವಹಿಸಿದ ಕೆಲಸವನ್ನು ಯಾವುದೇ ಲೋಪದೋಷವಾಗದಂತೆ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅಧಿಕಾರಿಗಳಿಗೆ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಗರದಲ್ಲಿ ಜರುಗಲಿರುವ ರಾಜ್ಯ ಮಟ್ಟದ ಕಂದಾಯ ಇಲಾಖೆಯ ಹಕ್ಕುಪತ್ರ ವಿತರಣಾ ಸಮಾವೇಶದ ಸಿದ್ಧತೆ ಕುರಿತು, ವಿವಿಧ ಸಮಿತಿಗಳ ಅಧ್ಯಕ್ಷರ ಹಾಗೂ ಸದಸ್ಯ ಕಾರ್ಯದರ್ಶಿಗಳ ಸಭೆ ನಡೆಸಿ, ವೇದಿಕೆ, ಹೆಲಿಪ್ಯಾಡ್ ನಿರ್ಮಾಣ ಸೇರಿದಂತೆ ವಿವಿಧ ಕೆಲಸಗಳ ಮಾಹಿತಿ ಪಡೆದು ಅವರು ಮಾತನಾಡಿದರು.ಕಾರ್ಯಕ್ರಮದ ಸಿದ್ಧತೆಗೆ ಸಮಯ ಬಹಳ ಉಳಿದಿಲ್ಲ. ಹಾಗಾಗಿ ಆಯಾ ಸಮಿತಿಗಳಿಗೆ ವಹಿಸಲಾದ ಕೆಲಸಗಳಿಗೆ ವೇಗ ನೀಡಬೇಕು. ಸಣ್ಣ-ಪುಟ್ಟ ಸಮಸ್ಯೆಗಳನ್ನು ತಮ್ಮ ಹಂತದಲ್ಲೇ ಬಗೆಹರಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.ವೇದಿಕೆ ನಿರ್ಮಾಣ, ಹೆಲಿಪ್ಯಾಡ್ ನಿರ್ಮಾಣ, ವಾಹನಗಳ ನಿಲುಗಡೆ ಪ್ರದೇಶಗಳ ಸಿದ್ಧತೆ ಆರಂಭಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಫಲಾನುಭವಿಗಳ, ಗಣ್ಯ ವ್ಯಕ್ತಿಗಳಿಗೆ ಸುಗಮ ಸಂಚಾರ, ವಾಹನ ವ್ಯವಸ್ಥೆ, ಆಸನ, ಊಟ, ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ, ತುರ್ತು ಆರೋಗ್ಯ ಚಿಕಿತ್ಸೆ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯವನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಬೇಕು ಎಂದು ಆಯಾ ಸಮಿತಿಗಳಿಗೆ ಸೂಚನೆ ನೀಡಿದರು.ಹುಬ್ಬಳ್ಳಿ ಕಡೆಯಿಂದ ಬರುವವರ ವಾಹನಗಳಿಗೆ ಪ್ರತ್ಯೇಕ ಹಾಗೂ ದಾವಣಗೆರೆ ಕಡೆಯಿಂದ ಬರುವವವರಿಗೆ ಪ್ರತ್ಯೇಕವಾಗಿ ವಾಹನ ನಿಲುಗಡಗೆ ವ್ಯವಸ್ಥೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಬೇಕು ಹಾಗೂ ವಾಹನ ನಿಲುಗಡೆ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು ಎಂದು ಸೂಚಿಸಿದರು. ಹಾವೇರಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಫಲಾನುಭವಿಗಳಿಗೆ ವ್ಯವಸ್ಥಿತವಾಗಿ ಹಕ್ಕು ಪತ್ರಗಳನ್ನು ವಿತರಣೆ ಮಾಡಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆಯಾ ಜಿಲ್ಲೆಯ ನೋಡಲ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಫಲಾನುಭವಿಗಳ ಪಟ್ಟಿಯನ್ನು ಎಕ್ಸೆಲ್ ಸೀಟ್‌ನಲ್ಲಿ ಪಡೆದುಕೊಳ್ಳಬೇಕು. ಕಾರ್ಯಕ್ರಮಕ್ಕೆ ಆಗಮಿಸುವ ಫಲಾನುಭವಿಗಳಿಗೆ ಪ್ರತ್ಯೇಕ ಪಾಸ್ ಹಾಗೂ ಜಿಲ್ಲಾವಾರು ಆಸನ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕಾರ್ಯಕ್ರಮ ವ್ಯವಸ್ಥೆಗೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಹಿರಿಯ ಅಧಿಕಾರಿಗಳು, ಪೊಲೀಸ್ ಇಲಾಖೆ ಸಿಬ್ಬಂದಿಗಳು ಹಾವೇರಿ ನಗರದ ಖಾಸಗಿ ಹೋಟೆಲ್, ಕಲ್ಯಾಣಮಂಟಪ, ವಿವಿಧ ಭವನಗಳಲ್ಲಿ ವಸತಿ ವ್ಯವಸ್ಥೆಗೆ ಸಮನ್ವಯ ಸಾಧಿಸುವಂತೆ ವಸತಿ ಸಮಿತಿಗೆ ಸೂಚಿಸಿದರು.ನೀರು-ಊಟದ ವ್ಯವಸ್ಥೆ..ಕಾರ್ಯಕ್ರಮಕ್ಕೆ ಆಗಮಿಸುವ ಫಲಾನುಭವಿಗಳಿಗೆ ಹಾಗೂ ಸಾರ್ವಜನಿಕರಿಗೆ ಶುದ್ಧಕುಡಿಯುವ ನೀರು, ಊಟದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಯಾವುದೇ ಕಾರಣಕ್ಕೂ ನೂಕುನುಗ್ಗಲು ಆಗದಂತೆ ಯೋಜನೆ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪ್ರಚಾರ ಮಾಡಿ: ನಗರದಲ್ಲಿ ಜರುಗಲಿರುವ ರಾಜ್ಯ ಮಟ್ಟದ ಕಂದಾಯ ಇಲಾಖೆಯ ಹಕ್ಕುಪತ್ರ ವಿತರಣಾ ಸಮಾವೇಶದ ಕುರಿತು ಬ್ಯಾನರ್ಸ್, ಪೋಲ್ಸ್, ಪೋಸ್ಟರ್‌ಗಳ ಮೂಲಕ ಹೆಚ್ಚಿನ ಪ್ರಚಾರಕೈಗೊಳ್ಳಬೇಕು. ನಗರದ ಪ್ರಮುಖ ಸ್ಥಳಗಳಲ್ಲಿ, ವೃತ್ತ, ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಬ್ಯಾನರ್ಸ್‌ ಪ್ರದರ್ಶಿಸಬೇಕು ಎಂದು ಸೂಚನೆ ನೀಡಿದರು.ರಾಜ್ಯ ಮಟ್ಟದ ಕಂದಾಯ ಇಲಾಖೆಯ ಹಕ್ಕುಪತ್ರ ವಿತರಣಾ ಸಮಾವೇಶ ದಿನದಂದು ನಗರವನ್ನು ತಳಿರು-ತೋರಣಗಳಿಂದ ಶೃಂಗರಿಸಬೇಕು. ವೇದಿಕೆಯ ಪಕ್ಕದಲ್ಲಿ ಅಗ್ನಿಶಾಮಕ ವಾಹನ, ಆಂಬ್ಯುಲೆನ್ಸ್ ವ್ಯವಸ್ಥೆ ಸೇರಿದಂತೆ ತುರ್ತು ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ಮುಂಜಾಗ್ರತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಕಾರ್ಯಕ್ರಮಕ್ಕೆ ಆಗಮಿಸುವ ಅಧಿಕಾರಿಗಳಿಗೆ, ವಾಹನಗಳಿಗೆ, ಮಾಧ್ಯಮದವರಿಗೆ, ವಿಐಪಿಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್., ಜಿಪಂ ಉಪ ಕಾರ್ಯದರ್ಶಿ ಡಾ.ಪುನಿತ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪೂಜಾರ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿಗಳಾದ ಶುಭಂ ಶುಕ್ಲಾ, ಕಲ್ಯಾಣಿ ಕಾಂಬ್ಳೆ, ಆರ್‌ಟಿಒ, ಕೆ.ಎಆರ್.ಟಿ.ಸಿ. ಡಿಸಿ, ತಹಸೀಲ್ದಾರ್ ಶರಣಮ್ಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.