ಹಾವೇರಿಯಲ್ಲಿ ಬೀದಿನಾಯಿ, ಜಾನುವಾರು ನಿಯಂತ್ರಣಕ್ಕೆ ಸೂಚನೆ

| Published : Nov 20 2025, 01:00 AM IST

ಸಾರಾಂಶ

ಬೀದಿನಾಯಿ, ಬಿಡಾಡಿ ಜಾನುವಾರು ನಿಯಂತ್ರಣ ಕುರಿತು ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.

ಹಾವೇರಿ: ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲೆಯಲ್ಲಿ ಬೀದಿನಾಯಿಗಳ ಹಾಗೂ ಬಿಡಾಡಿ ಜಾನುವಾರುಗಳ ನಿಯಂತ್ರಣಕ್ಕಾಗಿ ಇಲಾಖೆಗಳಿಗೆ ಕಾರ್ಯಾದೇಶ ನೀಡಲಾಗಿದೆ. ಇಂದಿನಿಂದಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಬೀದಿನಾಯಿಗಳ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ನಾಯಿ ಕಡಿತ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸ್ಥಳೀಯ ಸಂಸ್ಥೆಯವರು ಈ ಕುರಿತು ಅಲ್ಪಾವಧಿಯಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಬೀದಿ ನಾಯಿಗಳ ನಿಯಂತ್ರಣ ಕುರಿತು ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಬೀದಿನಾಯಿಗಳಿಗೆ ಆಹಾರ ನೀಡಲು ಸ್ಥಳ ಗುರುತಿಸಬೇಕು. ನಿಗದಿತ ಸ್ಥಳ ಹೊರತುಪಡಿಸಿ ಬೇರೆಡೆ ಆಹಾರ ನೀಡುವ ಪ್ರಕರಣ ವರದಿ ಮಾಡಲು ನೋಡೆಲ್‌ ಅಧಿಕಾರಿ ನೇಮಿಸಬೇಕು. ಹೆದ್ದಾರಿಗಳಲ್ಲಿ ಸಂಚಾರಕ್ಕೆ ಅಡಚಣೆ ಉಂಟುಮಾಡುವ ಬಿಡಾಡಿ ಜಾನುವಾರುಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಅರಿವು ಕಾರ್ಯಕ್ರಮ: ಎಲ್ಲ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪ್ರಾಣಿಗಳ ನಡವಳಿಕೆ ಬಗ್ಗೆ ಹಾಗೂ ಪ್ರಥಮ ಚಿಕಿತ್ಸೆ ಬಗ್ಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪಶುಪಾಲನಾ ಇಲಾಖೆಯ ಸಹಯೋಗದೊಂದಿಗೆ ಶಿಕ್ಷಣ ಇಲಾಖೆಯವರು ಕೈಗೊಳ್ಳಬೇಕು. ಸಂಬಂಧಿಸಿದ ಇಲಾಖೆ, ಸಂಸ್ಥೆಯವರು ತಾವು ಕೈಗೊಂಡ ಕ್ರಮಗಳ ಬಗ್ಗೆ ಅಫಿಡೆವಿಟ್‌ನ್ನು ಡಿ. 3ರೊಳಗಾಗಿ ಜಿಲ್ಲಾಡಳಿತಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಶಿವಯೋಗಿ ಯಲಿ ಅವರು ಸರ್ವೋಚ್ಚ ನ್ಯಾಯಾಲಯದ ಆದೇಶದ ಬಗ್ಗೆ ವಿಸ್ತಾರವಾಗಿ ಸಭೆಗೆ ವಿವರಿಸಿದರು.

ಯೋಜನಾ ನಿರ್ದೇಶಕ ಚಂದ್ರಪ್ಪ, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ಜಯಕುಮಾರ ಕಂಕಣವಾಡಿ, ಡಾ. ಕಿರಣಕುಮಾರ ಕೆ. ಕೊಪ್ಪದ ಇದ್ದರು.

ಬೀದಿನಾಯಿಗಳ ನಿಖರ ಸಂಖ್ಯೆ ಕಲೆ ಹಾಕಿ: ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಉದ್ಯಾನಗಳು, ಬಸ್ ನಿಲ್ದಾಣಗಳು-ಡಿಪೋಗಳು ಮತ್ತು ರೈಲು ನಿಲ್ದಾಣಗಳಂತಹ ಸಂಸ್ಥೆಗಳನ್ನು ಗುರುತಿಸಬೇಕು. ಸಾರ್ವಜನಿಕ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಂಡು ಬರುವ ಬೀದಿ ನಾಯಿಗಳ ನಿಖರವಾದ ಸಂಖ್ಯೆಯನ್ನು ನ. 21ರೊಳಗಾಗಿ ಸಂಬಂಧಪಟ್ಟ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು. ಸ್ಥಳೀಯ ಸಂಸ್ಥೆಯವರು ಬೀದಿ ನಾಯಿಗಳನ್ನು ಹಿಡಿದು ನಿಗದಿಪಡಿಸಿದ ಆಶ್ರಯ ತಾಣಗಳಿಗೆ ನ. 29ರೊಳಗೆ ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.