ಸಾರಾಂಶ
ದೇಶದ ಸರ್ವತೋಮುಖ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆಗಳ ಪಾತ್ರ ಪ್ರಧಾನವಾಗಿದ್ದು, ಲಭ್ಯವಿರುವ ಅನುದಾನವನ್ನು ಸರಿಯಾಗಿ ಅಭಿವೃದ್ಧಿ ಕೆಲಸಗಳಿಗೆ ಉಪಯೋಗಿಸಬೇಕು ಎಂದು 5ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ಸಿ. ನಾರಾಯಣಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗದಗ: 5ನೇ ಹಣಕಾಸು ಆಯೋಗಕ್ಕೆ ಮುಕ್ತವಾಗಿ ಸಲಹೆ-ಸೂಚನೆಗಳನ್ನು ಸ್ಥಳೀಯ ಸಂಸ್ಥೆಗಳು ನೀಡಬೇಕೆಂದು 5ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ಸಿ. ನಾರಾಯಣಸ್ವಾಮಿ ಹೇಳಿದರು.
ಅವರು ಬುಧವಾರ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದರು. ದೇಶದ ಸರ್ವತೋಮುಖ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆಗಳ ಪಾತ್ರ ಪ್ರಧಾನವಾಗಿದ್ದು, ಲಭ್ಯವಿರುವ ಅನುದಾನವನ್ನು ಸರಿಯಾಗಿ ಅಭಿವೃದ್ಧಿ ಕೆಲಸಗಳಿಗೆ ಉಪಯೋಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಸರ್ಕಾರ ನೀಡಿದ ಅನುದಾನವನ್ನು ಅಧಿಕಾರಿಗಳು ನಿಗದಿತ ಸಮಯದಲ್ಲಿ ಸದುಪಯೋಗ ಮಾಡಿಕೊಳ್ಳದಿದ್ದರೆ ಅನುದಾನ ಹಿಂದಿರುಗಿ ಹೊಗುತ್ತದೆ. ಸ್ಥಳೀಯ ಸಂಸ್ಥೆಗಳು ಅನುದಾನಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಅವಲಂಬಿತರಾಗದೆ, ಬುದ್ಧಿವಂತಿಕೆಯಿಂದ ಸ್ಥಳೀಯ ಮಟ್ಟದಲ್ಲಿ ಆದಾಯ ಮೂಲಗಳನ್ನು ಸೃಷ್ಟಿಸಿಕೊಳ್ಳಬೇಕು. ಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೀಡಿದ ಅಗತ್ಯ ಸಲಹೆ-ಸೂಚನೆಗಳನ್ನು ಪರಿಗಣಿಸಲಾಗುವುದು ಎಂದು ಹೇಳಿದರು.
5ನೇ ಹಣಕಾಸು ಆಯೋಗದ ಸದಸ್ಯ ಮೊಹಮ್ಮದ ಸನಾವುಲ್ಲಾ ಮಾತನಾಡಿ, ಮೂಲಭೂತ ಸೌಕರ್ಯವಾದ ಕುಡಿಯುವ ನೀರಿಗೆ ಹೆಚ್ಚು ಒತ್ತು ನೀಡಿ ಸರಿಯಾಗಿ ಜನರಿಗೆ ತಲುಪಿಸಬೇಕು. ಅಗತ್ಯವಿದ್ದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಬೇಕು. ಸ್ಥಳೀಯ ಸಂಸ್ಥೆಗಳ ಆದಾಯ ಮೂಲಗಳಾದ ವಾಣಿಜ್ಯ ತೆರಿಗೆಗಳನ್ನು ತ್ವರಿತವಾಗಿ ವಸುಲಾತಿ ಮಾಡಿ ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ,ತ್ಯಾಜ ವಿಲೇವಾರಿ, ಶೌಚಾಲಯ ಸೇರಿದಂತೆ ವಿವಿಧ ಕೆಲಸಗಳಿಗೆ ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.ಆಯೋಗದ ಸದಸ್ಯ ಆರ್.ಎಸ್. ಪೋಂಡೆ, ಸಮಾಲೋಚಕ ಎಂ.ಕೆ. ಕೆಂಪೇಗೌಡ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ, ನಗರಸಭೆ ಅಧ್ಯಕ್ಷೆ ಉಷಾ ದಾಸರ ಹಾಜರಿದ್ದರು.