ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

| Published : Aug 07 2025, 12:46 AM IST

ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಭೂಹಳ್ಳಿಯಿಂದ ಸಿಂಗರಾಜಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪಿ.ಯೋಗೇಶ್ವರ್ ಭೂಮಿಪೂಜೆ ನೆರವೇರಿಸಿದರು.

ಚನ್ನಪಟ್ಟಣ: ತಾಲೂಕಿನ ಭೂಹಳ್ಳಿಯಿಂದ ಸಿಂಗರಾಜಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪಿ.ಯೋಗೇಶ್ವರ್ ಭೂಮಿಪೂಜೆ ನೆರವೇರಿಸಿದರು.

ತಾಲೂಕಿನ ಸಿಂಗರಾಜಪುರ ಗ್ರಾಮದಲ್ಲಿ ಸುಮಾರು ೧.೫ ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಭೂಹಳ್ಳಿಯಿಂದ ಸಿಂಗರಾಜಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿಸುವ ಜತೆಗೆ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು.

ಸಿಂಗರಾಜಪುರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ವೇಣುಗೋಪಾಲಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ೧ ಕೋಟಿ ಅನುದಾನ ಬಿಡುಗಡೆಯಾಗಿದೆ. ಸ್ಥಳೀಯ ಭಕ್ತಾಧಿಗಳ ಮೂಲಕ ಸಂಪನ್ಮೂಲ ಕ್ರೋಢೀಕರಣ ಮಾಡಿಕೊಂಡು ದೇವಸ್ಥಾನ ಅಭಿವೃದ್ಧಿ ಮಾಡಲಾಗುವುದು. ಜತೆಗೆ ತಾಲೂಕಾದ್ಯಂತ ಹತ್ತು ಹಲವಾರು ಪುರಾತನ ದೇವಸ್ಥಾನಗಳ ಅಭಿವೃದ್ಧಿಗೆ ವಿಶೇಷವಾಗಿ ಒತ್ತು ನೀಡಲಾಗುತ್ತಿದ್ದು, ಸ್ಥಳೀಯರು ಹಾಗೂ ಭಕ್ತಾಧಿಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ ಮುಂದಾಗುವುದಾಗಿ ತಿಳಿಸಿದರು.

ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಸುಮಾರು ೮ರಿಂದ ೧೦ ಕೋಟಿಗಳ ಅನುದಾನ ಬಿಡುಗಡೆಗೆ ಮುಂದಾಗಿದ್ದು, ಜೊತೆಗೆ ದೇವಸ್ಥಾನದಲ್ಲಿ ಭಕ್ತಾಧಿಗಳಿಂದ ಸುಮಾರು ೧೩ ಕೋಟಿಯಷ್ಟು ಹಣ ಸಂಗ್ರಹವಾಗಿದೆ. ಸರ್ಕಾರ ಹಾಗೂ ದೇವಸ್ಥಾನದಲ್ಲಿ ಸಂಗ್ರಹವಾಗಿರುವ ಹಣ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೆಂಗಲ್ ದೇವಸ್ಥಾನ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಈ ಹಿಂದೆ ರಾಜಗೋಪುರ ನಿರ್ಮಾಣವಾಗಿದ್ದು, ಅದನ್ನು ಕೂಡ ಶಾಸ್ತ್ರೋಕ್ತವಾಗಿ ನಿರ್ಮಾಣ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.

ಅದೇ ರೀತಿ ಕೋಡಂಬಹಳ್ಳಿಯ ಬಳಿ ಪುರಾಣ ಪ್ರಸಿದ್ಧವಾಗಿರುವ ಚನ್ನಪಟ್ಟಣದ ಅರಸರ ಕಾಲದಲ್ಲಿ ನಿರ್ಮಾಣವಾಗಿದ್ದ ಮುರಡೇಶ್ವರ ದೇವಸ್ಥಾನದ ೭೨ಅಡಿ ಎತ್ತರದ ರಾಜಗೋಪುರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಜೊತೆಗೆ ದೇವಸ್ಥಾನದ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ಮಾಡಲಾಗಿದೆ. ಆ ಮೂಲಕ ದೇವಸ್ಥಾನದ ಅಭಿವೃದ್ಧಿಗೆ ಮುಂದಾಗುವುದಾಗಿ ತಿಳಿದರು.

ಮುಂಗಾರು ವೈಪರೀತ್ಯದಿಂದ ರಾಜ್ಯದಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ವಾಡಿಕೆಯಂತೆ ತಾಲೂಕಿಗೆ ಸಾಕಷ್ಟು ಮಳೆಯಾಗಬೇಕಿತ್ತು. ಆದರೆ ಸರಿಯಾದ ಸಮಯಕ್ಕೆ ಮಳೆಯಾಗದೆ ಇರುವುದರಿಂದ ತಾಲೂಕಾದ್ಯಂತ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಎರಡು ಪ್ರತ್ಯೇಕ ಮೋಟರ್‌ಗಳ ವ್ಯವಸ್ಥೆ ಮಾಡಿದ್ದು, ಇಗ್ಗಲೂರಿನಿಂದ ಕಣ್ವ ಜಲಾಶಯದ ಮಾರ್ಗವಾಗಿ ಒಂದು ಕೋಡಂಬಹಳ್ಳಿಯಿಂದ ಮೆಣಸಿಗನಹಳ್ಳಿ, ಭೂಹಳ್ಳಿ ಈ ಭಾಗದ ಕರೆಗಳಿಗೆ ತುಂಬಿಸಲು ಇನ್ನೊಂದು ಮೋಟರ್ ವ್ಯವಸ್ಥೆಯನ್ನು ಮಾಡಿದ್ದು, ತಾಲೂಕಿನಲ್ಲಿ ಬಹುತೇಕ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ನೀರಾವರಿಯಿಂದ ವಂಚಿತವಾಗಿದ್ದ ಕೆರೆಗಳಿಗೂ ನೀರು ತುಂಬಿಸುವ ಕೆಲಸವನ್ನು ಮಾಡಲಾಗುತ್ತಿದೆ. ಸಾಕಷ್ಟು ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೂ ಚಾಲನೆ ನೀಡಲಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಇಗ್ಗಲೂರು ಡ್ಯಾಂನಿಂದ ನೀರು ಎಲ್ಲಾ ಕೆರೆಗಳಿಗೂ ಸರಾಗವಾಗಿ ಹರಿದು ಬರಲಿದೆ ಎಂದು ಹೇಳಿದರು.

ಪೊಟೋ೬ಸಿಪಿಟಿ೨: ಚನ್ನಪಟ್ಟಣ ತಾಲೂಕಿನ ಭೂಹಳ್ಳಿಯಿಂದ ಸಿಂಗರಾಜಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪಿ.ಯೋಗೇಶ್ವರ್ ಭೂಮಿಪೂಜೆ ನೆರವೇರಿಸಿದ ಶಾಸಕ ಸಿ.ಪಿ.ಯೋಗೇಶ್ವರ್ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.