ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೋಂಸ್ಟೇ ನಡೆಸುವವರು ಮೊದಲಿಗೆ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಬೇಕು. ಅಲ್ಲದೆ ತಮ್ಮ ನೆರೆಯವರಿಗೆ ತೊಂದರೆಯಾಗದಂತೆ ನಿರ್ವಹಿಸುವುದು ಮುಖ್ಯ ಎಂದು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್ ಸೂಚನೆ ನೀಡಿದ್ದಾರೆ.ಗುರುವಾರ ಸಂಜೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾದ ಹೋಂಸ್ಟೆ ಹಾಗೂ ರೆಸಾರ್ಟ್ ಮಾಲೀಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಸರ್ಕಾರದ ಮಾರ್ಗಸೂಚಿ, ಪೊಲೀಸ್ ಇಲಾಖೆಯ ನಿಯಮ, ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಮಾರ್ಗಸೂಚಿಗಳನ್ವಯ ಪ್ರವಾಸಿಗರ ಸುರಕ್ಷತೆ ಕಡ್ಡಾಯ ನೋಂದಣಿಗೊಂಡಿರಬೇಕು. ಸಿಸಿಟಿವಿ ಅಳವಡಿಕೆ, ಸಿಬ್ಬಂದಿ ನೇಮಕಾತಿಗೊಂಡಾಗ ಅವರ ಸಂಪೂರ್ಣ ದಾಖಲಾತಿ ಹಾಗೂ ಪೊಲೀಸ್ ಇಲಾಖೆ ಮಾಹಿತಿ ನೀಡಿ ಪರಿಶೀಲನೆ ಆದ್ಯತೆ ನೀಡಬೇಕು ಎಂದರು.ಅಲ್ಲದೆ ಹೋಂಸ್ಟೆ ಮತ್ತು ರೆಸಾರ್ಟ್ ನಡೆಸುವವರು ಹಗಲು ಮತ್ತು ರಾತ್ರಿಯ ಸಮಯಪಾಲನೆಗೆ ಆದ್ಯತೆ ನೀಡಬೇಕು. ನೆರೆ ಹೊರೆಯವರಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು. ಹೋಂಸ್ಟೆ ಮತ್ತು ರೆಸಾರ್ಟ್‌ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಿರ್ವಹಣೆ ಸೇರಿದಂತೆ ಸರ್ಕಾರದ ಎಲ್ಲ ಮಾರ್ಗಸೂಚಿ ಹಾಗೂ ಆದೇಶದ ಬಗ್ಗೆ ಮಾಹಿತಿ ನೀಡಿದರು. ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.