ವಿದ್ಯೆ ಜತೆಗೆ ಸಾಮಾಜಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಿ

| Published : Dec 16 2024, 12:47 AM IST

ಸಾರಾಂಶ

ಮಕ್ಕಳಿಗೆ ವಿದ್ಯೆಯೊಂದಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಸಾಮಾಜಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರ ಮಹತ್ತರದ್ದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಹೇಳಿದರು. ಇತ್ತೀಚಿನ ದಿನಗಳಲ್ಲಿನ ಜಂಜಾಟದ ಒತ್ತಡದ ಬದುಕಿನಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಹಳುಹಿಸಿದರೆ ಸಾಕು ಎನ್ನುತ್ತಾರೆ. ನಾವು ಮಕ್ಕಳಿಗೆ ಏನು ಕೊಡಬೇಕೆಂಬುದನ್ನು ಬಿಟ್ಟು ದುಡಿಮೆಯಲ್ಲೆ ತೊಡಗುತ್ತೇವೆ. ಮನೆಯೇ ಮೊದಲ ಪಾಠಶಾಲೆ, ತಾಯಿ ಮೊದಲ ಗುರುವಾದರೆ ಶಾಲೆಯಲ್ಲಿ ಶಿಕ್ಷಕರು ಎರಡನೇ ತಾಯಿಯಾಗಿರುತ್ತಾರೆ ಎಂಬುದನ್ನು ಪ್ರತಿಯೊಬರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಮಕ್ಕಳಿಗೆ ವಿದ್ಯೆಯೊಂದಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಸಾಮಾಜಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರ ಮಹತ್ತರದ್ದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಹೇಳಿದರು.

ಪಟ್ಟಣದ ದಿವ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ೨೦೨೪ರ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಮನೆ ಹಾಗೂ ಶಾಲಾ ವಾತಾವರಣ ಸರಿ ಇಲ್ಲದಿದ್ದರೆ ಮಕ್ಕಳ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ. ಆದ್ದರಿಂದ ಪೋಷಕರು ಸಾಧ್ಯವಾದಷ್ಟು ಸಮಯವನ್ನು ಮಕ್ಕಳೊಂದಿಗಿರಲು ಮೀಸಲಿಟ್ಟಾಗ ಮಾತ್ರ ಅವರ ಮನಸ್ಸನ್ನು ತಿಳಿಯಬಹುದಾಗಿದೆ. ಜತೆಗೆ ಇತ್ತೀಚಿನ ದಿನಗಳಲ್ಲಿನ ಜಂಜಾಟದ ಒತ್ತಡದ ಬದುಕಿನಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಹಳುಹಿಸಿದರೆ ಸಾಕು ಎನ್ನುತ್ತಾರೆ. ನಾವು ಮಕ್ಕಳಿಗೆ ಏನು ಕೊಡಬೇಕೆಂಬುದನ್ನು ಬಿಟ್ಟು ದುಡಿಮೆಯಲ್ಲೆ ತೊಡಗುತ್ತೇವೆ. ಮನೆಯೇ ಮೊದಲ ಪಾಠಶಾಲೆ, ತಾಯಿ ಮೊದಲ ಗುರುವಾದರೆ ಶಾಲೆಯಲ್ಲಿ ಶಿಕ್ಷಕರು ಎರಡನೇ ತಾಯಿಯಾಗಿರುತ್ತಾರೆ ಎಂಬುದನ್ನು ಪ್ರತಿಯೊಬರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಪೋಷಕರು ಶಾಲೆಗಳಿಗೆ ಆಗಿಂದಾಗ್ಗೆ ಭೇಟಿ ಕೊಟ್ಟು ಚರ್ಚಿಸಿ ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಬೇಕು. ಇದರೊಂದಿಗೆ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರಗಳೊಂದಿಗೆ ಉತ್ತಮ ಸಾಧನೆ ಮಾಡಿಸಿ ದೇಶದ ಒಬ್ಬ ಉತ್ತಮ ಪ್ರಜೆಯಾಗಿಸಲು ಮುಂದಾಗಬೇಕು. ಮಕ್ಕಳು ಸಹ ಶಾಲೆಗೆ ಬಂದು ಓದರೆ ಸಾಲದು ಪಠ್ಯದೊಂದಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುಟಿಕೆಗಳಲ್ಲಿ ಭಾಗವಹಿಸಿ ಕೀರ್ತಿವಂತರಾಗಬೇಕು ಎಂದರು.

ಪುರಸಭೆ ಸದಸ್ಯ ಬಿ.ಗಿರೀಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂದು ವಿದ್ಯೆಯೊಂದಿಗೆ ಸಾಧನೆ ಮಾಡಲು ವಿಫುಲವಾದ ಹಲವಾರು ಕ್ಷೇತ್ರಗಳಿವೆ. ಮಕ್ಕಳು ಅವರ ಆಸಕ್ತಿಗೆ ತಕ್ಕಂತೆ ಅವರ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬಕಿದೆ. ಜತೆಗೆ ಪೋಷಕರು ಸಹ ಮಕ್ಕಳ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹಿಸಬೇಕಿದೆ. ಇಂತಹ ವೇದಿಕೆಯನ್ನ ಮಕ್ಕಳು ಉತ್ತಮವಾಗಿ ಬೆಳೆಸಿಕೊಂಡು ಜೀವನದಲ್ಲಿ ಏನನ್ನಾದರೂ ಸಾಧಿಸಲು ಮುಂದಾಗಬೇಕು ಎಂದರು.

ಬಿಆರ್‌ಸಿ ಶಿವಮರಿಯಪ್ಪ, ದಿವ್ಯ ವಿದ್ಯಾಸಂಸ್ಥೆ ಸಂಸ್ಥಾಪಕ ಗೌಡೇಗೌಡ, ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ವನಜಾಕ್ಷಿ ಗೌಡೇಗೌಡ, ಸಂಸ್ಥೆ ನಿರ್ದೇಶಕಿ ದಿವ್ಯ, ಮುಖ್ಯೋಪಧ್ಯಾಯರಾದ ಚೇತನ್, ಉಮೇಶ್, ಶಿಕ್ಷಕರದ ಪುಟ್ಟೇಗೌಡ, ನಾಗರಾಜು ಸೇರಿದಂತೆ ಇತರರಿದ್ದರು.