ಸಾರಾಂಶ
ಕಡೂರಿನ ಪ್ರಜ್ಞಾ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ ಪ್ರಜ್ಞಾ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಕಡೂರುಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವಿದ್ದಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಮಾನಸಿಕ ವಿಕಾಸಕ್ಕೆ ಅನುಕೂಲವಾಗುತ್ತದೆ ಎಂದು ತಹಸೀಲ್ದಾರ್ ಎಂ.ಪಿ.ಕವಿರಾಜ್ ಹೇಳಿದರು.ಕಡೂರಿನ ಪ್ರಜ್ಞಾ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ ಪ್ರಜ್ಞಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೆಚ್ಚು ಓದಿದಷ್ಟೂ ನಮ್ಮ ಜ್ಞಾನದ ಮಟ್ಟ ಹೆಚ್ಚುತ್ತದೆ. ಶಾಲೆಯಲ್ಲಿ ಕೇವಲ ಓದುವುದು ಮಾತ್ರವಲ್ಲ, ಪಠ್ಯೇತರ ಚಟುವಟಿಕೆಗಳಿಗೂ ಅವಕಾಶ ದೊರೆಯಬೇಕು. ಪೋಷಕರು ಕೇವಲ ಮಕ್ಕಳ ಅಂಕ ಗಳಿಕೆಯತ್ತ ಮಾತ್ರ ಗಮನ ಕೊಡದೆ ಶಾಲೆಯಲ್ಲಿ ಏನು ಕಲಿತರು ಹಾಗೂ ಅದನ್ನು ಹೇಗೆ ಸದುಪಯೋಗ ಪಡಿಸಿಕೊಂಡಿದ್ದಾರೆಂಬ ಬಗ್ಗೆಯೂ ಗಮನ ಹರಿಸಬೇಕು. ಈ ಶಾಲೆ ಆಡಳಿತ ಮಂಡಳಿ ಉತ್ತಮ ಶಿಕ್ಷಣ ನೀಡುತ್ತಿರುವುದಕ್ಕೆ ಶ್ಲಾಘಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಎಷ್ಟೇ ಎತ್ತರದ ಸ್ಥಾನಕ್ಕೇರಿದರೂ ತಾವು ಓದಿದ ಶಾಲೆ ಬಗ್ಗೆ ಅಭಿಮಾನವಿಟ್ಟುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಪ್ರಜ್ಞಾ ಶಾಲೆ ಎಲ್ಲ ಶಿಕ್ಷಕ ವರ್ಗದವರಿಗೆ ಅಭಿನಂದನೆ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಂ.ರಾಜಣ್ಣ ಮಾತನಾಡಿ, ರಾಜಕೀಯದಲ್ಲಿ ಧರ್ಮವಿರಬೇಕು. ಆದರೆ ಧರ್ಮದಲ್ಲಿ ರಾಜಕೀಯ ಇರಬಾರದು. ಸದಾ ಧರ್ಮ ಮಾರ್ಗದಲ್ಲಿಯೇ ನಾವು ಮುನ್ನಡೆಯಬೇಕು. ವಿದ್ಯಾರ್ಥಿಗಳು ಸದಾಕಾಲವೂ ಸಂಸ್ಕಾರಯುತರಾಗಿ ಬದುಕುವ ಗುರಿಯೊಡನೆ ಮುನ್ನುಗ್ಗಬೇಕು ಎಂದ ಅವರು ಮಕ್ಕಳ ರಕ್ಷಣೆಯ ಕಾನೂನಿನ ಬಗ್ಗೆ ಅರಿವು ಪೋಷಕರಲ್ಲಿ ಇರಬೇಕು ಎಂದರು.
ಶಾಲೆ ಪ್ರಧಾನ ಕಾರ್ಯದರ್ಶಿ ಎಂ.ಪಿ.ಮಂಜುನಾಥ ಪ್ರಸನ್ನ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ನೈತಿಕ ಮಾರ್ಗದರ್ಶನ ದೊರೆಯುವುದಕ್ಕೆ ಪೂರಕವಾಗಿ ಶಾಲಾ ಆಡಳಿತ ಮಂಡಳಿ ಸದಾ ಶ್ರಮಿಸುತ್ತಿದೆ. ವಿದ್ಯಾರ್ಥಿ ಗಳ ಸರ್ವಾಂಗೀಣ ಅಭಿವೃದ್ಧಿಗೆ ಸುಭಧ್ರ ಬುನಾದಿ ಹಾಕುವುದು ನಮ್ಮ ಶಾಲೆ ಗುರಿ ಎಂದರು.ಮಕ್ಕಳಿಂದ ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು. ಬೀರೂರಿನ ಡಾ.ಮಾರ್ಗದ ಮನು, ಉಪಾಧ್ಯಕ್ಷ ಪ್ರಶಾಂತ್, ಖಜಾಂಚಿ ಡಾ.ಶಿವಕುಮಾರ್, ನಿರ್ದೇಶಕ ನವೀನ್ ಡಿ.ಆಲ್ಮೆಡಾ, ಮುಖ್ಯಶಿಕ್ಷಕಿ ಕ್ಲಾರಾ ಡಿ ಮೆಲ್ಲೋ ಮಾತನಾಡಿದರು. 15ಕೆಕೆಡಿಯು2.
ಕಡೂರು ಪ್ರಜ್ಞಾ ಶಾಲೆಯ ಪ್ರಜ್ಞಾ ಸಂಭ್ರಮ ಕಾರ್ಯಕ್ರಮವನ್ನು ತಹಸೀಲ್ದಾರ್ ಎಂ.ಪಿ.ಕವಿರಾಜ್ ಉದ್ಘಾಟಿಸಿದರು. ಮಂಜುನಾಥ ಪ್ರಸನ್ನ, ಡಾ.ಶಿವಕುಮಾರ್, ಪ್ರಶಾಂತ್ ಮತ್ತಿತರರು ಇದ್ದರು.