ಇಂದಿರಾ ಗಾಂಧಿ ಅವರೇ ಆರ್ಥಿಕ ಶಿಸ್ತು ಕಾಪಾಡಲು ಚಿನ್ನ ಖರೀದಿಸಬೇಡಿ ಎಂದು ಹೇಳಿಕೆ ನೀಡಿದ್ದನ್ನು ಇಂದಿನ ಕಾಂಗ್ರೆಸ್ ಮುಖಂಡರು ಮರೆತಿದ್ದಾರೆ ಎಂದು ಶಾಸಕ ಸಿ.ಸಿ. ಪಾಟೀಲ ಆರೋಪಿಸಿದರು.

ಗದಗ: ಮಧ್ಯಪ್ರಾಚ್ಯದ ಯುದ್ಧದ ಹಿನ್ನೆಲೆ ವಿದೇಶಿ ವಿನಿಮಯ ಕೊರತೆ ಆಗಬಾರದು ಮತ್ತು ದೇಶದ ಹಿತದೃಷ್ಟಿಯಿಂದ ಕೆಲ ಸಂಪನ್ಮೂಲಗಳ ಬಳಕೆಯಲ್ಲಿ ಮಿತವ್ಯಯ ಅನುಸರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಅದನ್ನೇ ದಿಕ್ಕು ತಪ್ಪಿಸುವ ರೀತಿಯಲ್ಲಿ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದು, ಇದು ಅವರ ಬೌದ್ಧಿಕ ದಾರಿದ್ರ್ಯವನ್ನು ತೋರಿಸುತ್ತದೆ ಎಂದು ನರಗುಂದ ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಹಿತ ಕಾಪಾಡುವ ದೃಷ್ಟಿಯಿಂದ 1967ರಲ್ಲಿ ಇಂದಿರಾ ಗಾಂಧಿ ಅವರು ಕೂಡ ಇಂತಹದ್ದೇ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್, ಕೇಂದ್ರ ಸಚಿವರಾಗಿದ್ದ ವೀರಪ್ಪ ಮೊಯ್ಲಿ, ಕಪಿಲ್ ಸಿಬಲ್ ಅವರು ಹಲವು ಸಂದರ್ಭಗಳಲ್ಲಿ ತೈಲದ ಮಿತ ಬಳಕೆ ಕುರಿತು ಹೇಳಿಕೆ ನೀಡಿದ್ದರು. ಇಂದಿರಾ ಗಾಂಧಿ ಅವರೇ ಆರ್ಥಿಕ ಶಿಸ್ತು ಕಾಪಾಡಲು ಚಿನ್ನ ಖರೀದಿಸಬೇಡಿ ಎಂದು ಹೇಳಿಕೆ ನೀಡಿದ್ದನ್ನು ಇಂದಿನ ಕಾಂಗ್ರೆಸ್ ಮುಖಂಡರು ಮರೆತಿದ್ದಾರೆ ಎಂದರು.

ರಾಹುಲ್ ಗಾಂಧಿ ಅವರಂತೂ ಹುಡುಗರಂತೆ ಮಾತನಾಡುವುದನ್ನು ಮುಂದುವರಿಸಿದ್ದಾರೆ. ಚುನಾವಣೆಯ ವೇಳೆಯಲ್ಲಿಯೂ ಏನೇನೋ ಮಾತನಾಡುವುದು, ಅವರ ಪಕ್ಷ ಚುನಾವಣೆಯಲ್ಲಿ ಸೋತ ನಂತರ ವಿದೇಶಕ್ಕೆ ಹೋಗಿ ಅಲ್ಲಿಯೂ ದೇಶದ ವ್ಯವಸ್ಥೆಯ ಬಗ್ಗೆ ಮಾತನಾಡುವುದು ಅವರಿಗೆ ರೂಢಿಯಾಗಿದೆ. ಹಾಗಾಗಿಯೇ ದೇಶದಲ್ಲಿ ಕಾಂಗ್ರೆಸ್ ಎಷ್ಟು ರಾಜ್ಯದಲ್ಲಿ ಅಧಿಕಾರದಲ್ಲಿದೆ ಎನ್ನುವುದನ್ನು ಎಲ್ಲರೂ ಗಮನಿಸಬೇಕು. ಆದರೆ ಹಲವು ಬಾರಿ ಬಜೆಟ್ ಮಂಡಿಸಿದ ಹಿರಿಯ ಆರ್ಥಿಕ ತಜ್ಞರು ಎಂದು ಗುರುತಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಹೇಳಿಕೆಯನ್ನು ಆಲೋಚಿಸದೇ ವಿರೋಧಿಸುತ್ತಿದ್ದಾರೆ. ದೇಶದ ಭದ್ರತೆ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದರು.

ಹಿಂದು ವಿರೋಧಿಗಳಿಗೆ ಸೋಲು: ತಮಿಳುನಾಡಿನ ಸಿಎಂ ವಿಜಯ್ ಅವರು ಚುನಾವಣೆ ಮೊದಲು ಕೇವಲ ವಿಜಯ್ ಆಗಿದ್ದರು. ಚುನಾವಣೆಯಲ್ಲಿ ಗೆದ್ದ ನಂತರ ಅವರು ಜೋಸೆಫ್ ವಿಜಯ್ ಆಗಿದ್ದಾರೆ. ಅದೇ ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮ ನಾಶ ಮಾಡಬೇಕು ಎಂದು ಹೇಳಿದ್ದಾರೆ. ಸನಾತನ ಧರ್ಮವನ್ನು ವಿರೋಧಿಸಿದ ಎಲ್ಲರೂ ಒಂದಿಲ್ಲೊಂದು ಕಾರಣದಿಂದ ನಾಶ ಆಗಿದ್ದಾರೆ. ಹಾಗೆಯೇ ಉದಯನಿಧಿ ಅವರು ರಾಜಕಾರಣದಿಂದ ನಾಶ ಆಗಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಎಂ.ಎಂ. ಹಿರೇಮಠ, ಎಂ.ಎಸ್. ಕರೀಗೌಡ್ರ, ಉಷಾ ದಾಸರ, ನೀರ್ಮಲಾ ಕೊಳ್ಳಿ ಇತರರು ಇದ್ದರು.

ಜಿಲ್ಲಾಧಿಕಾರಿ ಸುಗ್ಗಿಗೆ ಬಂದಿದ್ದಾರೆ: ಆರೋಪ

ಜಿಲ್ಲಾಧಿಕಾರಿ ಜಿಲ್ಲೆಯ ಜನತೆಯ ಸೇವೆ ಮಾಡಲು ಬಂದಿಲ್ಲ. ಅವರು ಇಲ್ಲಿಗೆ ಸುಗ್ಗಿ ಮಾಡಲು ಬಂದಿದ್ದಾರೆ. ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಬೇಕಾದರೆ ಬೆಳಗ್ಗೆ 10ರಿಂದ 5ರ ವರೆಗೆ ಮಾತ್ರ ಅವರ ಸರ್ಕಾರಿ ಮೊಬೈಲ್‌ ಆನ್ ಆಗಿರುತ್ತದೆ. 10 ಗಂಟೆಗೂ ಮೊದಲು, 5 ಗಂಟೆ ನಂತರ ಅವರ ಫೋನ್ ಸ್ವಿಚ್ ಆಫ್ ಇರುತ್ತದೆ. ಇವರೇ ಜಿಪಂ ಸಿಇಒ ಕೂಡಾ ಆಗಿದ್ದಾರೆ. ಜಿಲ್ಲೆಯ ಜನರ ಸಮಸ್ಯೆಗಳಿಗೆ ಕಿಂಚಿತ್ತೂ ಸ್ಪಂದಿಸುತ್ತಿಲ್ಲ. ಅವರು ಮಾತನಾಡುವ ರೀತಿಯೇ ವಿಚಿತ್ರವಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಅವರು ನಿವೃತ್ತ ಆಗಲಿದ್ದಾರೆ. ಇವರಂಥ ಹಿರಿಯ ಅಧಿಕಾರಿಗಳಿಂದ ಈ ರೀತಿಯ ನಿರ್ಲಕ್ಷ್ಯದ ವರ್ತನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಅದೇಗೆ ಸಹಿಸಿಕೊಳ್ಳುತ್ತಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ. ಈ ಬಗ್ಗೆ ಸಚಿವ ಎಚ್.ಕೆ. ಪಾಟೀಲ ಅವರ ಗಮನಕ್ಕೆ ತಂದಿದ್ದೇನೆ. ನಾನೂ ಸಚಿವನಾಗಿ ಕೆಲಸ ಮಾಡಿದ್ದೇನೆ. ಇವರಂಥ ಜಿಲ್ಲಾಧಿಕಾರಿಗಳನ್ನು ನೋಡಿಯೇ ಇಲ್ಲ. ಶಾಸಕರಾದ ನಮ್ಮ ಸ್ಥಿತಿಯೇ ಹೀಗಾದರೆ ಇನ್ನು ಜನ ಸಾಮಾನ್ಯರ ಗತಿ ಏನು? ಎಂದು ಸಿ.ಸಿ.ಪಾಟೀಲ ಅವರು ಜಿಲ್ಲಾಧಿಕಾರಿ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.