ಸೃಜನಶೀಲ ಚತುರತೆ ರಕ್ಷಿಸಲು ಬೌದ್ಧಿಕ ಆಸ್ತಿ ಹಕ್ಕುಗಳೇ ಸಾಧನ: ಪ್ರೊ.ವೈ.ವಿಜಯಕುಮಾರ್

| Published : Apr 29 2024, 01:34 AM IST

ಸೃಜನಶೀಲ ಚತುರತೆ ರಕ್ಷಿಸಲು ಬೌದ್ಧಿಕ ಆಸ್ತಿ ಹಕ್ಕುಗಳೇ ಸಾಧನ: ಪ್ರೊ.ವೈ.ವಿಜಯಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ವಿಶ್ವ ಬೌದ್ಧಿಕ ಆಸ್ತಿ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಬೌದ್ಧಿಕ ಆಸ್ತಿ ಜಾಗೃತಿ ಕಾರ್ಯಕ್ರಮಕ್ಕೆ ಜೆಎನ್‌ಎನ್‌ಸಿಇ ಪ್ರಾಚಾರ್ಯ ಪ್ರೊ. ವೈ.ವಿಜಯಕುಮಾರ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಂಶೋಧನಾ ಸಹಯೋಗಗಳು ಮತ್ತು ಸೃಜನಶೀಲ ಚತುರತೆಯನ್ನು ರಕ್ಷಿಸಲು ಬೌದ್ಧಿಕ ಆಸ್ತಿ ಹಕ್ಕುಗಳು ಪ್ರಮುಖ ಸಾಧನವಾಗಿವೆ ಎಂದು ಜೆಎನ್‌ಎನ್‌ಸಿಇ ಪ್ರಾಚಾರ್ಯ ಪ್ರೊ.ವೈ.ವಿಜಯಕುಮಾರ್ ಹೇಳಿದರು.

ವಿಶ್ವ ಬೌದ್ಧಿಕ ಆಸ್ತಿ ದಿನದ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಉದ್ಯಮಿಗಳು ಹಾಗೂ ಎಂಎಸ್‌ಎಂಇ ಸಬಲೀಕರಣಗೊಳಿಸಲು ಬೌದ್ಧಿಕ ಆಸ್ತಿ ಜಾಗೃತಿ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದ ಅವರು, ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವಲ್ಲಿ ಮತ್ತು ಕೈಗಾರಿಕೆಗಳಿಗೆ ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುವಲ್ಲಿ ನವೀನ ಆಲೋಚನೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ತಿಳಿಸಿದರು.

ತಜ್ಞರು, ಸಂಶೋಧಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಶಿವಮೊಗ್ಗದ ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳೊಂದಿಗೆ ಸಹ ಯೋಗದ ಪ್ರಯತ್ನಗಳನ್ನು ಹೊಂದುವುದು ಅತ್ಯಂತ ಅವಶ್ಯಕ. ಇದರಿಂದ ಭವಿಷ್ಯದ ದಿನಗಳಲ್ಲಿ ಸಹಾಯಕವಾಗಲಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾದ ಎಸ್‌ಸಿಕೆ ಅಸೋಸಿಯೇಟ್ಸ್ ವಕೀಲೆ ಸಾಧ್ವಿ ಸಿ.ಕಾಂತ್ ಮಾತನಾಡಿ, ಪ್ರತಿ ವರ್ಷ ಏಪ್ರಿಲ್ 26ರಂದು ಆಚರಿಸಲಾಗುವ ವಿಶ್ವ ಐಪಿ ದಿನದ ಮಹತ್ವದ ಕುರಿತು ಮಾತನಾಡಿದರು. ನವೀನ ಮತ್ತು ಸೃಜನಶೀಲ ಉತ್ಪನ್ನಗಳನ್ನು ಕಾನೂನುಬದ್ಧವಾಗಿ ರಕ್ಷಿಸಲು ಮತ್ತು ಆರ್ಥಿಕ ಲಾಭವನ್ನು ಪಡೆದು ಕೊಳ್ಳಲು ಬೌದ್ಧಿಕ ಆಸ್ತಿ ಹಕ್ಕುಗಳು ಸಾಧನವಾಗಿರುತ್ತವೆ ಎಂದು ಹೇಳಿದರು. ಇನ್ನು, ಇದರ ಉಲ್ಲಂಘನೆಯ ವಿರುದ್ಧ ಕಾನೂನು ಪರಿಹಾರಗಳು ಮತ್ತು ಸ್ವಂತ ಬೌದ್ಧಿಕ ಆಸ್ತಿ ಹಕ್ಕುಗಳನ್ನು (IPR) ಹೇಗೆ ರಕ್ಷಿಸಿಕೊಳುವುದರ ಸಂಬಂಧಿಸಿದಂತೆ ಜಾಗೃತಿ ಮೂಡಿಸಿದರಲ್ಲದೆ, ಬೌದ್ಧಿಕ ಆಸ್ತಿ ಫೈಲಿಂಗ್ ಸೌಲಭ್ಯವನ್ನು ಈಗ ಶಿವಮೊಗ್ಗದಲ್ಲೂ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಉದ್ಯಮದಲ್ಲಿ ನವೀನ ಚಟುವಟಿಕೆಗಳನ್ನು ಹೆಚ್ಚಿಸುವ ಮೂಲಕ ಪ್ರಗತಿ ಹೊಂದಬೇಕು. ಭವಿಷ್ಯದ ಕಾಯ್ದೆಗಳಿಗೆ ಅನುಗುಣವಾಗಿ ಉದ್ಯಮ ನಡೆಸಲು ಪೂರಕ ತಿಳವಳಿಕೆ ಹೊಂದುವುದು ಅವಶ್ಯಕ ಎಂದು ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಖಜಾಂಚಿ ಎಂ.ರಾಜು, ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ನಿರ್ದೇಶಕರಾದ ಇ.ಪರಮೇಶ್ವರ, ರಮೇಶ್ ಹೆಗಡೆ, ಸ್ಕಿಲ್ ಅಕಾಡೆಮಿಯ ಸವಿತಾ ಮಾಧವ್, ಸಚಿನ್ ಹೆಗಡೆಕುಡ್ಗಿ, ಶಶಿ ಕಾಂತ್ ನಾಡಿಗ್, ಪ್ರೊ.ಯು.ಅರ್ಜುನ್, ದೀಪಕ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉದ್ಯಮದ ಸಿಬ್ಬಂದಿ, ಎಂಎಸ್‌ಎಂಇ, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ವಕೀಲರು, ಐಪಿ ಉತ್ಸಾಹಿಗಳಿಂದ ಹಿಡಿದು ವಿವಿಧ ಹಿನ್ನೆಲೆಯಿಂದ ಬಂದವರು ಹಾಗೂ ಐಪಿ ಹೊಂದಿರುವವರು, ಕೈಗಾರಿಕಾ ಉದ್ಯಮಿಗಳು ಪಾಲ್ಗೊಂಡಿದ್ದರು.