ನಾಗಮಂಗಲ ಗಲಭೆ ವಿಷಯದಲ್ಲಿ ಗುಪ್ತಚರ ಇಲಾಖೆ ವಿಫಲ: ನಿಖಿಲ್ ಕುಮಾರಸ್ವಾಮಿ

| Published : Sep 19 2024, 01:55 AM IST / Updated: Sep 19 2024, 01:56 AM IST

ಸಾರಾಂಶ

ಚನ್ನಪಟ್ಟಣ ಉಪ ಚುನಾವಣೆಗೆ ಸಂಬಂಧಿಸಿದಂತೆ ಸಿ.ಪಿ.ಯೋಗೇಶ್ವರ್‌ ಕೂಡ ಸಭೆಗಳನ್ನು ನಡೆಸುತ್ತಿದ್ದಾರೆ. ನಾವು ಕೂಡ ನಮ್ಮ ಕಾರ್ಯಕರ್ತರ ಜೊತೆ ಸಭೆ ಮಾಡುತ್ತಿದ್ದೇನೆ. ಒಟ್ಟಾರೆಯಾಗಿ ಎನ್.ಡಿ.ಎ ಅಭ್ಯರ್ಥಿ ಕಣಕ್ಕಿಳಿತ್ತಾರೆ. ನಾನು ನಿಲ್ಲುತ್ತೇನೆ ಇನ್ಯಾರೋ ನಿಲ್ಲುತ್ತಾರೆ ಎಂಬ ಪ್ರಶ್ನೆ ಸದ್ಯಕ್ಕೆ ಇಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ನಾಗಮಂಗಲದಲ್ಲಿ ಗಣೇಶ ಗಲಾಟೆ ವಿಚಾರ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ಬುಧವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಗಣೇಶನ ಗಲಾಟೆ ವಿಷಯದಲ್ಲಿ ಒಂದು ಸಮುದಾಯದ ಓಲೈಕೆಗಾಗಿ ಇನ್ನೊಂದು ಸಮುದಾಯ ಕೈ ಬಿಟ್ಟಿದ್ದಾರೆ. ಮಂಡ್ಯದ ಜನ ಪ್ರಬುದ್ಧರಾಗಿದ್ದು, ಎಲ್ಲವನ್ನೂ ಗಮನಿಸುತ್ತಿದ್ದಾರೆ. ರಾಜ್ಯ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ ಅಂತ ಗೊತ್ತಾಗುತ್ತಿದೆ ಎಂದು ಕಿಡಿಕಾರಿದರು.

ಸರ್ಕಾರ ಹಗರಣದಲ್ಲಿ ನಿರತವಾಗಿದೆ. ಅದನ್ನು ಮುಚ್ಚಿಕೊಳ್ಳಲು ಈ ರೀತಿಯ ಗಲಾಟೆ ಇತ್ಯಾದಿಗಳನ್ನು ನಡೆಸುತ್ತಿದೆ. ಎಂದು ಅವರು ಟೀಕಿಸಿದರು.

ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿ ಕಣಕ್ಕೆ:

ಚನ್ನಪಟ್ಟಣ ಉಪ ಚುನಾವಣೆಗೆ ಸಂಬಂಧಿಸಿದಂತೆ ಸಿ.ಪಿ.ಯೋಗೇಶ್ವರ್‌ ಕೂಡ ಸಭೆಗಳನ್ನು ನಡೆಸುತ್ತಿದ್ದಾರೆ. ನಾವು ಕೂಡ ನಮ್ಮ ಕಾರ್ಯಕರ್ತರ ಜೊತೆ ಸಭೆ ಮಾಡುತ್ತಿದ್ದೇನೆ. ಒಟ್ಟಾರೆಯಾಗಿ ಎನ್.ಡಿ.ಎ ಅಭ್ಯರ್ಥಿ ಕಣಕ್ಕಿಳಿತ್ತಾರೆ. ನಾನು ನಿಲ್ಲುತ್ತೇನೆ ಇನ್ಯಾರೋ ನಿಲ್ಲುತ್ತಾರೆ ಎಂಬ ಪ್ರಶ್ನೆ ಸದ್ಯಕ್ಕೆ ಇಲ್ಲ. ಇನ್ನೂ ಚುನಾವಣೆ ದಿನಾಂಕ ಪ್ರಕಟ ಆಗಿಲ್ಲ. ಒಟ್ಟಾರೆ ಕಾರ್ಯಕರ್ತರ ಭಾವನೆಗೆ ತಕ್ಕಂತೆ ಕೆಲಸ ಮಾಡುತ್ತೇವೆ ಎಂದರು.

ಸರ್ಕಾರದಿಂದ ದ್ವೇಷ ರಾಜಕಾರಣ:

ಮುನಿರತ್ನ ಜಾತಿ ನಿಂದನೆ ಪ್ರಕರಣದ ತನಿಖೆ ಪ್ರಾರಂಭವಾಗಿದೆ. ಎಫ್.ಎಸ್.ಎಲ್. ವರದಿ ಬರಬೇಕಿದೆ ಬಂದ ನಂತರ ಸತ್ಯಾಸತ್ಯತೆ ಹೊರ ಬರುತ್ತದೆ. ಈ ವಿಷಯ ಗಮನಿಸಿದರೆ ರಾಜ್ಯ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ಎಸ್ಐ ಪರಶುರಾಮ ಆತ್ಮಹತ್ಯೆ ಪ್ರಕರಣಕ್ಕೆ ರಾಜ್ಯ ಸರ್ಕಾರ ಯಾವ ರೀತಿ ಕ್ರಮ ಜರುಗಿಸಿದೆ ನೋಡಿದ್ದೇವೆ ಎಂದು ಅವರು ಕಿಡಿಕಾರಿದರು.