ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಪ.ಜಾತಿ, ವರ್ಗದ ಕುಂದು ಕೊರತೆ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕು ಕಚೇರಿಯಲ್ಲಿ ನಡೆದ ಕುಂದು ಕೊರತೆ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಜಮೀನು ಮಂಜೂರು ಮಾಡುವ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಯಿತು.ಗುರುವಾರ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ನೂರುಲ್ ಹುದಾ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರ ಕುಂದು ಕೊರತೆ ಸಭೆಯಲ್ಲಿ ಶೃಂಗೇರಿ ಕ್ಷೇತ್ರದ ವಾಲ್ಮೀಕಿ ಸಂಘದ ಅಧ್ಯಕ್ಷ ವಾಲ್ಮೀಕಿ ಶ್ರೀನಿವಾಸ್ ಮಾತನಾಡಿ, ಬನ್ನೂರು ಗ್ರಾಪಂ ಸ.ನಂ 95 ರಲ್ಲಿ 18 ಜನಕ್ಕೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ಆಗದ ಕಾರಣ ಅರಣ್ಯ ಹಕ್ಕುಪತ್ರ ದೊರೆತಿಲ್ಲ ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ.ನೂರಲ್ ಹುದಾ ಎಸ್.ಐ.ಟಿ ಪರಿಶೀಲನೆ ನಡೆಯುತ್ತಿದ್ದು ವರದಿ ಬಂದ ನಂತರ ಕ್ರಮ ವಹಿಸಲಾಗುವುದು ಎಂದರು. ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಮಂಜುನಾಥ್ ಮಾತನಾಡಿ, ಹಿಂದಿನ ಸಭೆಯಲ್ಲಿ ನಾನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆ ಜಮೀನುಗಳನ್ನು ವಾಪಸ್ಸು ನೀಡಿದ್ದ ಬಗ್ಗೆ ಪ್ರಸ್ತಾಪಿಸಿದ್ದ ಬಗ್ಗೆ ಜಂಟಿ ಸರ್ವೆ ಮಾಡಿಸಿ ಕಂದಾಯ ಜಾಗವನ್ನು ಗುರುತಿಸಿ ಒತ್ತುವರಿ ಮಾಡಿದ ರೈತರಿಗೆ ಹಕ್ಕುಪತ್ರ ನೀಡಬೇಕೆಂದು ಮಾಡಿದ್ದ ಮನವಿ ವಿಚಾರ ಏನಾಗಿದೆ ಎಂದು ಪ್ರಶ್ನಿಸಿದರು.

ತಹಸೀಲ್ದಾರ್ ಉತ್ತರಿಸಿ, ಎಸ್.ಐ.ಟಿ ಪರಿಶೀಲನೆ, ಅರಣ್ಯ ಮತ್ತು ಕಂದಾಯ ಇಲಾಖೆ ಅಡಿ ಜಂಟಿ ಮೋಜಣಿ ಕಾರ್ಯ ಪ್ರಗತಿಯಲ್ಲಿದ್ದು ನಂತರ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಇದಕ್ಕೆ ತೃಪ್ತರಾಗದ ಮಂಜುನಾಥ್ ಎಸ್.ಐಟಿಗೂ, ಜಮೀನು ಮಂಜೂರಾತಿಗೂ ಯಾವುದೇ ಸಂಬಂಧವಿಲ್ಲ. ಅಕ್ರಮ, ಸಕ್ರಮದಡಿ ಸಲ್ಲಿಕೆಯಾದ ಅರ್ಜಿಗಳಿಗೆ ಕಾಯ್ದೆ 64 (ಎ) ಅಡಿ ಅರಣ್ಯ ಇಲಾಖೆ ಒಪ್ಪಿಗೆ ಪಡೆದು ಜಮೀನು ಮಂಜೂರು ಮಾಡಬೇಕೆಂದು ಸರ್ಕಾರ ಎಲ್ಲೂ ಸುತ್ತೋಲೆ ಹೊರಡಿಸಿಲ್ಲ. ಹೊರಡಿಸಿದ್ದರೆ ಸುತ್ತೋಲೆ ಪ್ರತಿ ನೀಡಲು ಆಗ್ರಹಿಸಿದರು.

ಕಂದಾಯ, ಅರಣ್ಯ, ಪಂಚಾಯತ್ ರಾಜ್ ಇಲಾಖೆ ಸೇರಿ ಜಂಟಿ ಸರ್ವೆ ಮಾಡಲಾಗುತ್ತಿದೆ. ಅಲ್ಲದೆ ದಟ್ಟಾರಣ್ಯ, ಡಿಸಿ ಮೀಸಲು ಅರಣ್ಯ ಎಲ್ಲಾ ಸೇರಿ ಸಮೀಕ್ಷೆ ಮಾಡಲಾಗುತ್ತಿದೆ ಎಂದು ತಹಸೀಲ್ದಾರ್ ತಿಳಿಸಿದರು.


ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹಾವು ಕಡಿತಕ್ಕೆ ನೀಡುವ ಔಷಧಿಯಿಲ್ಲದೆ ಸಮಸ್ಯೆಯಾಗಿದೆ ಎಂದು ದಲಿತ ಮುಖಂಡ ಮೃತ್ಯುಂಜಯ ಗಮನಕ್ಕೆ ತಂದರು. ಖಾಲಿ ಇರುವ ಕೃಷಿ ಇಲಾಖೆ ಕಟ್ಟಡದಲ್ಲಿ ದಸಂಸಗೆ ಒಂದು ಕೊಠಡಿ ನೀಡುವಂತೆ ದಲಿತ ಮುಖಂಡ ಎಚ್.ಎಂ.ಶಿವಣ್ಣ ಒತ್ತಾಯಿಸಿದರು.ಸಭೆಗೆ ಹಲವು ಇಲಾಖೆ ಅಧಿಕಾರಿಗಳು ಗೈರು ಹಾಜರಾದ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಇನ್ನು ಮುಂದಿನ ಸಭೆಯಲ್ಲಿ ಆಯಾ ಇಲಾಖೆ ಅಧಿಕಾರಿಗಳು ಹಾಜರಾಗಬೇಕು. ಪ್ರತಿನಿಧಿಗಳನ್ನು ಕಳಿಸುವಂತಿಲ್ಲ. ಇಂದಿನ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಹಸೀಲ್ದಾರ್ ಸೂಚಿಸಿದರು.ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ.ನವೀನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಪಾಟೀಲ್, ಇಲಾಖೆಯ ಕಚೇರಿ ಅಧೀಕ್ಷಕ ನಿರಂಜನ ಮೂರ್ತಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೆಶಕ ರೋಹಿತ್, ‍ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ದಲಿತ ಮುಖಂಡರಾದ ಡಿ.ರಾಮು, ಪಿಕಪ್ ಚಂದ್ರು, ಪವಿತ್ರ, ವಾಲ್ಮೀಕಿ ಸಂಘದ ನಗರ ಘಟಕದ ಅಧ್ಯಕ್ಷ ಮಂಜುನಾಥ್, ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಮತ್ತಿತರರಿದ್ದರು.