ಮುಂಡರಗಿ: ಅಂತರ್ ಜಿಲ್ಲಾ ಕಳ್ಳನನ್ನು ಬಂಧಿಸಿರುವ ಪೊಲೀಸರು ಆತನಿಂದ 7 ಬೈಕ್‌ಗಳನ್ನು ಮುಂಡರಗಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
2026ರ ಮಾ. 18ರಂದು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಮೋಟರ್ ಸೈಕಲ್ ಕಳ್ಳತನ ಪ್ರಕರಣ ದಾಖಲಾಗಿತ್ತು. ಈ ಕಳ್ಳತನ ಪ್ರಕರಣದ ಪತ್ತೆ ಕಾರ್ಯಕ್ಕಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಒಂದು ವಿಶೇಷ ತಂಡ ರಚನೆ ಮಾಡಿದ್ದರು. ನರಗುಂದ ಉಪವಿಭಾಗದ ಡಿಎಸ್ಪಿ ಪ್ರಭುಗೌಡ ಕಿರೇದಳ್ಳಿಯವರ ಮಾರ್ಗದರ್ಶನದಲ್ಲಿ ಮುಂಡರಗಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ಗಳಾದ ಚನ್ನಯ್ಯ ದೇವೂರ, ಬಿ.ಎನ್. ಯಳವತ್ತಿ ಹಾಗೂ ನುರಿತ ಸಿಬ್ಬಂದಿ ಮಾ. 20ರಂದು ಆರೋಪಿದ ರವಿ ಪರಶುರಾಮ ಕೂಕನೂರ(34) ಎಂಬಾತನ್ನು ಬಂಧಿಸಿ ಆರೋಪಿಯಿಂದ 7 ಮೋಟಾರ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಪ್ರಕರಣ ಭೇದಿಸಿದ ಮುಂಡರಗಿ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್‌ಗಳಾದ ಚನ್ನಯ್ಯ ದೇವೂರ, ಬಿ.ಎನ್. ಯಳವತ್ತಿ ಮತ್ತು ಸಿಬ್ಬಂದಿಗಳಾದ ಜೆ.ಐ. ಬಚ್ಚೇರಿ, ಅಶೋಕ ಬೂದಿಹಾಳ, ಮಂಜುನಾಥ ಅಗಸಿಮನಿ, ಮಹೇಶ ಗೋಳಗೊಳಕಿ, ವಿನಾಯಕ ಬಾಲರೆಡ್ಡಿ, ನಾಗರಾಜ ಹರಪನಹಳ್ಳಿ, ಶರಣಪ್ಪ ಓಜನಹಳ್ಳಿ, ನಿಂಗಪ್ಪ ಪೂಜಾರ, ಪರಶುರಾಮ ಧಾರವಾಡ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅಭಿನಂದಿಸಿ ಬಹುಮಾನ ಘೋಷಿಸಿದ್ದಾರೆ.
ಗದಗ ಜಿಲ್ಲಾದ್ಯಂತ ಮಳೆ ಅಬ್ಬರ
ಗದಗ: ಜಿಲ್ಲಾದ್ಯಂತ ಮಂಗಳವಾರ ಮಧ್ಯಾಹ್ನ ಹಾಗೂ ಸಂಜೆ ಬಿರುಗಾಳಿ ಸಮೇತ ಉತ್ತಮ ಮಳೆಯಾಗಿದೆ. ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಉತ್ತಮ ಮಳೆ ಸುರಿದಿದೆ.ಮುಂಡರಗಿ ಪಟ್ಟಣ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದ್ದು, ವಾತಾವರಣ ಸಂಪೂರ್ಣ ತಂಪಾಗಿದೆ.ನರಗುಂದ ತಾಲೂಕಿನಲ್ಲಿ ಆರಂಭದಲ್ಲಿ ದಟ್ಟವಾದ ಮೋಡ ಕವಿದ ವಾತಾವರಣವಿತ್ತು. ನಂತರ ಗುಡುಗು ಸಹಿತ ಜೋರಾಗಿ ಮಳೆ ಸುರಿಯಲು ಪ್ರಾರಂಭವಾಗಿದೆ. ಇದರಿಂದಾಗಿ ರಸ್ತೆಗಳ ಮೇಲೆಲ್ಲ ನೀರು ಹರಿಯುತ್ತಿದ್ದು, ಮಳೆಯಿಂದಾಗಿ ರೈತಾಪಿ ವರ್ಗದಲ್ಲಿ ಹರ್ಷ ಮೂಡಿದೆ.
ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಸಣ್ಣದಾಗಿ ಮಳೆ ಆರಂಭವಾಗಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ತಾಲೂಕಿನ ಹಲವೆಡೆ ಮೋಡಕವಿದ ವಾತಾವರಣ ಮುಂದುವರಿದಿದೆ. ಗಜೇಂದ್ರಗಡ ಮತ್ತು ಶಿರಹಟ್ಟಿ ಭಾಗಗಳಲ್ಲಿ ಮಧ್ಯಾಹ್ನದಿಂದಲೇ ದಟ್ಟವಾದ ಮೋಡ ಕವಿದಿತ್ತು.