ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾನುವಾರ ಬೆಳಗ್ಗೆ 9 ರಿಂದ 10ರವರೆಗೆ ಭದ್ರಾವತಿ ತಾಲೂಕಿನ ಬಾರಂದೂರಿನಿಂದ ಶಿವಮೊಗ್ಗ ತಾಲೂಕಿನ ಗಡಿ ಗ್ರಾಮ ಮಡಿಕೆ ಚೀಲೂರುವರೆಗೆ ಮಾನವ ಸರಪಳಿ ರಚನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.ಈ ಬೃಹತ್ ಮಾನವ ಸರಪಳಿ ನಿರ್ಮಾಣದಲ್ಲಿ ಜಿಲ್ಲೆಯ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರು, ನೌಕರರು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿದರು.
ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಗಣ್ಯರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂವಿಧಾನ ಪೀಠಿಕೆಯನ್ನು ವಾಚಿಸಿದರು.ಈ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಸಮಬಾಳು, ಸಮಾನತೆ, ಭ್ರಾತೃತ್ವದ ಸಂಕೇತವಾಗಿರುವ ಈ ಕಾರ್ಯಕ್ರಮ ಭಾರತದ ಪ್ರಜೆಯಾಗಿರುವ ಎಲ್ಲರಿಗೂ ಹೆಮ್ಮೆ ಎನಿಸಲಿದೆ. ಮತ ಜಾತಿ, ಭಾಷೆಗಳ ಭೇದವಿಲ್ಲದೆ, ಜಾತ್ಯತೀತವಾಗಿ ಎಲ್ಲರೂ ಕೈ ಹಿಡಿದು ಮಾನವ ಸರಪಳಿ ರಚನೆ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಅತ್ಯಂತ ಹರ್ಷದ ಸಂಗತಿ ಎಂದರು.
ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಸಂವಿಧಾನ ಹೊಂದಿರುವ ದೇಶ ನಮ್ಮದು ಸಂವಿಧಾನದ ಮೌಲ್ಯ ಗಳನ್ನು ಎತ್ತಿಹಿಡಿದು ಸಾಕಾರಗೊಳಿಸಬೇಕಾದುದು ಹಾಗೂ ಸಂವಿಧಾನ ದತ್ತವಾಗಿರುವ ಹಕ್ಕುಗಳನ್ನು ಬಳಸಿಕೊಳ್ಳುವಂತೆ ಯೇ ಕರ್ತವ್ಯಗಳನ್ನು ಮರೆಯಬಾರದು ಎಂದು ಹೇಳಿದರು.ರಸಋಷಿ ಕುವೆಂಪು ಅವರು ನಾಡಿಗೆ ನೀಡಿದ ಸಂದೇಶದಂತೆ ಈ ದೇಶದಲ್ಲೂ ವಾಸಿಸುವ ಎಲ್ಲರಿಗೂ ಈ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿರಲಿ ಎಂದು ಆಶಿಸುತ್ತೇನೆ ಎಂದ ಅವರು ಭಾಗವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಅಂಗವಾಗಿ ಮಾರ್ಗ ಮಧ್ಯದ ಸುಮಾರು 20ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಸಭಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹಲವಾರು ಕಲಾತಂಡಗಳು ಹಾಗೂ ವಿವಿಧತೆಯಲ್ಲಿ ಏಕತೆಯನ್ನು ಸಾರುವ ವೇಷ ಭೂಷಣಗಳೊಂದಿಗೆ ಸಾರ್ವಜನಿಕರು ಭಾಗವಹಿಸಿದ್ದರು. ನೆರೆದಿದ್ದವರು ಘೋಷಣೆ ಕೂಗಿ ಸಂಭ್ರಮಿಸಿದರು. ನಂತರ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾದರು.ಐತಿಹಾಸಿಕ ದಾಖಲೆ:
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್‌ನಿಂದ ಚಾಮರಾಜನಗರದವರೆಗೆ ಒಟ್ಟು 2500 ಕಿ.ಮೀ.ಗಳ ಹಾಗೂ ಜಿಲ್ಲೆಯಲ್ಲಿ 60 ಕಿ.ಮೀ. ಮಾನವ ಸರಪಳಿ ರಚನೆ ಮಾಡುತ್ತಿರುವುದು ಐತಿಹಾಸಿಕ ದಾಖಲೆಯಾಗಿದೆ. ಈ ಘಟನೆ ಇತಿಹಾಸದ ಪುಟಗಳಲ್ಲಿ ಸೇರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಎಂದರು.ಜಿಲ್ಲಾಧಿಕಾರಿ ಕಚೇರಿ ಆಭರಣದಲ್ಲಿ ನಡೆದಾದ ಈ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಬಲ್ಕಿಶ್ ಬಾನು, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಪಂ ಸಿಇಒ ಎನ್.ಹೇಮಂತ್ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ಯಲ್ಲಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ
ಶಿವಮೊಗ್ಗ: ಮಾನವೀಯ ಮೌಲ್ಯಗಳ ನಿಧಿಯಾದ ಪ್ರಜಾಪ್ರಭುತ್ವ ವ್ಯವಸ್ಥೆ ಮಾನವರೆಲ್ಲರೂ ಒಂದೇ ಎಂಬುದನ್ನು ಸಾರುತ್ತದೆ. ಸರ್ವರೂ ಸಮಾನರು ಎಂಬ ಅರಿವೇ ಪ್ರಜಾಪ್ರಭುತ್ವದ ತಳಹದಿ. ಪ್ರಜಾಪ್ರಭುತ್ವವನ್ನು ವಿಶ್ವಸಂಸ್ಥೆ ಅತ್ಯಂತ ಶ್ರೇಷ್ಠ ಮೌಲ್ಯವೆಂದು ಪರಿಗಣಿಸಿದೆ. ಪ್ರಜಾಪ್ರಭುತ್ವ ಆದರ್ಶವಾದ ಸಾರ್ವತ್ರಿಕ ಮೌಲ್ಯ ಎಂದು ಕುವೆಂಪು ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು ಅಭಿಪ್ರಾಯಪಟ್ಟರು.ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಬಹುದೊಡ್ಡ ತತ್ವಜ್ಞಾನಿ. ಅವರು ಇಲ್ಲದಿದ್ದರೆ ಈ ದೇಶ ಉಳಿಯುತ್ತಿರಲಿಲ್ಲ. ಅವರಿಂದ ರಚನೆಯಾದ ಸಂವಿಧಾನವೇ ಒಂದು ಕ್ರಾಂತಿ ಕಾರಕ ದಾಖಲೆ. ಆಧುನಿಕತೆಯನ್ನು ತಂದುಕೊಟ್ಟ ಮಹಾವ್ಯಕ್ತಿ. ಅಂಬೇಡ್ಕರ್ ಅವರ ‘ಜಾತಿವಿನಾಶ’ ಕೃತಿಯನ್ನು ಎಲ್ಲರೂ ಕಡ್ಡಾಯವಾಗಿ ಓದಬೇಕೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಭಾರತ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದವರಿಗೆಲ್ಲ ನೆನಪಿನ ಕಾಣಿಕೆಯಾಗಿ ‘ಪೆನ್ನು’ಗಳನ್ನು ವಿತರಿಸಿದರು.
ಶಿಕ್ಷಣ ನಿಕಾಯದ ಡೀನರು, ಶಿಕ್ಷಣ ವಿಭಾಗದ ಮುಖ್ಯಸ್ಥರು ಅದ ಪ್ರೊ. ಜಗನ್ನಾಥ್ ಕೆ. ಡಾಂಗೆ, ಅವರು ಉಪಸ್ಥಿತರಿದ್ದರು. ಡಾ. ಬಿ.ಅರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ‘ಪ್ರಜಾಪ್ರಭುತ್ವ’ ವ್ಯವಸ್ಥೆ ಬೆಳೆದು ಬಂದ ಬಗೆಯನ್ನು ಪರಿಚಯಿಸಿ, ವಂದಿಸಿದರು. ಪಾಂಡುರವರು ಪ್ರಾರ್ಥಿಸಿದರು. ಸಂದೀಪ್ ಸ್ವಾಗತಿಸಿದರು. ಎಂ.ಸಂಪತ್‌ಕುಮಾರ್ ನಿರೂಪಿಸಿದರು. ಡಾ. ಗೋವಿಂದರಾಜ್, ಡಾ. ಎಂ.ರವಿಕುಮಾರ್, ಡಾ. ಎನ್.ಬಿ. ತಿಪ್ಪೇಸ್ವಾಮಿ, ಡಾ. ಅಶೋಕ್ ಲಮಾಣಿ ಮತ್ತಿತರರು ಇದ್ದರು.