ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (ಬಿಡಬ್ಲ್ಯುಬಿಎಸ್‌ಎಸ್‌ಬಿ) ದೀರ್ಘ ಕಾಲದಿಂದ ನೀನ ಬಿಲ್‌ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ರಾಜಧಾನಿಯ ಗ್ರಾಹಕರಿಗೆ ರಾಜ್ಯ ಸರ್ಕಾರ ಸಹಿ ಸುದ್ದಿ ನೀಡಿದ್ದು, ಒಂದೇ ಬಾರಿಗೆ ಬಾಕಿ ಬಿಲ್‌ ಮೊತ್ತವನ್ನು ಪಾವತಿಸಿದರೆ ಬಡ್ಡಿ, ದಂಡ ಮತ್ತು ಇತರೆ ಶುಲ್ಕಗಳು ಮನ್ನಾ ಆಗಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ(ಬಿಡಬ್ಲ್ಯುಬಿಎಸ್‌ಎಸ್‌ಬಿ) ದೀರ್ಘ ಕಾಲದಿಂದ ನೀನ ಬಿಲ್‌ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ರಾಜಧಾನಿಯ ಗ್ರಾಹಕರಿಗೆ ರಾಜ್ಯ ಸರ್ಕಾರ ಸಹಿ ಸುದ್ದಿ ನೀಡಿದ್ದು, ಒಂದೇ ಬಾರಿಗೆ ಬಾಕಿ ಬಿಲ್‌ ಮೊತ್ತವನ್ನು ಪಾವತಿಸಿದರೆ ಬಡ್ಡಿ, ದಂಡ ಮತ್ತು ಇತರೆ ಶುಲ್ಕಗಳು ಮನ್ನಾ ಆಗಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಮಹತ್ವದ ನಿರ್ಧಾರ ಮಾಡಲಾಗಿದೆ.

ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌ ಈ ಕುರಿತು ಮಾಹಿತಿ ನೀಡಿದರು. ನೀರಿನ ಬಿಲ್‌ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಬಡ್ಡಿ, ದಂಡದ ಹೊರೆಯಿಂದ ಮುಕ್ತಿ ನೀಡಲು ಬೆಂಗಳೂರು ನೀರು ಸರಬರಾಜು ನಿಯಮಾವಳಿಗಳು-1965ನ್ನು ಸಡಿಲಿಸಲಾಗಿದೆ ಎಂದರು. ಗ್ರಾಹಕರು ಬಾಕಿ ಬಿಲ್‌ನ ಅಸಲು ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿದರೆ(ಒಟಿಎಸ್‌) ಆ ಮೊತ್ತದ ಮೇಲೆ ಇದುವರೆಗೂ ಆಗಿರುವ ಬಡ್ಡಿ, ದಂಡ ಮತ್ತು ಇತರೆ ಶುಲ್ಕಗಳನ್ನು ಶೇ.100 ರಷ್ಟು ಮನ್ನಾ ಮಾಡಲಾಗುತ್ತದೆ. ಇದು 3 ತಿಂಗಳ ಅವಧಿಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಜಲಮಂಡಳಿಯ ಅಂಕಿ ಅಂಶಗಳ ಪ್ರಕಾರ, 2025ರ ಫೆಬ್ರವರಿ ಅಂತ್ಯದವರೆಗೆ ಗ್ರಾಹಕರಿಂದ ಮಂಡಳಿಗೆ ಬರಬೇಕಿರುವ ಒಟ್ಟು ಬಾಕಿ ಮೊತ್ತ ಬರೋಬ್ಬರಿ 701.71 ಕೋಟಿ ರು. ಗಳಷ್ಟಿದೆ. ಇದರಲ್ಲಿ 439.03 ಕೋಟಿ ರು. ಗ್ರಾಹಕರು ಬಳಸಿದ ನೀರಿಗೆ ಪಾವತಿಸಬೇಕಾದ ಮೊತ್ತ. ಉಳಿದ 262.68 ಕೋಟಿ ರು. ಬಾಕಿ ನೀರಿನ ಬಿಲ್‌ ಮೊತ್ತದ ಮೇಲೆ ವಿಧಿಸಿರುವ ಬಡ್ಡಿ ಹಾಗೂ ದಂಡದ ಮೊತ್ತವಾಗಿದೆ ಎಂದು ವಿವರಿಸಿದರು,.

ಕೇವಲ ಸಾರ್ವಜನಿಕ ಗ್ರಾಹಕರು ಮಾತ್ರವಲ್ಲದೆ, ಸರ್ಕಾರದ ವಿವಿಧ ಇಲಾಖೆಗಳೂ ಜಲಮಂಡಳಿಗೆ ನೀರಿನ ಬಿಲ್ ಪಾವತಿಸುವುದು ಬಾಕಿಯಿದೆ. ಈ ಯೋಜನೆಯ ಅಡಿಯಲ್ಲಿ ಸರ್ಕಾರಿ ಇಲಾಖೆಗಳ ಬಾಕಿ ಮೊತ್ತವನ್ನೂ ಲೆಕ್ಕಪತ್ರದಲ್ಲಿ ಸಮನ್ವಯಗೊಳಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ಯೋಜನೆಯನ್ನು ಜಾರಿಗೊಳಿಸುವುದರಿಂದ ಜಲಮಂಡಳಿಗೆ ತುರ್ತಾಗಿ ಅಗತ್ಯವಿರುವ ಆರ್ಥಿಕ ಸಂಪನ್ಮೂಲ ಕ್ರೋಢೀಕರಣವಾಗಲಿದೆ ಎಂದರು.ತ್ಯಾಜ್ಯ ನಿರ್ವಹಣೆಗೆ 100 ಕೋಟಿ ಪ್ಯಾಕೇಜಿಂಗ್‌ ಕಾಮಗಾರಿ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಮರ್ಪಕವಾಗಿ ನಿರ್ವಹಣೆಗಾಗಿ ಆಪರೇಷನ್‌ ಅಂಡ್‌ ಮೈಂಟೆನಿನ್ಸ್‌ ಆಫ್‌ ಲ್ಯಾಂಡ್‌ ಫಿಲ್‌ ಸೈಟ್ಸ್‌ ಪ್ಯಾಕೇಜಿನ ಕಾಮಗಾರಿಗಳನ್ನು 100 ಕೋಟಿ ರು. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ(ಬಿಎಸ್‌ಡಬ್ಲ್ಯುಎಂಎಲ್‌) ಮೂಲಕ ಜಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಈ ಯೋಜನೆಯನ್ನು ಕೆಟಿಪಿಪಿ ಕಾಯ್ದೆ 1999 ಮತ್ತು ಕೆಟಿಪಿಪಿ ನಿಯಮಾವಳಿಗಳು 200ರಂತೆ ಟೆಂಡರ್‌ ಮೂಲಕ ಸರ್ಕಾರದ ಆದೇಶಾನುಸಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಅಲ್ಲದೆ, ತ್ಯಾಜ್ಯ ವಿಲೇವಾರಿಗೂ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ ಪ್ರಕಾರವೂ ಕಾಮಾರಿಗಳನ್ನು ವಿಂಗಡಿಸಲು ನಿರ್ಧರಿಸಲಾಗಿದೆ.