ಪತ್ರಿಕೆಗಳಲ್ಲಿ ಮಹಾತ್ಮ ಗಾಂಧೀಜಿ ಕುರಿತು ಬಿಜೆಪಿ ನೀಡಿರುವ ಜಾಹಿರಾತಿನ ವಿರುದ್ಧ ಕಾಂಗ್ರೆಸ್ ಆರೋಪ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಅವರು, ಜಾಹಿರಾತನ್ನು ಕಾಂಗ್ರೆಸ್‌ನವರು ನೀಡಿದ್ದಕ್ಕೆ ಏನು ಹೇಳುತ್ತಾರೆ. ಅಹಿಂಸೆಯ ಮೇಲೆ ನಂಬಿಕೆ ಇಟ್ಟಿದ್ದ ಗಾಂಧೀಜಿ ಬೇಜಾರಾಗಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗದಗ: ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ನಿರಂತರ ಓಲೈಕೆ ರಾಜಕಾರಣ ಮಾಡುತ್ತ ಬಂದಿದ್ದು, ಹಿಂದುಳಿದವರು, ಬಡವರು, ರೈತರ ಸಾಲದ ಬಡ್ಡಿ ಮನ್ನಾ ಮಾಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಆತ್ಮಹತ್ಯೆಗೆ ಸರಿಯಾಗಿ ಪರಿಹಾರ ಕೊಡುತ್ತಿಲ್ಲ. ಬೆಳೆವಿಮೆ ನೀಡುತ್ತಿಲ್ಲ. ಶೇ. 80ರಷ್ಟು ರೈತರು ಸಂಕಷ್ಟದಲ್ಲಿದ್ದಾರೆ. ಜನವಿರೋಧಿ ನೀತಿಯನ್ನು ಈ ಸರ್ಕಾರ ಮಾಡುತ್ತಿದೆ ಎಂದ ಅವರು, ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಸಲು ಮುಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಪ್ರಗತಿಪರ ರಾಜ್ಯ. ಐಟಿ, ಬಿಟಿ ರಾಜ್ಯ. ಇದನ್ನು ಮತ್ತೆ ಪ್ರಾಚೀನತೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಚುನಾವಣಾ ಆಯೋಗವು ಹ್ಯಾಕ್ ಮಾಡುವ ಬಗ್ಗೆ ತೋರಿಸಿ ಎಂದು ಕರೆದರೂ ಕಾಂಗ್ರೆಸ್ಸಿಗರು ಭಾಗವಹಿಸುತ್ತಿಲ್ಲ.‌ ಕಾಂಗ್ರೆಸ್‌ ಸರ್ಕಾರದ ನಡೆಯನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ. ಮೊದಲು ಕಾಂಗ್ರೆಸ್‌ನವರು ರಾಜೀನಾಮೆ ನೀಡಿ ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.ಪತ್ರಿಕೆಗಳಲ್ಲಿ ಮಹಾತ್ಮ ಗಾಂಧೀಜಿ ಕುರಿತು ಬಿಜೆಪಿ ನೀಡಿರುವ ಜಾಹಿರಾತಿನ ವಿರುದ್ಧ ಕಾಂಗ್ರೆಸ್ ಆರೋಪ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಅವರು, ಜಾಹಿರಾತನ್ನು ಕಾಂಗ್ರೆಸ್‌ನವರು ನೀಡಿದ್ದಕ್ಕೆ ಏನು ಹೇಳುತ್ತಾರೆ. ಅಹಿಂಸೆಯ ಮೇಲೆ ನಂಬಿಕೆ ಇಟ್ಟಿದ್ದ ಗಾಂಧೀಜಿ ಬೇಜಾರಾಗಿದ್ದಾರೆ ಎಂದರು.

ನಾಯಕತ್ವ ಬದಲಾವಣೆಯ ಗೊಂದಲ ಕುರಿತು ಪ್ರತಿಕ್ರಿಯಿಸಿದ ಅವರು, ಯತೀಂದ್ರ ಅವರು ಯಾಕೆ ಹೇಳುತ್ತಾರೊ ಗೊತ್ತಿಲ್ಲ. ಸಿಎಂ ಹಲವಾರು ಬಾರಿ ಹೇಳಿದರೂ ಅವರ ಮಗನೇ ಸರ್ಟಿಫಿಕೆಟ್ ಕೊಡುತ್ತಿದ್ದಾರೆ‌. ಮಗನ ಸರ್ಟಿಫಿಕೆಟ್ ಇಟ್ಟುಕೊಂಡು ರಾಜ್ಯ ಆಳುವ ಅಗತ್ಯ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಏನು ಮಾಡುತ್ತಿದೆ ಎಂಬುದು ತಿಳಿಯುತ್ತಿಲ್ಲ. ಕೂಡಲೇ ನಾಟಕ ಬಂದ್ ಮಾಡಿ ರಾಜ್ಯದ ಅಭಿವೃದ್ಧಿ ಕಡೆ ಸರ್ಕಾರ ಗಮನ ಕೊಡಲಿ ಎಂದರು.ಗದಗನಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಿಸುವ ಕುರಿತು, ನಾನು ಮಾನವ ಸಂಪನ್ಮೂಲ ಸಚಿವರ ಜತೆಗೆ ಮಾತನಾಡಿದ್ದೇನೆ. ಜಾಗದ ಸಮಸ್ಯೆ ಪರಿಹರಿಸಿ ಕಳುಹಿಸಿದರೆ ಬರುವ ಶೈಕ್ಷಣಿಕ ವರ್ಷದಲ್ಲಿ ಕೇಂದ್ರಿಯ ವಿದ್ಯಾಲಯ ಆರಂಭಿಸುವುದಾಗಿ ಹೇಳಿದ್ದಾರೆ ಎಂದರು.

ಲಕ್ಕುಂಡಿಯಲ್ಲಿ ಉತ್ಖನನ ನಡೆಸುತ್ತಿರುವ ಕುರಿತು, ಉತ್ಖನನ ಈ ಹಿಂದೆ ನಡೆದಿದ್ದರಿಂದ ಪ್ರಸಿದ್ಧಿಗೆ ಬಂದಿದೆ. ಈಗ ಊಹಾಪೋಹ ಕೇಳಿ ಬರುತ್ತಿವೆ. ಅದು ಏನಾಗುತ್ತದೆ ಗೊತ್ತಿಲ್ಲ. ಲಕ್ಕುಂಡಿಯನ್ನು ಯುನೆಸ್ಕೊಗೆ ಸೇರಿಸುವ ಪ್ರಯತ್ನ ಒಳ್ಳೆಯದು. ಅದು ಸೇರಿದರೆ ಪ್ರವಾಸೋದ್ಯಮ ದೃಷ್ಟಿಯಿಂದ ಅನುಕೂಲ ಆಗುತ್ತದೆ ಎಂದರು. ಮೆಟ್ರೊ ದರ ಏರಿಕೆ ವಾಪಸ್ ಪಡೆಯಲಿ: ಮೆಟ್ರೊ ದರ ಏರಿಕೆ ಕೇಂದ್ರಕ್ಕೆ ಸಂಬಂಧ ಇಲ್ಲ. ಅದು ಒಂದು ಕಂಪನಿ. ಇದರ ಎಂಡಿ ಅಂತಿಮ ತೀರ್ಮಾನ ಮಾಡುತ್ತಾರೆ. ರಾಜ್ಯ ಸರ್ಕಾರ ಹೆಚ್ಚಳ ಮಾಡಿರುವ ತೀರ್ಮಾನವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.