ಯೋಜನಾ ಖಾತೆಯ ಮೇಲೂ ಆಸಕ್ತಿ ಇದೆ. ಆದರೆ ಖಾತೆ ಹಂಚಿಕೆ ಸಂಪೂರ್ಣವಾಗಿ ಮುಖ್ಯಮಂತ್ರಿ ಮತ್ತು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟ ವಿಚಾರವಾಗಿದೆ

ಕೊಪ್ಪಳ: ನನಗೆ ಹಣಕಾಸು ಖಾತೆ ಕೊಟ್ಟರೆ ರಾಜ್ಯದಲ್ಲಿ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡುವೆ. ವರ್ಗಾವಣೆ ಸೇರಿದಂತೆ ಇನ್ನಿತರ ವಿಚಾರ ಬೇಕಾದರೆ ಸಿಎಂ ನೋಡಿಕೊಳ್ಳಲಿ ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನಾ ಖಾತೆಯ ಮೇಲೂ ಆಸಕ್ತಿ ಇದೆ. ಆದರೆ ಖಾತೆ ಹಂಚಿಕೆ ಸಂಪೂರ್ಣವಾಗಿ ಮುಖ್ಯಮಂತ್ರಿ ಮತ್ತು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟ ವಿಚಾರವಾಗಿದೆ. ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಕಾಂಗ್ರೆಸ್ ಪಕ್ಷವಿಲ್ಲ. ಆದರೆ, ವಿಪ ಸಭಾಪತಿ ಸ್ಥಾನಕ್ಕೆ ಪಕ್ಷದಲ್ಲಿ ಹಲವು ಆಕಾಂಕ್ಷಿಗಳಿರುವ ಕಾರಣ ಆ ಸ್ಥಾನಕ್ಕೆ ಬೇಡಿಕೆ ಬಂದಿದೆ.

ಸಚಿವ ಸ್ಥಾನಕ್ಕೆ ಸೂಟಕೇಸ್ ವ್ಯವಹಾರ ನಡೆದಿದೆ ಎನ್ನುವ ಆರೋಪದ ಕುರಿತು ಶಾಸಕರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕುರಿತು ಪ್ರತಿಕ್ರಿಯಿಸಿದ ರಾಯರಡ್ಡಿ, ಇತ್ತೀಚಿನ ದಿನಗಳಲ್ಲಿ ಎಐ ಮೂಲಕವೂ ಆಡಿಯೋ-ವಿಡಿಯೋ ಸೃಷ್ಟಿಸಬಹುದು. ಕೆಲವರು ಭಾವನಾತ್ಮಕವಾಗಿ ಮಾತನಾಡಿರಬಹುದು ಎಂದರು.

ಇನ್ನೂ ಸಚಿವ ಬಿ.ನಾಗೇಂದ್ರ ರಾಜಿನಾಮೆ ಕೇಳುತ್ತಿರುವುದು ಸರಿಯಲ್ಲ. ಅವರ ವಿರುದ್ಧ ಆರೋಪಗಳಿದ್ದರೂ ಅಪರಾಧಿ ಎಂದು ಸಾಬೀತಾಗಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದ್ದು, ಅವರನ್ನು ಸಚಿವರನ್ನಾಗಿ ಮಾಡಿರುವುದರಲ್ಲಿ ತಪ್ಪಿಲ್ಲ. ಅಲ್ಲದೆ ಸಿ.ಟಿ. ರವಿ ಸೇರಿದಂತೆ ಅನೇಕ ಬಿಜೆಪಿ ನಾಯಕರ ಮೇಲೆ ಪ್ರಕರಣ ದಾಖಲಾಗಿವೆ ಎಂದು ಹೇಳಿದರು.

ಸಚಿವ ಸ್ಥಾನ ಸಿಗದ ಹಿನ್ನೆಲೆ ಕೆಲ ಶಾಸಕರ ಅಸಮಾಧಾನ ಸಹಜ. ಕೋಲಾರ ಸೇರಿದಂತೆ ಕೆಲವೆಡೆ ಭಾವನಾತ್ಮಕವಾಗಿ ಪ್ರತಿಭಟನೆ ನಡೆದಿದ್ದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ರಣದೀಪ್ ಸಿಂಗ ಸುರ್ಜೇವಾಲಾ ಎರಡು ದಿನಗಳಲ್ಲಿ ಎಲ್ಲವನ್ನು ಸರಿಪಡಿಸುತ್ತಾರೆ.

ನಾಳೆಯಿಂದ ಮೂರು ದಿನಗಳ ಕಾಲ ಗದಗ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸುವುದಾಗಿ ತಿಳಿಸಿದ ಅವರು, ರಾಜ್ಯದ ೧೮೧ ತಾಲೂಕುಗಳ ಬರ ಪರಿಸ್ಥಿತಿ ಅಧ್ಯಯನಕ್ಕೆ ಎಲ್ಲ ಸಚಿವರನ್ನು ನಿಯೋಜಿಸಲಾಗಿದೆ ಎಂದರು. ಕೊಪ್ಪಳ ಜಿಲ್ಲೆಗೆ ಇಬ್ಬರು ಸಚಿವರನ್ನು ನೀಡಿರುವುದರಿಂದ ಜನರ ನಿರೀಕ್ಷೆಗೆ ತಕ್ಕಂತೆ ಶಾಸಕರ ಸಹಕಾರದೊಂದಿಗೆ ಸರ್ಕಾರದ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಗೊಳಿಸುವುದಾಗಿ ಹೇಳಿದರು.

ರಾಘವೇಂದ್ರ ಹಿಟ್ನಾಳಗೆ ಸಚಿವ ಸ್ಥಾನ ನೀಡುವಂತೆ ತಾವು ಸಹ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದೆ. ಹಿಟ್ನಾಳ್ ಪರ ರಾಜಿನಾಮೆ ನೀಡಿರುವ ಕಾರ್ಯಕರ್ತರು ರಾಜಿನಾಮೆ ಹಿಂಪಡೆದು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ನಾನು ಸಚಿವನಾದರೆ ಹಿಟ್ನಾಳ್ ಸಚಿವನಾದಂತೆ ಎಂದು ಹೇಳಿದರು.